ಕರ್ನಾಟಕ

ಬೆಂಕಿಯಿಂದ ಅರಮನೆ ರಕ್ಷಣೆ ಕಷ್ಟ; ಅಗ್ನಿಶಾಮಕ ಪಡೆಯಲ್ಲಿ ಸಿಬ್ಬಂದಿ ಕೊರತೆ, ಅರಮನೆ ಆಡಳಿತ ಮಂಡಳಿಯ ಅಸಹಕಾರ

Pinterest LinkedIn Tumblr

Palace-1ಮೈಸೂರು: ಇಲ್ಲಿನ ಐತಿಹಾಸಿಕ ಅಂಬಾವಿಲಾಸ ಅರಮನೆಯಲ್ಲಿ ಬೆಂಕಿ ಅವಘಡಗಳು ಸಂಭವಿಸಿದರೆ ಅದನ್ನು ನಿಭಾಯಿಸುವುದು ಜಿಲ್ಲಾ ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳಿಗೆ ದೊಡ್ಡ ಸವಾಲಾಗಿದೆ.

ಒಂದೆಡೆ ಸಿಬ್ಬಂದಿ ಕೊರತೆ; ಮತ್ತೊಂದೆಡೆ ಅರಮನೆ ಆಡಳಿತ ಮಂಡಳಿಯ ಉದಾಸೀನ ಧೋರಣೆ ಸಮಸ್ಯೆಯ ತೀವ್ರತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಬೆಂಕಿ ಕಾಣಿಸಿಕೊಂಡರೆ ಅದನ್ನು ನಿಯಂತ್ರಣಕ್ಕೆ ತರಲು ಬೇಕಾದ ಸಿಬ್ಬಂದಿ ಅಗ್ನಿಶಾಮಕ ಠಾಣೆಯಲ್ಲಿ ಇಲ್ಲ. ಸದ್ಯ ಇರುವ ಸಿಬ್ಬಂದಿ ಮೂರು ಪಾಳಿಗೆ ಸಾಕಾಗುತ್ತಿಲ್ಲ. ಜಿಲ್ಲೆಯಲ್ಲಿ ಖಾಲಿ ಇರುವ ಒಟ್ಟು 160 ಹುದ್ದೆಗಳ ಪೈಕಿ ನಗರ ಒಂದರಲ್ಲೇ 90 ಹುದ್ದೆಗಳು ಖಾಲಿ ಇವೆ. ಜತೆಗೆ, ಸಂಚಾರದಟ್ಟಣೆಯ ಸಮಯದಲ್ಲಿ ಸರಸ್ವತಿಪುರಂನ ಅಗ್ನಿಶಾಮಕ ಠಾಣೆಯಿಂದ ಅರಮನೆಗೆ ಬರಲು ಕನಿಷ್ಠ 15 ನಿಮಿಷಗಳಾದರೂ ಬೇಕು.

ಅರಮನೆಯಲ್ಲಿರುವುದು 45 ಅಗ್ನಿ ನಂದಕಗಳು! ಅರಮನೆಗೆ ಬೆಂಕಿ ಬಿದ್ದರೆ ಅದನ್ನು ಎದುರಿಸಲು ಬೇಕಾದ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಇಡೀ ಅರಮನೆಗೆ 45 ಅಗ್ನಿ ನಂದಕಗಳು ಇದ್ದು, ಸ್ಮೋಕ್ ಡಿಟೆಕ್ಟರ್‌ಗಳನ್ನು ಅಳವಡಿಸಲಾಗಿದೆ ಎಂದು ಅರಮನೆ ಆಡಳಿತ ಮಂಡಳಿಯ ಉಪನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ ಹೇಳುತ್ತಾರೆ.

ಬೆಂಕಿ ಬೀಳುವ ಸಾಧ್ಯತೆ ಕಡಿಮೆ, ಆದರೆ…? ಒಂದು ಬಾರಿ ಬೆಂಕಿಯಿಂದ ಸುಟ್ಟು ಹೋದ ಅರಮನೆಯನ್ನು ಪುನರ್‌ನಿರ್ಮಾಣ ಮಾಡುವಾಗ 10ನೇ ಚಾಮರಾಜ ಒಡೆಯರ್ ಅವರ ಪತ್ನಿ ವಾಣಿವಿಲಾಸ ಸನ್ನಿಧಾನ ಅವರು ಸೂಕ್ತ ಮುನ್ನಚ್ಚರಿಕೆ ವಹಿಸಿದ್ದಾರೆ. ಶಿಮ್ಲಾ ಅರಮನೆ ಕಟ್ಟಿದ ವಾಸ್ತುಶಿಲ್ಪಿ ಹೆನ್ರಿ ಇರ್ವಿನ್ ಹೊಸ ಅರಮನೆಯ ವಾಸ್ತುಶಿಲ್ಪ ರೂಪಿಸಿದ್ದಾರೆ. ಗೋಡೆಯ ಒಳಗಡೆಯೇ ಪೈಪ್ ಮೂಲಕ ನೀರು ಸರಬರಾಜು ಮಾಡುವ ವ್ಯವಸ್ಥೆ ಇದೆ. ಬೆಂಕಿ ಬಿದ್ದಾಗ ಪೈಪ್‌ನ್ನು ತೆರೆದರೆ ಸಾಕು ಸ್ವಯಂಚಾಲಿತವಾಗಿ ನೀರು ಹೊರಬರುತ್ತದೆ. ಹೀಗಾಗಿ, ಬೆಂಕಿ ಬೀಳುವ ಸಾಧ್ಯತೆಗಳು ಕಡಿಮೆ ಎಂದು ಸುಬ್ರಹ್ಮಣ್ಯ ವಿವರಿಸುತ್ತಾರೆ.

ಆದರೆ, ಇದೀಗ ಅರಮನೆಯಲ್ಲಿ ಒಂದು ಲಕ್ಷಕ್ಕೂ ಮಿಗಿಲಾದ ವಿದ್ಯುತ್ ಬಲ್ಬ್‌ಗಳಿವೆ. ಎಲ್ಲಿಯಾದರೂ ಒಂದು ಕಡೆ ಸಣ್ಣ ಶಾರ್ಟ್ ಸರ್ಕಿಟ್ ಆದರೆ ಅದನ್ನು ನಿಭಾಯಿಸುವ ಕಲೆ ಅರಮನೆ ಸಿಬ್ಬಂದಿಗೆ ಇಲ್ಲ ಎಂದು ಇತಿಹಾಸಕಾರ ಈಚನೂರು ಕುಮಾರ್ ಹೇಳುತ್ತಾರೆ.

‘ಇದು ಅಗ್ನಿ ನಿರೋಧಕ ಅರಮನೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಆಧುನಿಕ ಕಾಲಘಟ್ಟಕ್ಕೆ ತಕ್ಕಂತೆ ಬದಲಾವಣೆ ಅನಿವಾರ್ಯ. ಆಗಿನ ಕಾಲದ ಅಗ್ನಿ ನಂದಕ ವ್ಯವಸ್ಥೆ ಕುರಿತ ತಿಳಿವಳಿಕೆ ಈಗಿನ ಸಿಬ್ಬಂದಿಗೆ ಇರಬೇಕು. ಅದನ್ನು ನಿರ್ವಹಿಸುವ ಕುರಿತು ತರಬೇತಿ ನೀಡುವುದು ಅವಶ್ಯಕ. ಪ್ರತ್ಯೇಕವಾದ ಅಗ್ನಿಶಾಮಕ ದಳ ಇದ್ದರೆ ಒಳಿತು’ ಎಂದು ಅಭಿಪ್ರಾಯಪಡುತ್ತಾರೆ.

ಪ್ರತಿ ವರ್ಷ ಪತ್ರ; ಪರಿಗಣಿಸದ ಆಡಳಿತ ಮಂಡಳಿ: 2013ರಿಂದ ಪ್ರತಿ ವರ್ಷ ಅಗ್ನಿಶಾಮಕ ಇಲಾಖೆಯು ಅರಮನೆ ಆಡಳಿತ ಮಂಡಳಿಗೆ ಪತ್ರ ಬರೆದು ಪ್ರತ್ಯೇಕ ಅಗ್ನಿಶಾಮಕ ದಳವನ್ನು ಹೊಂದುವಂತೆ ಸಲಹೆ ನೀಡುತ್ತಿದೆ. ಆದರೆ, ಈವರೆಗೂ ಆಡಳಿತ ಮಂಡಳಿ ಆಸಕ್ತಿ ತೋರಿಲ್ಲ.

ಇದಕ್ಕೆ ಅಂಥ ಹೆಚ್ಚಿನ ವೆಚ್ಚವೇನೂ ಆಗುವುದಿಲ್ಲ. 24 ಸಿಬ್ಬಂದಿಗೆ ಬೇಕಾಗುವಷ್ಟು ಮೂಲಸೌಕರ್ಯ ಹಾಗೂ ಅಗ್ನಿ ನಂದಕ ಉಪಕರಣಗಳನ್ನು ಒದಗಿಸಿದರೆ ಸಾಕು. ಆದರೆ, ಮೊದಲು ಆಡಳಿತ ಮಂಡಳಿ ಈ ಕುರಿತು ಪ್ರಸ್ತಾವವನ್ನು ಇಲಾಖೆಗೆ ಸಲ್ಲಿಸಬೇಕು ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಗುರುರಾಜ್ ಹೇಳುತ್ತಾರೆ.

ಇತಿಹಾಸ ಪುನರಾವರ್ತನೆ ಆಗುವುದೇ?
1897ರ ಫೆಬ್ರುವರಿ 27ರಂದು 10ನೇ ಚಾಮರಾಜೇಂದ್ರ ಒಡೆಯರ್ ಅವರ ಕಿರಿಯ ಪುತ್ರಿ ಜಯಲಕ್ಷ್ಮಮ್ಮಣ್ಣಿ ಅವರ ಮದುವೆ ಸಂದರ್ಭದಲ್ಲಿ ಹಿಂದೆ ಇದ್ದ ಅರಮನೆಗೆ ಬೆಂಕಿ ಬಿದ್ದಿತು. ಇದನ್ನು ನಂದಿಸಲು ಹೋದ 8 ಮಂದಿ ಪ್ರಾಣ ಕಳೆದುಕೊಂಡರು. 5 ಸಾವಿರಕ್ಕೂ ಹೆಚ್ಚಿನ ಪುಸ್ತಕಗಳಿದ್ದ ಅಮೂಲ್ಯ ಗ್ರಂಥಾಲಯ ಬೆಂಕಿಯ ಕೆನ್ನಾಲಿಗೆಗೆ ಆಹಾರವಾಯಿತು. ಇತಿಹಾಸ ಪುನರಾವರ್ತನೆ ಆದಲ್ಲಿ ಅದನ್ನು ಎದುರಿಸುವ ಸಿದ್ಧತೆ ಇಲ್ಲ.

ಇಲಾಖೆಯಲ್ಲಿ ನೇಮಕಾತಿ ನಡೆಯುತ್ತಿದೆ. ಒಂದೆರಡು ತಿಂಗಳಲ್ಲಿ ಖಾಲಿ ಹುದ್ದೆಗಳಿಗೆ ಸಿಬ್ಬಂದಿಯನ್ನು ನಿಯೋಜಿಸುವ ಸಂಭವವಿದೆ. ಆದರೂ, ಅರಮನೆಗೆ ಪ್ರತ್ಯೇಕ ಅಗ್ನಿಶಾಮಕ ದಳ ರಚಿಸುವ ಅಗತ್ಯ ಇದೆ.
– ಗುರುರಾಜ್, ಜಿಲ್ಲಾ ಅಗ್ನಿಶಾಮಕ ಅಧಿಕಾರಿ

ಎಂತಹುದೇ ಪರಿಸ್ಥಿತಿಯನ್ನು ಎದುರಿಸಲು ಆಡಳಿತ ಮಂಡಳಿ ಸಿದ್ಧವಿದೆ. ನಮ್ಮಲ್ಲಿ ಅಗ್ನಿನಂದಕಗಳು ಇವೆ. ಅಗ್ನಿ ಅನಾಹುತದಂತಹ ಸಾಧ್ಯತೆಗಳು ಕಡಿಮೆ.
– ಎಸ್. ಸುಬ್ರಹ್ಮಣ್ಯ, ಅರಮನೆ ಆಡಳಿತ ಮಂಡಳಿಯ ಉಪನಿರ್ದೇಶಕ

Comments are closed.