ಅಂತರಾಷ್ಟ್ರೀಯ

66 ಜನರಿದ್ದ ಈಜಿಪ್ಟ್‌ಏರ್‌ ವಿಮಾನ ಪತನ

Pinterest LinkedIn Tumblr

EgyptAir-flight_0ಕೈರೊ(ಪಿಟಿಐ): 26 ವಿದೇಶಿಯರು ಸೇರಿದಂತೆ 66 ಪ್ರಯಾಣಿಕರಿದ್ದ ಈಜಿಪ್ಟ್‌ಏರ್‌ ವಿಮಾನ ಪ್ಯಾರಿಸ್‌ನಿಂದ ಕೈರೊಗೆ ಬರುತ್ತಿದ್ದ ವೇಳೆ ಮೆಡಿಟರೇನಿಯನ್‌ ಸಮುದ್ರದಲ್ಲಿ ಗುರುವಾರ ಪತನವಾಗಿದೆ.

ವಿಮಾನ ತಾಂತ್ರಿಕ ದೋಷ ಅಥವಾ ಉಗ್ರರ ದಾಳಿಯಿಂದ ಪತನವಾಗಿರಬಹುದು. ಈಗಲೆ ಯಾವುದನ್ನೂ ಖಚಿತವಾಗಿ ಹೇಳಲಾಗದು ಎಂದು ಈಜಿಪ್ಟ್‌ ಪ್ರಧಾನಿ ಷರೀಫ್‌ ಇಸ್ಮಾಯಿಲ್‌ ಹೇಳಿದ್ದಾರೆ.

ಪ್ಯಾರಿಸ್‌ನಿಂದ ಬುಧವಾರ ಪ್ರಯಾಣ ಬೆಳೆಸಿದ್ದ ಈಜಿಪ್ಟ್‌ಏರ್‌ ವಿಮಾನ804 ಈಜಿಪ್ಟ್‌ನ ವೈಮಾನಿಕ ವಲಯವನ್ನು ಸ್ಥಳೀಯ ಕಾಲಮಾನ ಬೆಳಿಗ್ಗೆ 2.45ಕ್ಕೆ ಪ್ರವೇಶಿಸಿದ ಬಳಿಕ ನಿಯಂತ್ರಣ ಕೇಂದ್ರದ ರೆಡಾರ್‌ನಿಂದ ಸಂಪರ್ಕ ಕಳೆದುಕೊಂಡಿದೆ.

ವಿಮಾನ ಪತನವಾಗಿದ್ದು, ಅವಶೇಷಗಳ ಪತ್ತೆಗೆ ಹುಡುಕಾಟ ನಡೆಯುತ್ತಿದೆ ಎಂದು ವಿಮಾನಯಾನ ಸಂಸ್ಥೆ ಅಧಿಕಾರಿಗಳು ತಿಳಿಸಿದ್ದಾರೆ.

ಒಂದು ಮಗು, ಎರಡು ಶಿಶುಗಳು ಸೇರಿದಂತೆ 56 ಪ್ರಯಾಣಿಕರು ಹಾಗೂ 10 ಸಿಬ್ಬಂದಿ ಇದ್ದ ವಿಮಾನ ಪತನವಾಗಿರುವ ಪ್ರದೇಶದಲ್ಲಿ ಈಜಿಪ್ಟ್‌ ಸೇನಾ ಸಿಬ್ಬಂದಿ ಅವಶೇಷಗಳಿಗಾಗಿ ಹುಡುಕಾಟ ನಡೆಸಿದ್ದಾರೆ.

56 ಪ್ರಯಾಣಿಕರಲ್ಲಿ 30 ಮಂದಿ ಈಜಿಪ್ಟಿಯನ್ನರು, 15 ಜನ ವಿದೇಶಿಯರು, ಇಬ್ಬರು ಇರಾಕ್‌ನ ಹಾಗೂ ಬ್ರಿಟನ್‌, ಬೆಲ್ಜಿಯಂ, ಕುವೈತ್‌, ಸೌದಿ ಅರೇಬಿಯಾ, ಸುಡಾನ್‌, ಚಾಡ್‌, ಪೋರ್ಚುಗಲ್, ಆಲ್ಜೀರಿಯಾ ಮತ್ತು ಕೆನಡಾದ ತಲಾ ಒಬ್ಬ ಪ್ರಯಾಣಿಕರಿದ್ದರು.

ಅವಶೇಷಗಳ ಪತ್ತೆ ಹಾಗೂ ಹುಡುಕಾಟಕ್ಕೆ ಅತ್ಯವಿದ್ದರೆ ಮಿಲಿಟರಿ ವಿಮಾನ ಹಾಗೂ ದೋಣಿಗಳ ನೆರವು ಒದಗಿಸಲಾಗುವುದು ಎಂದು ಪ್ಯಾರಿಸ್‌ನ ವಿದೇಶಾಂಗ ಸಚಿವಾಲಯ ಹೇಳಿದೆ.

ಘಟನೆ ಸಂಬಂಧ ತುರ್ತು ಸಭೆ ನಡೆಸಿರುವ ಫ್ರಾನ್ಸ್‌ ಅಧ್ಯಕ್ಷ ಫ್ರಾನ್ಸಿಸ್‌ ಹೊಲಾಂಡೆ ಅವರು, ಈಜಿಪ್ಟ್‌ನ ಅಧ್ಯಕ್ಷ ಅಬ್ದೆಲ್‌ ಫತ್ತಾಹ್ ಎಲ್‌ ಸಿಸ್ಸಿ ಅವರ ಜತೆ ದೂರವಾಣಿಯಲ್ಲಿ ಮಾತನಾಡಿದ್ದು, ಸಾಧ್ಯವಾದಷ್ಟು ಬೇಗ ಎಲ್ಲಾ ಅಗತ್ಯ ನೆರವು ಹಾಗೂ ಸಹಕಾರವನ್ನು ನೀಡುವುದಾಗಿ ಹೇಳಿದ್ದಾರೆ.

Comments are closed.