ಅಂತರಾಷ್ಟ್ರೀಯ

ಶ್ರೀಲಂಕಾದಲ್ಲಿ ಭಾರಿ ಮಳೆ, ಜನಜೀವನ ಅಸ್ತವ್ಯಸ್ತ; ಭೂಕುಸಿತದಲ್ಲಿ 200ಕ್ಕೂ ಅಧಿಕ ಸಾವು

Pinterest LinkedIn Tumblr

shrilanka

ಕೊಲಂಬೊ (ಪಿಟಿಐ): ಶ್ರೀಲಂಕಾದಲ್ಲಿ ಭಾರಿ ಮಳೆಯಿಂದಾಗಿ ಸಂಭವಿಸಿದ ಭೂಕುಸಿತದಲ್ಲಿ 200ಕ್ಕೂ ಹೆಚ್ಚು ಜನರು ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ಮಳೆಯಾಗುತ್ತಿರುವ ಕಾರಣ ಭೂಕುಸಿತ ಸಂಭವಿಸಿದ್ದು, ಕಟ್ಟಡದ ಅವಶೇಷಗಳ ಅಡಿ ನೂರಾರು ಜನರು ಸಿಲುಕಿರುವ ಸಾಧ್ಯತೆ ಇದೆ. ಆದರೆ, ಈ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ.

ಪ್ರವಾಹ ಮತ್ತು ಭೂಕುಸಿತಕ್ಕೆ ಸಿಲುಕಿ ಕನಿಷ್ಠ 40 ಜನರು ಮೃತಪಟ್ಟಿದ್ದು, ಕಟ್ಟಡದ ಅವಶೇಷಗಳ ಅಡಿ ಸಿಲುಕಿದ್ದ 17 ಮೃತದೇಹಗಳನ್ನು ರಕ್ಷಣಾ ಸಿಬ್ಬಂದಿ ಬುಧವಾರ ಹೊರೆಕ್ಕೆ ತೆಗೆದರು.

‘ಈಶಾನ್ಯ ಕೊಲಂಬೊದ ಪರ್ವತಪ್ರದೇಶದ ಎರಡು ಗ್ರಾಮಗಳಲ್ಲಿ ಭೂಕುಸಿತ ಸಂಭವಿಸಿದ್ದು, 300ಕ್ಕೂ ಹೆಚ್ಚು ಸೇನಾ ಸಿಬ್ಬಂದಿಯನ್ನು ರಕ್ಷಣಾ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ. ಅರನಾಯಕೆ ಗ್ರಾಮದಲ್ಲಿ ಭೂಕುಸಿತದಲ್ಲಿ ಸಿಲುಕಿದವರ ರಕ್ಷಣಾ ಕಾರ್ಯಚರಣೆ ವೇಳೆ 180 ಮಂದಿಯನ್ನು ರಕ್ಷಿಸಲಾಗಿದೆ’ ಎಂದು ಸೇನಾ ವಕ್ತಾರ ಬ್ರಿಗೇಡಿಯರ್‌ಜಯಂತ್‌ಜಯವೀರ ತಿಳಿಸಿದರು.

‘ಸೇನೆ, ಪೊಲೀಸ್‌ಮತ್ತು ವಾಯುಪಡೆ ಸಿಬ್ಬಂದಿ ಕಾಣೆಯಾದವರಿಗಾಗಿ ಹುಡುಕಾಟ ನಡೆಸಿದ್ದಾರೆ. 1,041 ಜನರಿಗೆ ಶಿಬಿರಗಳಲ್ಲಿ ಪುನರ್‌ವಸತಿ ಕಲ್ಪಿಸಲಾಗಿದೆ’ ಎಂದು ಹಿರಿಯ ಅಧಿಕಾರಿ ಶಾ ಫೈಜಲ್‌ಮಾಹಿತಿ ನೀಡಿದ್ದಾರೆ.

ಶ್ರೀಲಂಕಾದ 22 ಜಿಲ್ಲೆಗಳ ಕೆಲವು ಭಾಗಗಳಲ್ಲಿ 200 ಮಿ.ಮೀ.ಕ್ಕಿಂತ ಹೆಚ್ಚು ಮಳೆಯಾಗಿದೆ. ರಾಜಧಾನಿ ಕೊಲಂಬೊ ಸೇರಿದಂತೆ ಇತರೆ ನಗರಗಳು ಪ್ರವಾಹದ ಸಂಕಷ್ಟಕ್ಕೆ ಸಿಲುಕಿವೆ. ಪ್ರತಿಕೂಲ ಹವಾಮಾನದ ಕಾರಣ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

Comments are closed.