ರಾಷ್ಟ್ರೀಯ

ಇಂದು 5 ರಾಜ್ಯಗಳ ಚುನಾವಣೆ ಮತ ಎಣಿಕೆ; ಜಯಾ, ಮಮತಾ, ಚಾಂಡಿ, ಗೊಗೊಯ್ ಭವಿಷ್ಯ ನಿರ್ಧಾರ

Pinterest LinkedIn Tumblr

32

ನವದೆಹಲಿ (ಪಿಟಿಐ): ದೇಶದ ಗಮನ ಸೆಳೆದಿರುವ ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು, ಕೇರಳ ಮತ್ತು ಪುದುಚೇರಿ ವಿಧಾನಸಭಾ ಚುನಾವಣೆ ಫಲಿತಾಂಶ ಗುರುವಾರ ಹೊರಬೀಳಲಿದೆ.

‘ಬೆಳಿಗ್ಗೆ 8ರಿಂದ ಮತ ಎಣಿಕೆ ಆರಂಭವಾಗಲಿದ್ದು, ಸಂಜೆ 3ರ ವೇಳೆಗೆ ಎಲ್ಲ ರಾಜ್ಯಗಳ ಎಣಿಕೆ ಕಾರ್ಯ ಪೂರ್ಣಗೊಳ್ಳಲಿದೆ’ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.

ಗೆಲುವು ಯಾರಿಗೆ ಒಲಿಯಲಿದೆ ಎಂಬ ಸೂಚನೆ ಮೊದಲ ಒಂದು ಗಂಟೆಯಲ್ಲೇ ಲಭಿಸುವ ಸಾಧ್ಯತೆಯಿದ್ದು, ಮಧ್ಯಾಹ್ನ 12ರ ವೇಳೆಗೆ ಸ್ಪಷ್ಟ ಚಿತ್ರಣ ಹೊರಬೀಳುವ ನಿರೀಕ್ಷೆಯಿದೆ.

ಅಸ್ಸಾಂ, ತಮಿಳುನಾಡು ಮತ್ತು ಕೇರಳದ ಜನರು ಬದಲಾವಣೆ ಬಯಸಿದ್ದಾರೆ ಎಂಬುದನ್ನು ವಿವಿಧ ಸುದ್ದಿ ವಾಹಿನಿಗಳು ನಡೆಸಿದ್ದ ಮತಗಟ್ಟೆ ಸಮೀಪ ಸಮೀಕ್ಷೆಗಳು ತಿಳಿಸಿದ್ದವು.

ಈಶಾನ್ಯದ ರಾಜ್ಯ ಅಸ್ಸಾಂನಲ್ಲಿ ಬಿಜೆಪಿ ಮೊದಲ ಬಾರಿಗೆ ಅಧಿಕಾರಕ್ಕೇರಲಿದೆ ಎಂದು ಎಲ್ಲ ಸಮೀಕ್ಷೆಗಳು ಹೇಳಿದ್ದವು. ಕೇರಳದಲ್ಲಿ ಸಿಪಿಎಂ ನೇತೃತ್ವದ ಎಲ್‌ಡಿಎಫ್‌ಅಧಿಕಾರಕ್ಕೇರಲಿದ್ದು, ತಮಿಳುನಾಡಿನಲ್ಲಿ ಡಿಎಂಕೆ ಸ್ಪಷ್ಟ ಬಹುಮತ ಪಡೆಯಲಿದೆ ಎಂದಿದ್ದವು.

ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್‌(ಟಿಎಂಸಿ) ಸ್ಪಷ್ಟ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೇರಲಿದೆ ಎಂದು ಬಹುತೇಕ ಎಲ್ಲ ಸಮೀಕ್ಷೆಗಳು ಹೇಳಿದ್ದವು.

ಅಸ್ಸಾಂ ಮತ್ತು ಕೇರಳದಲ್ಲಿ ಆಡಳಿತಾರೂಢ ಕಾಂಗ್ರೆಸ್‌ಮುಖಭಂಗ ಅನುಭವಿಸಲಿದ್ದು, ಪುದುಚೇರಿಯಲ್ಲಿ ಡಿಎಂಕೆ ಜತೆ ಅಧಿಕಾರಕ್ಕೇರಲಿದೆ ಎಂದು ಸಮೀಕ್ಷೆಗಳು ಭವಿಷ್ಯ ನುಡಿದಿದ್ದವು.

ಅಸ್ಸಾಂನಲ್ಲಿ ಮುಖ್ಯಮಂತ್ರಿ ತರುಣ್‌ಗೊಗೊಯ್‌, ಬಿಜೆಪಿಯ ಸರ್ವಾನಂದ ಸೋನೋವಾಲ್‌, ತಮಿಳುನಾಡಿನಲ್ಲಿ ಮುಖ್ಯಮಂತ್ರಿ ಜಯಲಲಿತಾ ಮತ್ತು ಕರುಣಾನಿಧಿ, ಕೇರಳದಲ್ಲಿ ಮುಖ್ಯಮಂತ್ರಿ ಉಮ್ಮನ್‌ಚಾಂಡಿ, ಸಿಪಿಎಂ ನಾಯಕರಾದ ವಿ.ಎಸ್‌. ಅಚ್ಯುತಾನಂದನ್‌ಹಾಗೂ ಪಿಣರಾಯಿ ವಿಜಯನ್‌, ಪ. ಬಂಗಾಳದಲ್ಲಿ ಮಮತಾ ಮತ್ತು ಸಿಪಿಎಂನ ಸೂರ್ಯಕಾಂತ್‌ಮಿಶ್ರಾ, ಪುದುಚೇರಿಯಲ್ಲಿ ಮುಖ್ಯಮಂತ್ರಿ ಎಂ. ರಂಗಸ್ವಾಮಿ ಸೇರಿದಂತೆ ಅಂದಾಜು 8,300 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.

ಚುನಾವಣಾ ಆಯೋಗದ ಮಾರ್ಗದರ್ಶಿ ಸೂತ್ರದ ಪ್ರಕಾರ ಮೊದಲು ಅಂಚೆ ಮತಗಳ ಎಣಿಕೆ ನಡೆಯಲಿದ್ದು, ಅದು ಪೂರ್ಣಗೊಂಡ ಬಳಿಕ ಮತಯಂತ್ರಗಳಲ್ಲಿನ ಮತ ಎಣಿಕೆ ಆರಂಭವಾಗಲಿದೆ.

Comments are closed.