ಕರ್ನಾಟಕ

ಕೆಪಿಎಸ್‌ಸಿ ಅಧ್ಯಕ್ಷ ಸ್ಥಾನಕ್ಕೆ ಶ್ಯಾಂ ಭಟ್: ಮುಖ್ಯಮಂತ್ರಿ ಸಿದ್ದರಾಮಯ್ಯ ಒಲವು

Pinterest LinkedIn Tumblr

shyaam bhat

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಅಧ್ಯಕ್ಷ ಸ್ಥಾನಕ್ಕೆ ಬಿಡಿಎ ಆಯುಕ್ತ ಟಿ. ಶ್ಯಾಂ ಭಟ್‌ಅವರ ಹೆಸರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಅಂತಿಮಗೊಳಿಸಿದ್ದಾರೆ. ಈ ಸಂಬಂಧ ಪ್ರಕ್ರಿಯೆ ಆರಂಭಿಸುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ಶೀಘ್ರದಲ್ಲಿಯೇ ಸೂಚನೆ ಹೋಗಲಿದೆ ಎಂದು ಮುಖ್ಯಮಂತ್ರಿ ಕಾರ್ಯಾಲಯದ ಮೂಲಗಳು ತಿಳಿಸಿವೆ.

ಸಮಾರಂಭವೊಂದರಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಸುದ್ದಿಗಾರರ ಜೊತೆ ಮಾತನಾಡಿ ‘ಲೋಕಸೇವಾ ಆಯೋಗ ಅಧ್ಯಕ್ಷರ ನೇಮಕದ ಬಗೆಗಿನ ಮಾಹಿತಿ ಶೀಘ್ರದಲ್ಲಿಯೇ ಎಲ್ಲರಿಗೂ ಸಿಗಲಿದೆ. ಊರಿಗೆ ಬಂದವರು ನೀರಿಗೆ ಬರುವುದಿಲ್ಲವೇ?’ ಎಂದು ಪ್ರಶ್ನಿಸಿದರು. ಆದರೆ ಶ್ಯಾಂ ಭಟ್ ಹೆಸರಿಗೆ ತಾವು ಒಪ್ಪಿಗೆ ನೀಡಿದ್ದನ್ನು ನಿರಾಕರಿಸಲಿಲ್ಲ.

ಮುಖ್ಯಮಂತ್ರಿ ಅವರಿಂದ ಸೂಚನೆ ಬಂದ ನಂತರ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಪ್ರಸ್ತಾವನೆಯನ್ನು ರಾಜ್ಯಪಾಲರಿಗೆ ಕಳುಹಿಸಿಕೊಡಲಿದೆ. ಶ್ಯಾಂ ಭಟ್‌ಅವರು ಲೋಕಸೇವಾ ಆಯೋಗದ ಅಧ್ಯಕ್ಷರಾಗುವುದಕ್ಕೆ ಮೊದಲು ಸರ್ಕಾರಿ ಸೇವೆಯಿಂದ ಸ್ವಯಂ ನಿವೃತ್ತರಾಗಬೇಕು. ಆ ನಂತರವೇ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಅವರ ನೇಮಕಾತಿ ಪ್ರಸ್ತಾವನೆಯನ್ನು ರಾಜ್ಯಪಾಲರಿಗೆ ಕಳುಹಿಸಲು ಸಾಧ್ಯ ಎಂದು ಮೂಲಗಳು ಹೇಳಿವೆ.

ಶ್ಯಾಂ ಭಟ್‌ಅವರು ನಿವೃತ್ತರಾಗಲು ಇನ್ನೂ ಐದಾರು ತಿಂಗಳು ಇದೆ ಎನ್ನಲಾಗಿದೆ. ಲೋಕಸೇವಾ ಆಯೋಗದ ಅಧ್ಯಕ್ಷರ ಹುದ್ದೆ 6 ವರ್ಷ ಅವಧಿಯದ್ದು. ನಿವೃತ್ತಿ ವಯಸ್ಸು 65. 2013ರ ಮೇ ತಿಂಗಳಿನಲ್ಲಿ ಗೋನಾಳ ಭೀಮಪ್ಪ ನಿವೃತ್ತರಾದಾಗಿನಿಂದಲೂ ಲೋಕಸೇವಾ ಆಯೋಗದ ಅಧ್ಯಕ್ಷ ಸ್ಥಾನ ಖಾಲಿ ಇತ್ತು.

2014ರ ಡಿಸೆಂಬರ್‌ನಲ್ಲಿ ಕಾಂಗ್ರೆಸ್ ಮುಖಂಡ ವಿ.ಆರ್.ಸುದರ್ಶನ್ ಅವರ ಹೆಸರನ್ನು ಈ ಹುದ್ದೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶಿಫಾರಸು ಮಾಡಿದ್ದರು. ಆದರೆ ಸುದರ್ಶನ್ ಅವರು ಕೋಲಾರದಲ್ಲಿ ಭೂಮಿ ಒತ್ತುವರಿ ಮಾಡಿಕೊಂಡಿದ್ದಾರೆ ಹಾಗೂ ಸುಳ್ಳು ಪ್ರಮಾಣ ಪತ್ರ ನೀಡಿ ಬಿಡಿಎ ನಿವೇಶನ ಪಡೆದಿದ್ದಾರೆ ಎಂದು ಬಿಜೆಪಿ ಆರೋಪಿಸಿತ್ತು. ನಂತರ ರಾಜ್ಯಪಾಲರು ಸುದರ್ಶನ್‌ಹೆಸರನ್ನು ತಿರಸ್ಕರಿಸಿದ್ದರು.

ಶ್ಯಾಂ ಭಟ್ ಅವರು ಮೂರೂವರೆ ವರ್ಷಗಳಿಂದ ಬಿಡಿಎ ಆಯುಕ್ತರಾಗಿದ್ದಾರೆ. ಅವರೂ ವಿವಾದದಿಂದ ಮುಕ್ತರಾಗಿಲ್ಲ. ಅರ್ಕಾವತಿ ಬಡಾವಣೆಗೆ ಸ್ವಾಧೀನ ಪಡಿಸಿಕೊಳ್ಳಲಾದ ಭೂಮಿಯನ್ನು ರಿಯಲ್‌ಎಸ್ಟೇಟ್ ಕಂಪೆನಿಗಳ ಪರವಾಗಿ ಡಿನೋಟಿಫಿಕೇಷನ್ ಮಾಡುವಲ್ಲಿ ಬಿಡಿಎ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂದು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಆರೋಪಿಸಿವೆ.

Comments are closed.