ಅಂತರಾಷ್ಟ್ರೀಯ

ಮಂಗಳನಲ್ಲಿ ಜ್ವಾಲಾಮುಖೀ ಸ್ಫೋಟದಿಂದ ಸೂಕ್ಷ್ಮ ಜೀವಿಗಳ ಉಗಮ ?

Pinterest LinkedIn Tumblr

Mars Volcanoವಾಷಿಂಗ್ಟನ್‌ : ಹಲವು ಶತಕೋಟಿ ವರ್ಷಗಳ ಹಿಂದೆ ಪ್ರಾಚೀನ ಮಂಗಳ ಗ್ರಹದಲ್ಲಿ ಬೃಹತ್‌ ಹಿಮ ಫ‌ಲಕಗಳ ಕೆಳಭಾಗದಲ್ಲಿದ್ದ ಜ್ವಾಲಾಮುಖೀಗಳು ಸ್ಫೋಟಗೊಂಡಿದ್ದವು. ಇವುಗಳ ಪರಿಣಾಮವಾಗಿ ಉಷ್ಣಾಂಶ ಮತ್ತು ತೇವಾಂಶ ಸಮ್ಮಿಳಿತಗೊಂಡ ವಾತಾವರಣ ರೂಪುಗೊಂಡು ಸೂಕ್ಷ್ಮ ಜೀವಿಗಳ ಉಗಮಕ್ಕೆ ಅನುಕೂಲಕರ ಸ್ಥಿತಿ ಮಂಗಳನಲ್ಲಿ ಉಂಟಾಗಿರಬಹುದು ಎಂದು ಹೊಸ ಸಂಶೋಧನೆಯೊಂದು ತಿಳಿಸಿದೆ.

ನಾಸಾದ ಮಂಗಳ ಗ್ರಹ ಪುನರನ್ವೇಷಣೆಯ ಆರ್ಬಿಟರ್‌ ಒದಗಿಸಿರುವ ಹೊಸ ಸಾಕ್ಷ್ಯಗಳ ಪ್ರಕಾರ ಪ್ರಾಚೀನ ಮಂಗಳ ಗ್ರಹದಲ್ಲಿ ವ್ಯಾಪಕ ಹಾಗೂ ಅಪಾರ ಪ್ರಮಾಣದ ಹಿಮ ಇತ್ತೆಂಬುದು ಈಗ ಶ್ರುತಪಟ್ಟಿದೆ.

ಮಂಗಳ ಗ್ರಹದ ನೆಲದ ಗುಣಲಕ್ಷಣ, ರೂಪರೇಖೆ ಹಾಗೂ ಅದರ ಸಮ್ಮಿಶ್ರಣದ ಅಂಶಗಳನ್ನು ಪತ್ತೆ ಹಚ್ಚುವ ಸಲುವಾಗಿ ಆರ್ಬಿಟರ್‌ ನ ಖನಿಜ ನಕ್ಷೆ ಸ್ಪೆಕ್ಟ್ರೋಮೀಟರ್‌ ಬಳಸಿಕೊಂಡು ಅಧ್ಯಯನ ನಡೆಸಿರುವ ಅಮರಿಕದ ಪರ್‌ಡ್ನೂ ಯುನಿವರ್ಸಿಟಿಯ ಬಾಹ್ಯಾಕಾಶ ಸಂಶೋಧಕಿ ಶೆರಿಡಾನ್‌ ಆ್ಯಕಿಸ್‌ ಮತ್ತು ಸಹೋದ್ಯೋಗಿಗಳಿಗೆ ಮಂಗಳ ಗ್ರಹದ ದಕ್ಷಿಣ ಭಾಗದಲ್ಲಿ “ಸಿಸ್‌ಫೀ ಮಾಂಟ್ಸ್‌’ ಎಂಬ ವಿಲಕ್ಷಣ ರೂಪರೇಖೆಯ ಪ್ರದೇಶ ಇರುವುದು ಕಂಡು ಬಂದಿದೆ.

ಈ ಸಿಸ್‌ಫೀ ಮಾಂಟ್ಸ್‌ ಪ್ರದೇಶದಲ್ಲಿನ ಪರ್ವತಗಳ ಶಿಖರಗಳು ಅತ್ಯಂತ ಮಟ್ಟಸವಾಗಿವೆ ಮತ್ತು ಇವುಗಳು ಭೂಮಿಯ ಮೇಲೆ ಹಿಮಾಚ್ಛಾದಿತ ಪರ್ವತಗಳಲ್ಲಿ ಕಂಡುಬರುವ ಜ್ವಾಲಾಮುಖೀಯನ್ನು ಬಹುವಾಗಿ ಹೋಲುವಂತಿವೆ ಎಂದು ಸಂಶೋಧಕರು ಹೇಳಿದ್ದಾರೆ.
-ಉದಯವಾಣಿ

Write A Comment