ಅಂತರಾಷ್ಟ್ರೀಯ

ಹಾಕಿ: ಭಾರತದ ವನಿತೆಯರಿಗೆ ಸತತ 3ನೇ ಸೋಲು

Pinterest LinkedIn Tumblr

HOCKEYಹಾಸ್ಟಿಂಗ್ಸ್‌, ನ್ಯೂಜಿಲೆಂಡ್‌ (ಪಿಟಿಐ): ಮೊದಲೆರಡು ಪಂದ್ಯಗಳಲ್ಲಿ ನಿರಾಸೆ ಕಂಡಿದ್ದ ಭಾರತ ಮಹಿಳಾ ಹಾಕಿ ತಂಡ ಗುರುವಾರವೂ ಮುಗ್ಗರಿಸಿತು.
ಇಲ್ಲಿ ನಡೆಯುತ್ತಿರುವ ಹಾಕೆಸ್‌ ಬೇ ಕಪ್‌ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಗುರುವಾರ 1–3 ಗೋಲುಗಳಿಂದ ಜಪಾನ್ ವಿರುದ್ಧ ಸೋಲು ಕಂಡಿತು.
ಜಪಾನ್ ತಂಡವು ಆರಂಭದಿಂದಲೂ ಪಾರಮ್ಯ ಮೆರೆಯಿತು. ಐದನೇ ನಿಮಿಷದಲ್ಲೇ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಚೆಂಡನ್ನು ಗುರಿ ಸೇರಿಸಿ 1–0 ಮುನ್ನಡೆ ಪಡೆಯಿತು.
ಚುರುಕಿನ ಆಟ ಮುಂದುವರಿಸಿದ ಜಪಾನ್, ಭಾರತದ ಕಳಪೆ ರಕ್ಷಣಾ ವಿಭಾಗದ ಮೇಲೆ ಚೆನ್ನಾಗಿಯೇ ಪ್ರಹಾರ ನಡೆಸಿತು. ಮುಂದಿನ ಎರಡು ನಿಮಿಷಗಳಲ್ಲಿ ಮತ್ತೆರಡು ಗೋಲು ಗಳಿಸಿ 3–0 ಮುನ್ನಡೆ ಪಡೆದಿದ್ದು ಇದಕ್ಕೆ ಸಾಕ್ಷಿ.
ಬಳಿಕ ಭಾರತ ತಂಡ ಚೇತರಿಸಿಕೊಂಡು ಆಟವಾಡಿತು. 14 ನಿಮಿಷದಲ್ಲಿ ಭಾರತಕ್ಕೆ ಲಭಿಸಿದ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ರಾಣಿ ಗೋಲು ಗಳಿಸಿ ಹಿನ್ನಡೆಯನ್ನು 1–3ಕ್ಕೆ ತಗ್ಗಿಸಿದರು.
ಅದಾಗ್ಯೂ, ಪಂದ್ಯದ ಮೊದಲಾರ್ಧ ಅವಧಿ ಮುಗಿದಾಗ ಜಪಾನ್ ತಂಡ 3–1ರ ಮುನ್ನಡೆಯಲಿತ್ತು.
ಪಂದ್ಯದ ಉತ್ತಾರಾರ್ಧದಲ್ಲಿ ಗಮನಾರ್ಹ ಪ್ರದರ್ಶನ ತೋರಿದ ಭಾರತದ ವನಿತೆಯರು, ಎದುರಾಳಿಗೆ ಪ್ರಬಲ ಪೈಪೋಟಿ ನೀಡಿದರು. ಆದರೆ, ಪದೇ ಪದೇ ಗೋಲು ಗಳಿಸುವ ಯತ್ನವನ್ನು ಜಪಾನ್ ತಂಡ ತಡೆಯುವಲ್ಲಿ ಯಶಸ್ವಿಯಾಯಿತು. ಮೊದಲಾರ್ಧದಲ್ಲಿ ಆಕ್ರಮಕಾರಿ ಆಟವಾಡಿದ್ದ ಜಪಾನ್, ಉತ್ತರಾರ್ಧದಲ್ಲಿ ರಕ್ಷಣಾತ್ಮಕ ಆಟಕ್ಕೆ ಮೊರೆ ಹೋಯಿತು.
ಈ ಹಂತದಲ್ಲಿ ಗೋಲು ಗಳಿಸುವ ಪೂನಂ ಯತ್ನವನ್ನು ಜಪಾನ್ ಯಶಸ್ವಿಯಾಗಿ ತಡೆಯಿತು. ದೀಪಿಕಾ ಅವರು ಗೋಲು ದಾಖಲಿಸುವ ಅವಕಾಶ ಕೈಚೆಲ್ಲಿದರು.
ಪಂದ್ಯದ ಕೊನೆ ನಿಮಿಷಗಳಲ್ಲಿ ಭಾರತದ ಆಟಗಾರ್ತಿಯರು ಗೋಲು ಗಳಿಸಲು ಸಾಕಷ್ಟು ಪರದಾಡಿದರು. ಆದರೆ, ಅವರ ಯತ್ನಗಳಿಗೆಲ್ಲ ಜಪಾನ್ ಗೋಲ್ ಕೀಪರ್ ಅಸಾನೊ ಸಕಿಯೊ ತಡೆಯೊಡ್ಡಿದರು.
ಮುಂದಿನ ಪಂದ್ಯದಲ್ಲಿ ಭಾರತವು ಶನಿವಾರ ಕೆನಡಾ ಎದುರು ಸೆಣಸಲಿದೆ.

Write A Comment