ಅಂತರಾಷ್ಟ್ರೀಯ

ಲಾಹೋರ್’ನಲ್ಲಿ ಆತ್ಮಾಹುತಿ ಬಾಂಬ್ ದಾಳಿ: 70 ಸಾವು, 300 ಗಾಯ

Pinterest LinkedIn Tumblr

gg

ಲಾಹೋರ್: ದಕ್ಷಿಣ ಪಾಕಿಸ್ತಾನದ ಲಾಹೋರ್ ನಲ್ಲಿ ಸಂಭವಿಸಿದ ಆತ್ಮಾಹುತಿ ಬಾಂಬ್ ಸ್ಫೋಟದಲ್ಲಿ 70 ಮಂದಿ ಸಾವನ್ನಪ್ಪಿದ್ದು, 300ಕ್ಕೂ ಅಧಿಕ ಜನರು ಗಾಯಗೊಂಡಿರುವ ಘಟನೆ ಭಾನುವಾರ ನಡೆದಿದೆ.

ಲಾಹೋರ್ ನ ಪ್ರಸಿದ್ಧ ತಾಣವೆಂದೇ ಹೇಳಲಾಗುವ ಗಲ್ಶಾನ್-ಇ-ಇಕ್ಬಾಲ್ ಪಾರ್ಕ್ ನಲ್ಲಿ ಪ್ರತೀ ನಿತ್ಯ ಹಲವು ಪ್ರವಾಸಿಗರು ಆಗಮಿಸುತ್ತಿರುತ್ತಾರೆ. ಜನನಿ ಬಿಡ ಪ್ರದೇಶಗಳನ್ನೇ ತಮ್ಮ ಗುರಿಯಾಗಿಸಿಕೊಳ್ಳುತ್ತಿರುವ ಉಗ್ರ ಸಂಘಟನೆಗಳು ನಿನ್ನೆ ಸಂಜೆ 6.30ರ ಸುಮಾರಿಗೆ ಆತ್ಮಾಹುತಿ ಬಾಂಬ್ ಸ್ಫೋಟಿಸಿದೆ. ಇದರ ಪರಿಣಾಮ ಸ್ಥಳದಲ್ಲಿದ್ದ 70 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, 300 ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ.

ಬಾಂಬ್ ಸ್ಫೋಟದಲ್ಲಿ ಗಾಯಗೊಂಡಿರುವವರ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಓರ್ವ ಉಗ್ರ ಆತ್ಮಾಹುತಿ ದಾಳಿ ನಡೆಸಿದ್ದು, ಈ ವರೆಗೂ ಯಾವುದೇ ಉಗ್ರ ಸಂಘಟನೆಗಳು ಬಾಂಬ್ ಸ್ಫೋಟದ ಹೊಣೆ ಹೊತ್ತುಕೊಂಡಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಗಲ್ಶಾನ್-ಇ-ಇಕ್ಬಾಲ್ ಪಾರ್ಕ್ ನಲ್ಲಿ ಸದಾಕಾಲ ಜನರಿಂದ ತುಂಬಿರುತ್ತದೆ. ಇದರಂತೆ ಭಾನುವಾರ ಈಸ್ಟರ್ ರಜೆ ಇದ್ದುದ್ದರಿಂದ ಸ್ಥಳದಲ್ಲಿ ಜನರ ಸಂಖ್ಯೆ ಎಂದಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿತ್ತು. ಜನಾಕರ್ಷಣೆಯ ಕೇಂದ್ರವಾಗಿದ್ದ ಸ್ಥಳದಲ್ಲಿ ಸ್ಫೋಟ ಸಂಭವಿಸಿದ ಕೂಡಲೇ ರಕ್ತದೋಕುಳಿ ಹರಿದಿತ್ತು. ಸ್ಥಳದಲ್ಲಿದ್ದ ಜನರು ಆಘಾತಕ್ಕೊಳಗಾಗಿದ್ದರು. ಸ್ಫೋಟದಲ್ಲಿ ತಾಲಿಬಾನ್ ಉಗ್ರ ಕೈವಾಡವಿದೆ ಎಂದು ಮೂಲಗಳು ತಿಳಿಸಿವೆ.

ಪಾರ್ಕ್ ನ ಒಂದು ಭಾಗದಲ್ಲಿ ಕಾರೊಂದನ್ನು ಪಾರ್ಕಿಂಗ್ ಮಾಡಲಾಗಿತ್ತು. ಈ ಸ್ಥಳದಲ್ಲಿ ವ್ಯಕ್ತಿಯೊಬ್ಬ ತಾನು ತೊಟ್ಟಿದ್ದ ಆತ್ಮಾಹುತಿ ಬಾಂಬ್ ನ್ನು ಸ್ಫೋಟಿಸಿಕೊಂಡಿದ್ದ. ಪಾರ್ಕ್ ನಲ್ಲಿ ಭದ್ರತಾ ಸಿಬ್ಬಂದಿಗಳಿರಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.

ಸ್ಫೋಟದಲ್ಲಿ ಮೃತಪಟ್ಟವರು ಮತ್ತು ಗಾಯಗೊಂಡವರಲ್ಲಿ ಬಹುತೇಕರು ಮಹಿಳೆಯರು ಹಾಗೂ ಮಕ್ಕಳಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆಕೊಡಿಸಲಾಗುತ್ತಿದೆ.

ದಾಳಿಯನ್ನು ಪಾಕಿಸ್ತಾನ ಪ್ರಧಾನಮಂತ್ರಿ ಶರೀಫ್ ಹಾಗೂ ತೆಹ್ರೀಕ್-ಐ-ಇನ್ಸಾಫ್ ಮುಖ್ಯಸ್ಥ ಇಮ್ರಾನ್ ಖಾನ್ ಅವರು ಖಂಡಿಸಿದ್ದಾರೆ. ಇನ್ನು ದಾಳಿ ಖಂಡಿಸಿರುವ ಪಂಜಾಬ್ ಸರ್ಕಾರ ಕೂಡ ಇದೀಗ ಮೃತಪಟ್ಟವರಿಗಾಗಿ ಮೂರು ದಿನಗಳ ಕಾಲ ಶೋಕಾಚರಣೆ ಆಚರಿಸಲು ತೀರ್ಮಾನಿಸಿದೆ ಎಂದು ತಿಳಿದುಬಂದಿದೆ.

Write A Comment