
ಮೊಹಾಲಿ: ಅದೊಂದು ಕಾಲವಿತ್ತು. ಸಚಿನ್ ಮಾಡಿದೆಲ್ಲಾ ದಾಖಲೆಯ ಪುಟ ಸೇರುತ್ತಿತ್ತು. ಇದೀಗ ಅಂತುಹುದೇ ಸ್ಥಿತಿ ವಿರಾಟ್ ಕೊಹ್ಲಿಯದ್ದಾಗಿದ್ದು, ಭಾನುವಾರ ಮೊಹಾಲಿಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ವಿರಾಟ್ ಮಾಡಿದ್ದೆಲ್ಲಾ ದಾಖಲೆಯ ಪುಟ ಸೇರುತ್ತಿದೆ.
ಭಾರತದ ತಂಡದ ಸ್ಫೋಟಕ ಬ್ಯಾಟ್ಸಮನ್ ವಿರಾಟ್ ಕೊಹ್ಲಿ ಕ್ರೀಸ್ ಗೆ ಆಗಮಿಸಿ ಕೇವಲ 51 ಎಸೆತದಲ್ಲಿ 82 ರನ್ ಚಚ್ಚಿದ್ದರು. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮೊದಲ ಬೌಂಡರಿ ಸಿಡಿಸಿದಾಗ ಅಲ್ಲೊಂದು ದಾಖಲೆ ಸೃಷ್ಟಿಯಾಗಿತ್ತು. ಈ ಬೌಂಡರಿ ಮೂಲಕ ಕೊಹ್ಲಿ ಭಾರತದ ಪರ 500 ಬೌಂಡರಿ ಸಿಡಿಸಿದ ಮೂರನೇ ಆಟಗಾರ ಎಂಬ ಖ್ಯಾತಿಗೆ ಒಳಗಾದರು. ಇದಕ್ಕೂ ಮೊದಲು ಗೌತಮ್ ಗಂಭೀರ್ ಹಾಗೂ ಸುರೇಶ್ ರೈನಾ ಈ ಸಾಧನೆ ಮಾಡಿದ್ದರು.
ಇನ್ನು ಕೊಹ್ಲಿ ಅರ್ಧ ಶತಕ ಸಿಡಿಸುತ್ತಿದ್ದಂತೆಯೇ ಕೊಹ್ಲಿ ಹೆಸರಿಗೆ ನೂತನ ದಾಖಲೆಯೊಂದು ಸೇರ್ಪಡೆಯಾಯಿತು. ಮೊಹಲಿಯಲ್ಲಿ ಅರ್ಧಶತಕ ಸಿಡಿಸುವ ಮೂಲಕ ಕೊಹ್ಲಿ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಆಸಿಸ್ ವಿರುದ್ಧ ಸತತ ನಾಲ್ಕು ಅರ್ಧಶತಕಗಳನ್ನು ಸಿಡಿಸಿದ ಮೊದಲ ಆಟಗಾರ ಎಂಬ ಕೀರ್ತಿಗೆ ಭಾಜನರಾದರು. ಈ ಪಂದ್ಯಕ್ಕೂ ಮೊದಲು ಆಸಿಸ್ ವಿರುದ್ಧದ ಈ ಹಿಂದಿನ ಪಂದ್ಯದಗಳಲ್ಲಿ ಕೊಹ್ಲಿ ಅಜೇಯ 90, ಅಜೇಯ 59 ಮತ್ತು 50 ರನ್ ಸಿಡಿಸಿದ್ದರು.
ಮೊಹಾಲಿಯಲ್ಲಿ ಆಸ್ಚ್ರೇಲಿಯಾ ವಿರುದ್ಧ 82 ರನ್ ಸಿಡಿಸಿವು ಮೂಲಕ ಕೊಹ್ಲಿ ಆಸಿಸ್ ವಿರುದ್ಧ ತಮ್ಮ ಎರಡನೇ ವೈಯುಕ್ತಿಕ ಗರಿಷ್ಠ ಮೊತ್ತ ಪೇರಿಸಿದರು. ಇದಕ್ಕೂ ಮೊದಲು ಅಡಿಲೇಡ್ ನಲ್ಲಿ ಕೊಹ್ಲಿ ಅಜೇಯ 90 ರನ್ ಭಾರಿಸಿದ್ದರು. ಇದು ಈ ವರೆಗಿನ ಕೊಹ್ಲಿ ಅವರ ಆಸಿಸ್ ವಿರುದ್ಧ ವೈಯುಕ್ತಿಕ ಗರಿಷ್ಛ ರನ್ ಗಳಿಕೆಯಾಗಿದೆ.
ಇದೇ ಪಂದ್ಯದಲ್ಲಿ ಕೊಹ್ಲಿ 30 ರನ್ ಗಳಿಸಿದ್ದ ವೇಳೆ ಭಾರತದ ಪರ ತಮ್ಮ ರನ್ ಗಳಿಕೆಯನ್ನು 1500ಕ್ಕೇರಿಸಿಕೊಂಡರು. ಆ ಮೂಲಕ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾರತದ ಪರ 1500 ರನ್ ಗಳಿಸಿದ ಮೊದಲ ಆಟಗಾರ ಎಂಬ ಕೀರ್ತಿಗೆ ಕೊಹ್ಲಿ ಭಾಜನರಾಗಿದ್ದಾರೆ. ಕೊಹ್ಲಿ ಈ 1500 ರನ್ ಗಳಿಕೆಗಾಗಿ ಒಟ್ಟು 39 ಇನ್ನಿಂಗ್ಸ್ ಆಡಿದ್ದಾರೆ. ಇದು ಈ ವರೆಗಿನ ಅತ್ಯಂತ ವೇಗದ 1500 ರನ್ ಗಳಿಕೆಯಾಗಿದೆ. ವೆಸ್ಟ್ ಇಂಡೀಸ್ ತಂಡದ ಕ್ರಿಸ್ ಗೇಯ್ಲ್ 44 ಇನ್ನಿಂಗ್ಸ್ ಗಳಲ್ಲಿ 1500 ರನ್ ಗಳಿಕೆ ಮಾಡುವ ಮೂಲಕ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ.
ಒಟ್ಟಾರೆ ಅಭಿಮಾನಿಗಳ ಪಾಲಿಗೆ ಸಚಿನ್ ತೆಂಡೂಲ್ಕರ್ ಗೆ ಪರ್ಯಾಯವಾಗಿರುವ ಕೊಹ್ಲಿ ನಿಜಕ್ಕೂ ಅದೇ ಹಾದಿಯಲ್ಲಿ ಮುನ್ನಡೆದಿದ್ದಾರೆ.