ನ್ಯೂಯಾರ್ಕ್/ವಾಷಿಂಗ್ಟನ್: ಅಮೆರಿಕದಲ್ಲಿ ಬಿರುಗಾಳಿ ಸಹಿತ ಹಿಮಪಾತವು ಮುಂದುವರೆದಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ. ಹಿಮಪಾತದಿಂದಾಗಿ ಸಂಭವಿಸಿದ ದುರ್ಘಟನೆಗಳಿಂದ ಇದುವರೆಗೆ 19 ಜನರು ಮೃತಪಟ್ಟಿದ್ದಾರೆ.
ಅಮೆರಿಕದ ವಾಣಿಜ್ಯ ನಗರಿ ನ್ಯೂಯಾರ್ಕ್ನಲ್ಲಿ 25.1 ಇಂಚು (2 ಅಡಿ) ಹಿಮ ಸುರಿದಿದೆ. ಜತೆಗೆ ಅಮೆರಿಕದ ರಾಜಧಾನಿ ವಾಷಿಂಗ್ಟನ್ನಲ್ಲೂ ಸಹ ಭಾರೀ ಹಿಮಪಾತವಾಗಿದೆ ಎಂದು ಅಮೆರಿಕ ರಾಷ್ಟ್ರೀಯ ಹವಾಮಾನ ಸಂಸ್ಥೆ ತಿಳಿಸಿದೆ.
ಭಾರೀ ಹಿಮಪಾತದ ಜತೆಗೆ, ಮಂಜು ಮುಸುಕಿದ ವಾತಾವರಣವಿರುವುದರಿಂದ ಕಾರು ಅಪಘಾತವಾಗಿ ಉತ್ತರ ಕ್ಯಾರೊಲಿನಾ, ಕೆಂಟುಕಿ, ಓಹಿಯೋ, ಟೆನೆಸ್ಸಿ ಮತ್ತು ವರ್ಜೀನಿಯಾದಲ್ಲಿ 13 ಜನರು ಸಾವನ್ನಪ್ಪಿದ್ದಾರೆ. ಮೇರಿಲ್ಯಾಂಡ್ (1), ನ್ಯೂಯಾರ್ಕ್ (3) ವರ್ಜೀನಿಯಾ (2) ಹಿಮಪಾತದ ಪ್ರಭಾವಕ್ಕೆ ಸಿಲುಕಿ ಮೃತಪಟ್ಟಿದ್ದಾರೆ.
ಹಿಮಪಾತದಿಂದಾಗಿ ರಸ್ತೆ, ರೈಲು ಮತ್ತು ವಾಯುಯಾನ ಸಂಚಾರಕ್ಕೆ ತೊಡಕಾಗಿದೆ. ಶನಿವಾರ 5,100 ಮತ್ತು ಭಾನುವಾರ 2,800 ವಿಮಾನಗಳ ಹಾರಾಟವನ್ನು ರದ್ದು ಮಾಡಲಾಗಿದೆ.