ಫೇಸ್ಬುಕ್, ವಾಟ್ಸ್ಪ್, ಹೈಕ್ ಇತ್ಯಾದಿ ನೋಡದೆ ದಿನಾ ನಿದ್ದೆಯೇ ಬರೋಲ್ಲ ಎಂಬ ಪರಿಸ್ಥಿತಿ ಈ ಕಾಲದಲ್ಲಿ ಎಲ್ಲರದ್ದೂ ಆಗಿದೆ. ಆದರೆ ನಿದ್ದೆಗೆ ಮುನ್ನ ಫೇಸ್ಬುಕ್ ನೋಡಿದರೆ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಗಳಿಸುವ ಅಂಕ ಕಡಿಮೆಯಾಗುತ್ತದೆ ಎಂದು ಸಮೀಕ್ಷೆಯೊಂದು ಹೇಳಿದೆ. ಲಂಡನ್ನ ಸಂಶೋಧಕರು ಈ ಸಮೀಕ್ಷೆ ನಡೆಸಿದ್ದು, ನಿದ್ದೆಗೆ ಮುನ್ನ ಸಾಮಾಜಿಕ ಜಾಲತಾಣಗಳನ್ನು ನೋಡುವುದು, ಅದರಲ್ಲೇ ಮೈಮರೆಯುವುದರಿಂದ ಮೆದುಳಿಗೆ ಹೆಚ್ಚಿನ ಪ್ರಚೋದನೆ ನೀಡುತ್ತದೆ. ನಿದ್ದೆ ಕಡಿಮೆಯಾಗಿ ನೆನಪಿನ ಶಕ್ತಿ ಕಡಿಮೆಯಾಗುತ್ತದೆ. ಇದು ಪಠ್ಯ ಚಟುವಟಿಕೆ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಲಾಗಿದೆ. ಸಮೀಕ್ಷೆಗೆ 19ರೊಳಗಿನ ವಿದ್ಯಾರ್ಥಿಗಳನ್ನು ಸಂಶೋಧಿಸಲಾಗಿದ್ದು, ದಿನಾ ನಿದ್ದೆಗೆ ಮುನ್ನ ಅರ್ಧಗಂಟೆಗೂ ಹೆಚ್ಚು ಫೇಸ್ಬುಕ್ನಲ್ಲಿ ಮೈಮರೆಯುವ ವಿದ್ಯಾರ್ಥಿಗಳ ಅಂಕ ಮೊದಲಿಗಿಂತ ಶೇ.20ರಷ್ಟು ಕಡಿಮೆಯಾಗಿದ್ದಾಗಿ ಹೇಳಲಾಗಿದೆ. ಶೇ.70ರಷ್ಟು ವಿದ್ಯಾರ್ಥಿಗಳಲ್ಲಿ ಫೇಸ್ಬುಕ್ ಚಟ ವ್ಯಾಪಕವಾಗಿರುವುದು ಸಮೀಕ್ಷೆಯಲ್ಲಿ ಪತ್ತೆಯಾಗಿದೆ. ಇದರಿಂದ ನಿದ್ದೆಗೆ ಹೋಗುವ ಹೊತ್ತು ರಾತ್ರಿ ಹನ್ನೊಂದೂವರೆ ದಾಟುತ್ತದೆ ಎಂದು ಹೇಳಲಾಗಿದೆ.ಇದ ನ್ನು ನಿಯಂತ್ರಿಸದೇ ಇದ್ದರೆ, ಅದು ಹೆಚ್ಚಿನ ಪರಿಣಾಮ ಬೀರುತ್ತದೆ ಎಂದು ಸಮೀಕ್ಷೆ ಎಚ್ಚರಿಸಿದೆ.
ಫಲಿತಗಳು…
*ನಿದ್ದೆಗೆ ಮುನ್ನ ಫೇಸ್ಬುಕ್: ನಿದ್ದೆ ಹಾನಿ, ಕಲಿಕಾ ಸಾಮರ್ಥ್ಯ ಕುಂಠಿತ
*ನಿದ್ದೆಗೆ ಮುನ್ನ ಫೇಸ್ಬುಕ್ ನೋಡುವ ವಿದ್ಯಾರ್ಥಿಗಳ ಅಂಕ ಶೇ.20ರಷ್ಟು ಕಡಿಮೆ
*ಶೇ.70ರಷ್ಟು ವಿದ್ಯಾರ್ಥಿಗಳಿಗೆ ನಿದ್ದೆಗೆ ಮುನ್ನ ಫೇಸ್ಬುಕ್ ನೋಡುವ ಚಟ
-ಉದಯವಾಣಿ
