ಕನ್ನಡ ವಾರ್ತೆಗಳು

ಸುಳ್ಳು ಆರೋಪ : ಕುವೈಟ್‌ನಿಂದ 11 ಮಂದಿ ಭಾರತೀಯರ ಗಡೀಪಾರು

Pinterest LinkedIn Tumblr

kuwait_Press_Meet_1

ಮಂಗಳೂರು: ಕುವೈಟ್ ನಲ್ಲಿ ಇತ್ತೀಚೆಗೆ ಪೂಜೆ ನಡೆಸಿದ ಸುಳ್ಳು ಆರೋಪಕ್ಕೆ ಒಳಗಾಗಿ 11 ಮಂದಿ ಭಾರತೀಯರನ್ನು ಗಡೀಪಾರು ಮಾಡಲಾಗಿದೆ ಎಂದು ಕುವೈಟ್ ಸಮಾಜ ಸೇವಾ ಸಂಸ್ಥೆ ನವಚೇತನ ವೆಲ್ಫೇರ್ ಅಸೋಸಿಯೇಶನ್ ಆರೋಪಿಸಿದೆ.

ಮಂಗಳೂರಿನಲ್ಲಿ ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಕುವೈಟ್ ಸಮಾಜ ಸೇವಾ ಸಂಸ್ಥೆ ನವಚೇತನ ವೆಲ್ಫೇರ್ ಅಸೋಸಿಯೇಶನ್‌ನ ಪುರುಷೋತ್ತಮ್ ಅವರು, ಕುವೈಟ್ ನಲ್ಲಿ ಸಾರ್ವಜನಿಕವಾಗಿ ಪೂಜೆ ನಡೆಸಲು ಅನುಮತಿ ಇಲ್ಲದಿದ್ದರಿಂದಾಗಿ ಜನವಸತಿ ಕಟ್ಟಡದ ಮುಚ್ಚಿದ ಬಾಗಿಲಿನ ಒಳಗೆ ಪೂಜೆಯನ್ನು ನಡೆಸಲಾಗಿದೆ. ನೆಲ ಮಾಳಿಗೆಯ ಹಾಲ್‌ಗೆ ಸ್ಥಳೀಯಾಡಳಿತದಿಂದ ಪರವಾನಿಗೆ ಇತ್ತು. ಅಲ್ಲದೇ ನಾವು 2011ರಿಂದಲೇ ಅಲ್ಲಿ ಪೂಜೆ ನಡೆಸುತ್ತಿದ್ದೆವು ಎಂದು ಹೇಳಿದರು.

kuwait_Press_Meet_2

ಪೂಜೆ ನಡೆದು 10 ದಿನಗಳ ನಂತರ(26-10-15) ನವಚೇತನ ಅಸೋಸಿಯೇಶನ್ ನ ಸದಸ್ಯ ಯಾದವ ಪೂಜಾರಿಯನ್ನು ಅವರು ಕೆಲಸ ಮಾಡುವ ಸಂಸ್ಥೆಯ ಕಂಪೆನಿಯ ಎಚ್. ಆರ್. ಕರೆದು ಪಾಸ್ ಪೋರ್ಟ್ ನ್ನು ಅವರಿಗೆ ಕೊಟ್ಟು ಸಿಐಡಿ ಪೊಲೀಸರೊಂದಿಗೆ ಅವರನ್ನು ಕಳುಹಿಸಿದ್ದರು. ಆ ಬಳಿಕ ಅವರ ಸುಳಿವು ಇರಲಿಲ್ಲ.

ರಾತ್ರಿ ಅಸೋಸಿಯೇಶನ್ ನ ಅಧ್ಯಕ್ಷ ಅಶೋಕ್ ಸಾಲ್ಯಾನ್ ರನ್ನು ಕರೆದು ಕೊಂಡು ಹೋಗಿದ್ದಾರೆ. ಆ ಬಳಿಕ 5 ದಿನಗಳ ನಂತರ 9 ಜನರನ್ನು ಕರೆದು ಕೊಂಡು ಹೋಗಿದ್ದು, ಇವರೆಲ್ಲ ಅಸೋಸಿಯೇಶನ್ ನಲ್ಲಿ ಒಂದಲ್ಲ ಒಂದು ಜವಾಬ್ದಾರಿಯನ್ನು ಹೊಂದಿದ್ದವರಾಗಿದ್ದರು. ಹೀಗೆ ಕರೆದು ಕೊಂಡು ಹೋದವರನ್ನು ಗೌಪ್ಯ ಜಾಗವೊಂದರಲ್ಲಿ ಇರಿಸಲಾಗಿತ್ತು. ಈ ಬಗ್ಗೆ ಯಾವುದೇ ಕಾರಣಗಳನ್ನೂ ಅವರು ನೀಡಿರಲಿಲ್ಲ ಎಂದು ಅವರು ತಿಳಿಸಿದರು.

kuwait_Press_Meet_3 kuwait_Press_Meet_4

ಆ ಬಳಿಕ 16-10-15ರಂದು ಅಧಿಕಾರಿಗಳು ಪೂಜೆಯ ಬಗ್ಗೆ ಸ್ಪಷ್ಟೀಕರಣ ಕೇಳಿದ್ದಾರೆ. ಆದರೆ ಯಾವುದೇ ಅಪರಾಧ ನಡೆದಿರುವ ಬಗ್ಗೆ ಸಾಕ್ಷ್ಯ ಒದಗಿಸುವಲ್ಲಿ ಅವರು ವಿಫಲವಾಗಿದ್ದಾರೆ. 13-11-15ರಂದು 9 ಜನರನ್ನು ಭಾರತಕ್ಕೆ ಕಳುಹಿಸಿದ್ದರು. 17 ರಂದು ಮತ್ತೆ ಇಬ್ಬರನ್ನು ಕಳುಹಿಸಿದ್ದಾರೆ. ಈ ಬಗ್ಗೆ ನಮ್ಮ ಬಂಧನವಾದ ತಕ್ಷಣ ಮಾಹಿತಿ ಪಡೆದ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಶೋಭಾ ಕರಂದ್ಲಾಜೆ ನಮ್ಮ ಬಿಡುಗಡೆಗೆ ಪ್ರಯತ್ನಿಸಿದ್ದಾರೆ. ಆ ಬಳಿಕ ವಿದೇಶಾಂಗ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್ ಮತ್ತು ಅನಂತ್ ಕುಮಾರ್ ರನ್ನು ಸಂಪರ್ಕಿಸಿ ತಮ್ಮ ಬಿಡುಗಡೆಗೆ ಶ್ರಮಿಸಿದ್ದಾರೆ ಎಂದು ತಿಳಿಸಿದರು.

kuwait_Press_Meet_5

ತಾವು ಮತ್ತೆ ಉದ್ಯೋಗಕ್ಕೆ ಮರಳುವಂತೆ ಮಾಡಲು ವಿದೇಶಾಂಗ ಸಚಿವರು ಶ್ರಮವಹಿಸುತ್ತಿದ್ದಾರೆ. ಆದರೆ ತಮ್ಮ ಫಿಂಗರ್ ಪ್ರಿಂಟ್ ಅನ್ನು ತೆಗೆದು ಹಾಕಲಾಗಿದ್ದು, ಇದು ತಮಗೆ ಆ ದೇಶಕ್ಕೆ ಹೋಗಲು ತೊಡಕುಂಟಾಗಿದೆ. ಇದನ್ನು ನಿರ್ಬಂದಿಸಿ ಮೊದಲಿನಂತೆ ತಾವು ಮತ್ತೆ ಉದ್ಯೋಗಕ್ಕೆ ತೆರಳುವಂತೆ ಮಾಡಲು ಅವರು ಸಚಿವರಿಗೆ ಮನವಿ ಮಾಡಿರುವುದಾಗಿ ಅವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕುವ್ಯೆಟ್‌ನಲ್ಲಿ ಬಂಧನವಾಗಿ ಬಿಡುಗಡೆ ಹೊಂದಿದ ಆಶೋಕ್ ಕೋಡಿಕಲ್, ಯಾದವ್ ಸನೀಲ್, ಕುಮಾರ್ ಪೂಜಾರಿ ವಾಮಂಜೂರು, ಉಮೇಶ್ ಶೆಟ್ಟಿ ಉಡುಪಿ, ಸತೀಶ್ ಬೆಳ್ಳಾವಿ ಹಾಗೂ ಪ್ರಶಾಂತ್ ಶೆಟ್ಟಿ ಮಿಜಾರ್ ಮುಂತಾದವರು ಉಪಸ್ಥಿತರಿದ್ದರು.

Write A Comment