ಅಂತರಾಷ್ಟ್ರೀಯ

ರಶ್ಯದ ಯುದ್ಧವಿಮಾನ ಹೊಡೆದುರುಳಿಸಿದ ಟರ್ಕಿ: ಸಿರಿಯ ಗಡಿ ಸಮೀಪ ನಡೆದ ಘಟನೆ

Pinterest LinkedIn Tumblr

Plane___ಅಂಕಾರ, ನ.24: ಟರ್ಕಿ ವಾಯು ಪ್ರದೇಶವನ್ನು ಉಲ್ಲಂಘಿಸಿದ ರಶ್ಯದ ಎಸ್‌ಯು-24 ಯುದ್ಧ ವಿಮಾನವೊಂದನ್ನು ಟರ್ಕಿಯ ಯುದ್ಧವಿಮಾನಗಳು ಸಿರಿಯ ಗಡಿಯ ಸಮೀಪ ಮಂಗಳವಾರ ಹೊಡೆದುರುಳಿಸಿವೆ.

ಎಚ್ಚರಿಕೆಯನ್ನು ಉಲ್ಲಂಘಿಸಿದ ಯುದ್ಧವಿಮಾನವನ್ನು ಎರಡು ಎಫ್-16 ಯುದ್ಧ ವಿಮಾನಗಳು ಹೊಡೆದುರುಳಿಸಿದವು ಎಂದು ಟರ್ಕಿಯ ಸರಕಾರಿ ಒಡೆತನದ ‘ಹುರಿಯತ್ ಡೇಲಿ ನ್ಯೂಸ್’ ವರದಿ ಮಾಡಿದೆ.

ತುರ್ಕ್‌ಮನ್ನರು ಪ್ರಸಕ್ತ ನೆಲೆಸಿರುವ ಸಿರಿಯ ಗಡಿ ಸಮೀಪದ ಲಟಾಕಿಯದ ಯಮಾದಿ ಗ್ರಾಮದ ಡೇರೆಗಳ ಮೇಲೆ ವಿಮಾನ ಉರುಳಿತು. ಇಬ್ಬರು ಪೈಲಟ್‌ಗಳು ಪ್ಯಾರಾಶೂಟ್ ನೆರವಿನಿಂದ ಇಳಿಯುತ್ತಿರುವುದು ಕಂಡುಬಂತು ಎಂಬುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದರು. ಲಟಾಕಿಯ ಪ್ರಾಂತದ ಪರ್ವತಗಳ ಮೇಲೆ ವಿಮಾನ ಪತನಗೊಳ್ಳುವುದನ್ನು ವೀಡಿಯೊ ತುಣುಕುಗಳು ತೋರಿಸಿವೆ. ಓರ್ವ ಪೈಲಟ್ ಹತನಾಗಿದ್ದಾನೆ ಹಾಗೂ ಇನ್ನೋರ್ವನನ್ನು ಆ ಪ್ರದೇಶದಲ್ಲಿದ್ದ ತುರ್ಕ್‌ಮನ್ ಪಡೆಗಳು ಸೆರೆಹಿಡಿದಿವೆ ಎಂದು ಸಿಎನ್‌ಎನ್ ತುರ್ಕ್ ಹೇಳಿದೆ. ಆದಾಗ್ಯೂ, 6,000 ಮೀಟರ್ ಎತ್ತರದಲ್ಲಿ ಹಾರುತ್ತಿದ್ದ ತನ್ನ ವಿಮಾನ ಟರ್ಕಿ ವಾಯುಪ್ರದೇಶವನ್ನು ಉಲ್ಲಂಘಿಸಿಲ್ಲ ಎಂದು ರಶ್ಯದ ರಕ್ಷಣಾ ಸಚಿವಾಲಯ ಹೇಳಿದೆ.
ರಶ್ಯ ಖಂಡನೆ
ಮಾಸ್ಕೊ, ನ.24: ಟರ್ಕಿ-ಸಿರಿಯ ಗಡಿಯಲ್ಲಿ ತನ್ನ ಯುದ್ಧ ವಿಮಾನವನ್ನು ಟರ್ಕಿ ಹೊಡೆದು ರುಳಿಸಿರುವುದನ್ನು ರಶ್ಯ ಖಂಡಿಸಿದೆ. ಆದರೆ, ಈ ವಿಷಯದಲ್ಲಿ ಹೆಚ್ಚಿನದೇನನ್ನೂ ಹೇಳಲು ಅದು ನಿರಾಕರಿಸಿದೆ. ‘‘ಇದೊಂದು ಅತ್ಯಂತ ಗಂಭೀರ ಘಟನೆ’’ ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೊವ್ ವರದಿಗಾರರಿಗೆ ತಿಳಿಸಿದರು. ‘‘ನಮ್ಮಲ್ಲಿ ಪೂರ್ಣ ವಿವರಗಳು ಇಲ್ಲದಿರುವಾಗ ಯಾವುದೇ ವಿಷಯದ ಬಗ್ಗೆ ಹೇಳುವುದು ಸರಿಯಾಗುವುದಿಲ್ಲ’’ ಎಂದರು.

ಟರ್ಕಿ ಗಂಭೀರ ಪರಿಣಾಮ ಎದುರಿಸಲಿದೆ: ಪುತಿನ್
ರಶ್ಯದ ಸಮರ ವಿಮಾನವನ್ನು ಹೊಡೆದು ಉರುಳಿಸಿದ ಘಟನೆಯು ರಷ್ಯಾ ಹಾಗೂ ಟರ್ಕಿಯ ಸಂಬಂಧದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಟರ್ಕಿಗೆ ಎಚ್ಚರಿಕೆ ನೀಡಿದ್ದಾರೆ. ಈ ಮೂಲಕ ಉಗ್ರರಿಗೆ ಸಹಕರಿಸಿರುವ ಟರ್ಕಿಯು ರಶ್ಯದ ಬೆನ್ನಿಗೆ ಚೂರಿ ಇರಿದಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Write A Comment