ಕರ್ನಾಟಕ

ಕುವೆಂಪು ಮನೆಗೆ ಕನ್ನ: ಪದ್ಮವಿಭೂಷಣ ಪ್ರಶಸ್ತಿ ಹೊತ್ತೊಯ್ದ ಕಳ್ಳರು

Pinterest LinkedIn Tumblr

Kuvempu

ಶಿವಮೊಗ್ಗ, ನ.24: ಕನ್ನಡ ಸಾಹಿತ್ಯಕ್ಕೆ ಪ್ರಪ್ರಥಮ ಬಾರಿಗೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ, ರಸಋಷಿ, ರಾಷ್ಟ್ರಕವಿ ಖ್ಯಾತಿಯ ಸಾಹಿತಿ ದಿವಂಗತ ಕುವೆಂಪುರವರಿಗೆ ಸೇರಿದ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕುಪ್ಪಳ್ಳಿ ಗ್ರಾಮದಲ್ಲಿರುವ ‘ಕವಿ ಮನೆ’ ಯಲ್ಲಿ ಸೋಮವಾರ ರಾತ್ರಿ ಕಳ್ಳತನ ಕೃತ್ಯ ನಡೆದಿದೆ. ಕುವೆಂಪುಗೆ ಬಹುಮಾನ ರೂಪದಲ್ಲಿ ಬಂದಿದ್ದ ಬಂಗಾರದ ಪದಕಗಳನ್ನು ಕಳ್ಳರು ಹೊತ್ತೊಯ್ದಿದ್ದಾರೆ.

ಈ ಘಟನೆಯು ಸಾಹಿತ್ಯಾಸಕ್ತರು ಹಾಗೂ ಕುವೆಂಪು ಅಭಿಮಾನಿಗಳಲ್ಲಿ ತೀವ್ರ ನೋವುಂಟು ಮಾಡಿದೆ. ವಿಷಯ ತಿಳಿಯುತ್ತಿದ್ದಂತೆ ರಾತ್ರಿಯೇ ಪೊಲೀಸರು ಕುಪ್ಪಳ್ಳಿಯಲ್ಲಿರುವ ‘ಕವಿಮನೆ’ಗೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮಂಗಳವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚೆನ್ನಣ್ಣವರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ತೀರ್ಥಹಳ್ಳಿ ಡಿವೈಎಸ್‌ಪಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದರು.

ಹಾಗೆಯೇ ಬೆರಳಚ್ಚು, ಶ್ವಾನ ದಳ ತಂಡಗಳು ಘಟನಾ ಸ್ಥಳಕ್ಕಾಗಮಿಸಿ ಮಾಹಿತಿ ಕಲೆ ಹಾಕಿವೆ. ಈ ಕುರಿತಂತೆ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಏನಾಯ್ತು?: ‘ಕವಿ ಮನೆ’ಯ ಉಸ್ತುವಾರಿಯನ್ನು ಕುವೆಂಪು ಪ್ರತಿಷ್ಠಾನ ನೋಡಿಕೊಳ್ಳುತ್ತಿದೆ. ಹಗಲು- ರಾತ್ರಿ ಕಾವಲುಗಾರರನ್ನು ನಿಯೋಜಿಸಲಾಗಿದೆ. ರಾತ್ರಿ ಕಾವಲುಗಾರನೋರ್ವ ತನ್ನ ಪಾಳಿ ಮುಗಿದ ನಂತರ ಮನೆಗೆ ಊಟಕ್ಕೆ ತೆರಳಿದ್ದು, ಮತ್ತೋರ್ವ ಕಾವಲುಗಾರ ಆಗಮಿಸುವ ನಡುವಿನ ಸಮಯದಲ್ಲಿ ಈ ಕಳವು ಕೃತ್ಯ ನಡೆದಿರುವ ಶಂಕೆಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ಮನೆಯ ಹಿಂಬದಿಯಲ್ಲಿದ್ದ ಏಣಿಯ ಮೂಲಕ ಕಳ್ಳರು ಒಳ ಪ್ರವೇಶಿಸಿದ್ದಾರೆ. ನಂತರ ಮರದ ಶೋಕೇಸ್‌ನಲ್ಲಿರಿಸಲಾಗಿದ್ದ ಗಾಜುಗಳನ್ನು ಪುಡಿಗೈದಿದ್ದಾರೆ. 1968ರಲ್ಲಿ ಕುವೆಂಪುರವರಿಗೆ ಬಂದಿದ್ದ ಪದ್ಮವಿಭೂಷಣ ಪ್ರಶಸ್ತಿ, ಮೈಸೂರು ವಿಶ್ವ ವಿದ್ಯಾನಿಲಯದಿಂದ ನೀಡಲಾಗಿದ್ದ ಬಂಗಾರ ಲೇಪಿತ ಪದಕಗಳನ್ನು ಕಳ್ಳರು ಅಪಹರಿಸಿದ್ದಾರೆ. ಹಾಗೆಯೇ ಕೊಠಡಿಯೊಂದರಲ್ಲಿಟ್ಟಿದ್ದ ಸುಮಾರು 1 ಸಾವಿರ ರೂ. ನಗದು ಕೂಡ ಕಳ್ಳರು ಹೊತ್ತೊಯ್ದಿದ್ದಾರೆ ಎಂದು ಹೇಳಲಾಗಿದ್ದು, ಈ ಕುರಿತಂತೆ ಸ್ಪಷ್ಟ ಮಾಹಿತಿಗಳು ಇನ್ನಷ್ಟೆ ಲಭ್ಯವಾಗಬೇಕಾಗಿದೆ. ‘ಕವಿ ಮನೆ’ಯ ಕೊಠಡಿಯೊಂದರಲ್ಲಿದ್ದ ಲಾಕರ್ ಬಾಗಿಲು ತೆರೆಯಲು ಕಳ್ಳರು ವಿಫಲ ಯತ್ನ ನಡೆಸಿದ್ದಾರೆ. ಬಾಗಿಲು ತೆರೆಯಲು ಸಾಧ್ಯವಾಗದೆ ಹಿಂದಿರುಗಿದ್ದಾರೆ.

ಇದರಿಂದ ಆ ಲಾಕರ್‌ನಲ್ಲಿದ್ದ ಸುಮಾರು 50 ಸಾವಿರ ರೂ. ನಗದು ಸುರಕ್ಷಿತವಾಗಿ ಉಳಿದಿದೆ ಎಂದು ಸ್ಥಳೀಯ ಮೂಲಗಳು ಮಾಹಿತಿ ನೀಡಿವೆ. ಧ್ವಂಸ: ಎಲ್ಲಿ ತಮ್ಮ ಕೃತ್ಯ ಬಯಲಾಗುತ್ತದೆಯೋ ಎಂಬ ಆತಂಕದಿಂದ ‘ಕವಿ ಮೆನೆ’ಯ ಒಳಭಾಗದಲ್ಲಿ ಹಾಕಲಾಗಿದ್ದ ಐದಾರು ಸಿಸಿ ಕ್ಯಾಮರಾಗಳನ್ನು ಕಳ್ಳರು ಹಾಳುಗೆಡವಿದ್ದಾರೆ. ಈ ಕೃತ್ಯವು ಸಿಸಿ ಕ್ಯಾಮರಾದಲ್ಲಿ ಸೆರೆಯಾದ ದೃಶ್ಯಾವಳಿ ಸಂಗ್ರಹಿಸುವ ಡಿವಿಆರ್‌ನಲ್ಲಿ ದಾಖಲಾಗಿದೆ. ಇದನ್ನು ಪೊಲೀಸರು ವಶಕ್ಕೆ ಪಡೆದು ತಪಾಸಣೆ ನಡೆಸುತ್ತಿದ್ದಾರೆ. ದೃಶ್ಯಾವಳಿಯಲ್ಲಿ ಓರ್ವ ವ್ಯಕ್ತಿಯ ಚಹರೆ ಪತ್ತೆಯಾಗಿದ್ದು, ಇದರ ಆಧಾರದ ಮೇಲೆ ಕಳ್ಳರ ಪತ್ತೆ ಕಾರ್ಯವನ್ನು ಪೊಲೀಸರು ಚುರುಕುಗೊಳಿಸಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.

ಕುಪ್ಪಳ್ಳಿ ಗ್ರಾಮ ವ್ಯಾಪ್ತಿಗೆ ಬರುವ ದೇವಂಗಿ ಗ್ರಾಮ ಪಂಚಾಯತ್ ಸದಸ್ಯ ದೇವಂಗಿ ಅಶೋಕ್‌ರವರು ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಮಾತನಾಡಿ, ‘ರಾತ್ರಿಯೇ ಕಳವು ಕೃತ್ಯದ ಮಾಹಿತಿ ಗೊತ್ತಾಗಿದೆ. ‘ಕವಿ ಮನೆ’ಯಲ್ಲಿ ಕಳ್ಳತನ ನಡೆದಿರುವುದು ತಮಗೆ ಅತೀವ ನೋವುಂಟು ಮಾಡಿದೆ. ಕಳ್ಳರನ್ನು ಪತ್ತೆ ಹಚ್ಚಿ ಅವರು ಅಪಹರಿಸಿರುವ ಪದಕಗಳನ್ನು ವಾಪಸ್ ಪಡೆಯಬೇಕು. ಕಳ್ಳರ ವಿರುದ್ಧ ಶಿಸ್ತುಕ್ರಮ ಜರಗಿಸಬೇಕು’ ಎಂದು ಆಗ್ರಹಿಸಿದ್ದಾರೆ. ಸಾಹಿತ್ಯಾಸಕ್ತರ ನೋವು: ಸಾಹಿತ್ಯಾಸಕ್ತರ ಆರಾಧ್ಯ ಕೇಂದ್ರವಾಗಿದ್ದ ‘ಕವಿ ಮನೆ’ಯಲ್ಲಿ ಕಳವು ಕೃತ್ಯ ನಡೆದಿರುವುದು ಕುವೆಂಪು ಅಭಿಮಾನಿಗಳು ಹಾಗೂ ಸಾಹಿತ್ಯಾಸಕ್ತರಲ್ಲಿ ತೀವ್ರ ನೋವುಂಟು ಮಾಡಿದೆ. ‘ಕುವೆಂಪುರವರ ಬಗ್ಗೆ ಗೊತ್ತಿಲ್ಲದ ವ್ಯಕ್ತಿಗಳು ಮಾತ್ರ ಕವಿ ಮನೆಯಲ್ಲಿ ಕಳ್ಳತನ ಮಾಡಲು ಸಾಧ್ಯ. ಈ ಘಟನೆ ನಿಜಕ್ಕೂ ತಮ್ಮಲ್ಲಿ ತೀವ್ರ ನೋವುಂಟು ಮಾಡಿದೆ. ಮುಂದೆ ಈ ರೀತಿಯ ಘಟನೆಗಳು ನಡೆಯದಂತೆ ಎಚ್ಚರಿಕೆವಹಿಸಬೇಕು’ ಎಂದು ಕುವೆಂಪು ಅಭಿಮಾನಿಯೊಬ್ಬರು ಹೇಳುತ್ತಾರೆ.

Write A Comment