ಅಂತರಾಷ್ಟ್ರೀಯ

ಮಲೇಷ್ಯಾದಲ್ಲಿ ಸ್ವಾಮಿ ವಿವೇಕಾನಂದ ಪ್ರತಿಮೆ ಅನಾವರಣ

Pinterest LinkedIn Tumblr

4vivekanandaಕೌಲಾಲಂಪುರ: ಮಲೇಷ್ಯಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ಸ್ವಾಮಿ ವಿವೇಕಾನಂದ ಅವರ ಪ್ರತಿಮೆಯನ್ನು ಭಾನುವಾರ ಅನಾವರಣಗೊಳಿಸಿದರು.

ಮಲೇಷ್ಯಾದ ಪೆತಾಲಿಂಗ್ ಜಯಾದಲ್ಲಿರುವ ರಾಮಕೃಷ್ಣ ಆಶ್ರಮದಲ್ಲಿ ಸ್ವಾಮಿ ವಿವೇಕಾನಂದರ 12 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಲಾಗಿದೆ. ಈ ವೇಳೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು,  ಸ್ವಾಮಿ ವಿವೇಕಾನಂದ ಅವರು ಕೇವಲ ವ್ಯಕ್ತಿಯ ಹೆಸರಲ್ಲ. ಅವರು ಭಾರತೀಯರ ಆತ್ಮ, ಮನಸ್ಸು ಆಗಿದ್ದಾರೆ. ವಿವೇಕಾನಂದರು ಒಬ್ಬ ವ್ಯಕ್ತಿಯಾಗಿ ಅಲ್ಲ 1000 ವರ್ಷಗಳಿಗೂ ಹೆಚ್ಚು ಹಳೆಯದಾದ ಭಾರತೀಯ ಸಂಸ್ಕೃತಿಯ ಸಾಕಾರ ರೂಪವಾಗಿ ಗುರುತಿಸಿಕೊಂಡಿದ್ದಾರೆ.

‘ಅಪಾರ ಆತ್ಮವಿಶ್ವಾಸ, ದೂರದೃಷ್ಟಿ ಅವರದ್ದಾಗಿತ್ತು. ಭಾರತ ಬ್ರಿಟೀಷರ ಕಪಿ ಮುಷ್ಟಿಯಲ್ಲಿದ್ದ ಆ ದಿನಗಳಲ್ಲಿ ಮುಂದೆ ಭಾರತ ಜಾಗತಿಕವಾಗಿ ಅಭಿವೃದ್ಧಿ ಹೊಂದುವುದಾಗಿ ಹೇಳಿದ್ದರು. ವಿವೇಕಾನಂದರು ಭಾರತೀಯ ಸಂಸ್ಕೃತಿಯ ಪ್ರತೀಕ. ಅವರಿಂದ ಸತ್ಯದ ಹುಡುಕಾಟದ ಶಿಕ್ಷಣ ದೊರೆತಿದೆ’ ಎಂದು ಪ್ರಧಾನಿ ಹೇಳಿದರು.

“ಮಲೇಷ್ಯಾ ಸುಮಾರು 30 ಮಿಲಿಯನ್ ಜನಸಂಖ್ಯೆಯನ್ನು ಹೊಂದಿದೆ. ಇದರಲ್ಲಿ ಸುಮಾರು 2 ಲಕ್ಷದಷ್ಟು ಮಂದಿ ಭಾರತೀಯ ಮೂಲದವರಿದ್ದಾರೆ. ಈಗ ಆಸಿಯಾನ್ ಮತ್ತು ಪೂರ್ವ ಏಷ್ಯಾ ಶೃಂಗಗಳು ಮಾತನಾಡುತ್ತಿರುವ ‘ಏಕ ಏಷ್ಯಾ’ದ ಪರಿಕಲ್ಪನೆಯನ್ನು ಜಗತ್ತಿಗೆ ಮೊದಲು ಕೊಟ್ಟಿದ್ದೇ ಸ್ವಾಮಿ ವಿವೇಕಾನಂದ ಅವರು” ಎಂದು ಪ್ರಧಾನಿ ಮೋದಿ ಹೇಳಿದರು.

ಸುಮಾರು 2000ಕ್ಕೂ ಹೆಚ್ಚು ಮಂದಿ ಭಾರತೀಯರ ಹರ್ಷೋದ್ಘಾರಗಳ ಮಧ್ಯೆಯೇ ಪ್ರತಿಮೆಯನ್ನು ಅನಾವರಣಗೊಳಿಸಿದ ಪ್ರಧಾನಿ ‘ಜಗತ್ತು ಪ್ರಸ್ತುತ ಎದುರಿಸುತ್ತಿರುವ ಅತಿದೊಡ್ಡ ಸಮಸ್ಯೆಗಳಾದ ಪರಿಸರ ಬದಲಾವಣೆ ಮತ್ತು ಭಯೋತ್ಪಾದನೆ ಸಮಸ್ಯೆಯನ್ನು ನಿವಾರಿಸಲು ಸತ್ಯವನ್ನು ತಿಳಿದುಕೊಳ್ಳುವುದು ಅತ್ಯಂತ ಅಗತ್ಯ. ಘರ್ಷಣೆಗಳು ನಿಂತಾಗ ಭಯೋತ್ಪಾದನೆ ಕೊನೆಗೊಳ್ಳುತ್ತದೆ’ ಎಂದು ಹೇಳಿದರು.

Write A Comment