ವಿಶ್ವಸಂಸ್ಥೆ: ಐದು ವರ್ಷದೊಳಗಿನ ಹೆಣ್ಣು ಮಕ್ಕಳ ಸಾವಿನಲ್ಲಿ ಜಗತ್ತಿನ ಎಲ್ಲಾ ರಾಷ್ಟ್ರಗಳಿಗಿಂತ ಮುಂದಿರು ವ ಏಕೈಕ ದೇಶ ಭಾರತ ಎಂದು ವಿಶ್ವಸಂಸ್ಥೆ ವರದಿ ಮಾಡಿದೆ. ಜಗತ್ತಿನ ಇತರ ದೇಶಗಳಿಗೆ ಹೋಲಿಕೆ ಮಾಡಿದರೆ ಭಾರತದಲ್ಲಿ ಹೆಣ್ಣು-ಗಂಡಿನ ಲಿಂಗಾನುಪಾತ ಈ ರೀತಿ ಆಘಾತಕಾರಿಯಾಗಿ ಹೆಚ್ಚುತ್ತಿರುವುದು ಅಲ್ಲಿನ ಸಾಮಾಜಿಕ ವ್ಯವಸ್ಥೆಯ ಮೇಲೆ ತೀರಾ ಕೆಟ್ಟ ಪರಿಣಾಮ ಬೀರಿದೆ. ಈ ಕಾರಣದಿಂದಾಗಿಯೇ ಭಾರತದಲ್ಲಿ ಲಿಂಗಾನುಪಾತ ಏರುಪೇರಾಗಿದೆ. ಐದು ವರ್ಷದೊಳಗಿನ ಗಂಡು ಮಕ್ಕಳ ಸಾವು 93ರ ಸಂಖ್ಯೆಯಲ್ಲಿದ್ದರೆ ಅದೇ ಐದು ವರ್ಷದೊಳಗಿನ ಹೆಣ್ಣು ಮಕ್ಕಳ ಸಾವು ನೂರನ್ನು ದಾಟಿರುತ್ತದೆ.
ಪುರುಷರು ಹೆಚ್ಚಿನ ಸಂಖ್ಯೆಯಲ್ಲಿರುವ ರಾಷ್ಟ್ರಗಳಲ್ಲಿ ಭಾರತ ಕೂಡ ಒಂದು. ಪೂರ್ವ ಏಷ್ಯಾ, ದಕ್ಷಿಣ ಏಷ್ಯಾ, ಪಶ್ಚಿಮ ಏಷ್ಯಾಗಳಲ್ಲಿ 2015ನೇ ಸಾಲಿಗೆ ನಡೆಸಿದ ಸಮೀಕ್ಷಾ ವರದಿಯಲ್ಲಿ ಭಾರತ ಅತ್ಯಂತ ಹೆಚ್ಚು ಹೆಣ್ಣು ಶಿಶುಗಳನ್ನು ಕಳೆದುಕೊಳ್ಳುತ್ತಿರುವುದು ಬೆಳಕಿಗೆ ಬಂದಿದೆ.
ಭಾರತದಲ್ಲಿ 1996 ರಿಂದ ನೋಡಿದರೆ ಸರ್ಕಾರಗಳು ಹೆಣ್ಣು ಮಕ್ಕಳ ಸಾವು ತಡೆಯಲು ಸಾಕಷ್ಟು ಕಾಯ್ದೆಗಳನ್ನು ರೂಪಿಸಿದೆ. ಆದರೆ ಆ ಕಾನೂನುಗಳು ಇದುವರೆಗೆ ನಿರೀಕ್ಷಿತ ಮಟ್ಟದಲ್ಲಿ ಕೆಲಸ ಮಾಡಿಲ್ಲ. ಹಾಗಾಗಿ ಹೆಣ್ಣು ಮಕ್ಕಳ ಸಾವಿನಲ್ಲಿ ಅಲ್ಪಸ್ವಲ್ಪ ಮಾತ್ರ ನಿಯಂತ್ರಣಕ್ಕೆ ಬಂದಿದೆ ಎನ್ನಬಹುದು. ಜಾಗತಿಕ ಮಟ್ಟದಲ್ಲಿ ಪರಿಗಣಿಸಿದರೆ ಭಾರತದಲ್ಲಿ ಪುರುಷರಿಗಿಂತ ಹೆಣ್ಣು ಮಕ್ಕಳ ಆಯುಷ್ಯ ಹೆಚ್ಚಿದೆ. ಉದಾ: ಮಹಿಳೆಯರು ಸರಾಸರಿ 72 ವರ್ಷಗಳ ಕಾಲ ಬದುಕಿದರೆ, ಪುರುಷರ ಜೀವಿತಾವಧಿ ಸರಾಸರಿ 68 ವರ್ಷಗಳಾಗಿದೆ ಎಂದು ವರದಿ ತಿಳಿಸಿದೆ. ಇನ್ನು ಇತರ ದೇಶಗಳ ಜೊತೆ ಹೋಲಿಸುವುದಾದರೆ ಭಾರತದಲ್ಲಿ ಮಹಿಳಾ ಉದ್ಯೋಗಿಗಳ ಸಂಖ್ಯೆ ಶೇ.50 ರಷ್ಟಿದ್ದರೆ, ಪುರುಷ ಉದ್ಯೋಗಿಗಳ ಸಂಖ್ಯೆ ಶೇ.77. ಕಾರ್ಮಿಕ ಶಕ್ತಿಯಲ್ಲಿ ಕೂಡ ಈ ಲಿಂಗಾನುಪಾತ ಗಣನೀಯವಾಗಿ ಏರುಪೇರಾಗಿದೆ.