ಕರ್ನಾಟಕ

ಕಾನೂನು ಸುವ್ಯವಸ್ಥೆ ನಿಯಂತ್ರನದಲ್ಲಿದ್ದರೆ ಅತ್ಯಾಚಾರ, ಕೊಲೆ, ಸುಲಿಗೆ, ದರೋಡೆ ಮರುಕಳಿಸುತ್ತಿರುವುದೇಕೆ..? : ಬಿಎಸ್ವೈ

Pinterest LinkedIn Tumblr

yaddiಬೆಂಗಳೂರು, ಅ.22-ರಾಜ್ಯದಲ್ಲಿ ಹಾಡುಹಗಲೇ ಅತ್ಯಾಚಾರ, ಕೊಲೆ, ಸುಲಿಗೆ, ದರೋಡೆ, ಸರಗಳ್ಳತನ ನಡೆಯುತ್ತಿದ್ದರೂ ಕಾನೂನು ಸುವ್ಯವಸ್ಥೆ ನಿಯಂತ್ರಣದಲ್ಲಿದೆ ಎಂದು ಮುಖ್ಯಮಂತ್ರಿ ಹೇಳಿರುವುದು ಸರಿಯಲ್ಲ. ಇದರಿಂದ ಮತ್ತಷ್ಟು ಘಟನೆಗಳು  ನಡೆಯುತ್ತವೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕಿಡಿಕಾರಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಧಾನಿ ಬೆಂಗಳೂರಿನಲ್ಲಿ ಮಹಿಳೆಯರ ಸರ ಅಪಹರಣಗಳು ನಿರಂತರವಾಗಿ ನಡೆಯುತ್ತಲೇ ಇವೆ. ಮಹಿಳೆಯರ, ಮಕ್ಕಳ ಮೇಲೆ ಅತ್ಯಾಚಾರದಂತಹ ಹೀನ ಕೃತ್ಯಗಳು ಮರುಕಳಿಸುತ್ತಲೇ ಇವೆ. ಆದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾನೂನು ಸುವ್ಯವಸ್ಥೆ ನಿಯಂತ್ರಣದಲ್ಲಿದೆ ಎಂದು ಹೇಳುತ್ತಿದ್ದಾರೆ. ಅವರ ಪ್ರಕಾರ ಇನ್ನು ಇಂತಹ ಪ್ರಕರಣಗಳು ಎಷ್ಟು ನಡೆಯಬೇಕು ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ನಡೆಯುತ್ತಿರುವ ಪ್ರಕರಣಗಳನ್ನು ಅವಲೋಕಿಸಿದರೆ ಸರ್ಕಾರ ಬದುಕಿದೆಯೇ ಎಂಬ ಪ್ರಶ್ನೆ ಮೂಡುತ್ತದೆ. ಗೃಹ ಸಚಿವರು ಪೊಲೀಸ್ ಇಲಾಖೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಧಿಕಾರಿಗಳೇ ಅವರ ಮಾತು ಕೇಳದ ಮೇಲೆ ಸಚಿವರಾಗಿ ಏತಕ್ಕೆ ಮುಂದುವರೆಯಬೇಕು ಎಂದು ವ್ಯಂಗ್ಯವಾಡಿದರು.

ವಿರೋಧ ಪಕ್ಷಗಳ ನಾಯಕರು ಸರ್ಕಾರ ತಪ್ಪು ಮಾಡಿದಾಗ ಎಚ್ಚರಿಸುವುದು ಸರ್ವೇ ಸಾಮಾನ್ಯ. ಟೀಕೆ ಮಾಡಿದ್ದಕ್ಕೆ ನಮ್ಮನ್ನು ಕಾಮಾಲೆ ಇದೆ ಎನ್ನುವುದಾದರೆ ಹಳದಿ ಕಣ್ಣು ಇರುವ ಸಿಎಂ ಮೊದಲು ಘಟನೆಗಳನ್ನು ನೋಡಲಿ ಎಂದು ಕುಹುಕವಾಡಿದರು.  ಪಕ್ಷದ ವರಿಷ್ಠರು ನನ್ನ ಮೇಲೆ ನಂಬಿಕೆ ಇಟ್ಟು ರಾಜ್ಯಾಧ್ಯಕ್ಷ ಸ್ಥಾನ ನೀಡಿದರೆ ಅದನ್ನು ನಿರ್ವಹಿಸಲು ನಾನು ಸಿದ್ಧನಿದ್ದೇನೆ. ರಾಷ್ಟ್ರ ರಾಜಕಾರಣಕ್ಕಿಂತ ನನಗೆ ರಾಜ್ಯರಾಜಕಾರಣದಲ್ಲೇ ಹೆಚ್ಚಿನ ಆಸಕ್ತಿ ಇದೆ. ಅಧ್ಯಕ್ಷ ಸ್ಥಾನ ನೀಡುವಂತೆ ನಾನು ಲಾಬಿ ನಡೆಸುವುದಿಲ್ಲ. ಪಕ್ಷದ ಹೈಕಮಾಂಡ್ ಸೂಕ್ತ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಹೇಳಿದರು.

Write A Comment