ಬೆಂಗಳೂರು-ವಿಶ್ವವಿಖ್ಯಾತ ಮೈಸೂರು ದಸರಾ ವೀಕ್ಷಿಸಲು ತೆರಳುವ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮೈಸೂರಿಗೆ ಹೆಚ್ಚುವರಿಯಾಗಿ 400 ಬಸ್ ವ್ಯವಸ್ಥೆಯನ್ನು ಕೆಎಸ್ಆರ್ಟಿಸಿ ಮಾಡಿದೆ.
ನಾಳೆ ಮೈಸೂರಿನಲ್ಲಿ ನಡೆಯುವ ಜಂಬೂಸವಾರಿ ವೀಕ್ಷಣೆಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ತೆರಳುವ ಹಿನ್ನೆಲೆಯಲ್ಲಿ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಲಾಗಿದೆ. ಹಾಲಿ ಸಂಚರಿಸುತ್ತಿರುವ ಬಸ್ಗಳ ಜತೆಗೆ ಹೆಚ್ಚುವರಿ ಬಸ್ಗಳು ಕೂಡ ಒದಗಿಸಲಾಗಿದೆ. ವಿಜಯದಶಮಿಯಾದ ನಾಳೆ ಜಂಬೂಸವಾರಿ ಮುಗಿದ ನಂತರ ಮೈಸೂರಿನಿಂದ ಬೆಂಗಳೂರಿಗೆ ವಾಪಾಸಾಗುವ ಸಂಖ್ಯೆ ಹೆಚ್ಚುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಈ ವ್ಯವಸ್ಥೆ ಮಾಡಲಾಗಿದೆ ಎಂದು ಕೆಎಸ್ಆರ್ಟಿಸಿ ತಿಳಿಸಿದೆ.
ಆಯುಧ ಪೂಜೆ, ವಿಜಯದಶಮಿ, ಮೊಹರಂಸೇರಿದಂತೆ ಸರಣಿ ರಜೆಗಳು ಇರುವುದರಿಂದ ಪ್ರಯಾಣಿಕರ ಸಂಖ್ಯೆ ಸಹಜವಾಗಿಯೇ ಹೆಚ್ಚಾಗಿರುವುದರಿಂದ ನಿನ್ನೆಯಿಂದಲೇ 1500 ಬಸ್ಗಳನ್ನು ಹೆಚ್ಚುವರಿಯಾಗಿ ಒದಗಿಸಲಾಗಿದೆ.
ಈ ಹೆಚ್ಚುವರಿ ಬಸ್ಗಳು ಅ.27ರವರೆಗೆ ಸಂಚರಿಸಲಿವೆ. ಬೆಂಗಳೂರಿನಿಂದ ಮೈಸೂರು, ಧರ್ಮಸ್ಥಳ, ತಿರುಪತಿ, ಹುಬ್ಬಳ್ಳಿ ಸೇರಿದಂತೆ ಹಲವು ಪ್ರಮುಖ ನಗರಗಳ ನಡುವೆ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಲಾಗಿದೆ. ಸರಣಿ ರಜೆ ಹಿನ್ನೆಲೆಯಲ್ಲಿ ತಮ್ಮ ತಮ್ಮ ಊರಿಗೆ ತೆರಳುವ ಪ್ರಯಾಣಿಕರು ಸಂಖ್ಯೆ ನಿನ್ನೆಯಿಂದಲೇ ಹೆಚ್ಚಾಗಿದೆ. ಹೆಚ್ಚುವರಿ ಬಸ್ ಒದಗಿಸಿದ್ದರೂ ಕೂಡ ಬಸ್ಗಳಲ್ಲಿ ಪ್ರಯಾಣಿಕರು ತುಂಬಿ ತುಳುಕುತ್ತಿರುವ ಸರ್ವೆ ಸಾಮಾನ್ಯವಾಗಿತ್ತು. ಬಸ್ ನಿಲ್ದಾಣದಲ್ಲೂ ಕೂಡ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿತ್ತು.