ಅಂತರಾಷ್ಟ್ರೀಯ

ಮತ್ತೆ ಪ್ರಾಬಲ್ಯ ಮೆರೆದ ತಾಲಿಬಾನ್; ಕುಂದೂಝ್ ನಗರ ಉಗ್ರರ ವಶಕ್ಕೆ

Pinterest LinkedIn Tumblr

Afghanistan-forcesಕಾಬುಲ್: ಆಫ್ಘಾನಿಸ್ತಾನದಲ್ಲಿ ಮತ್ತೆ ತಾಲಿಬಾನ್ ಉಗ್ರರು ತಮ್ಮ ಪ್ರಾಬಲ್ಯ ಮೆರೆದಿದ್ದು, ಭದ್ರತಾ ಪಡೆಗಳ ವಶದಲ್ಲಿದ್ದ ಕುಂದೂಝ್ ನಗರವನ್ನು ತಮ್ಮ ವಶಕ್ಕೆ ಪಡೆದಿದ್ದಾರೆ.

ನ್ಯಾಟೋ ಪಡೆಗಳ ಆಗಮನ ಮತ್ತು ಅವರಿಂದ ತರಬೇತಿ ಪಡೆದ ಯೋಧರ ಸತತ ಕಾರ್ಯಾಚರಣೆಯಿಂದಾಗಿ ತಾಲಿಬಾನ್ ಪ್ರಬಾಲ್ಯವಿದ್ದ ಪ್ರದೇಶಗಳನ್ನು ಆಫ್ಘನ್ ಪಡೆಗಳು ವಶಪಡಿಸಿಕೊಂಡಿದ್ದವು. ಆದರೆ ತಾಲಿಬಾನ್ ಪಡೆಗಳು ಆಫ್ಘನ್ ಭದ್ರತಾ ಪಡೆಗಳ ವಿರುದ್ಧ ತಿರುಗಿಬಿದ್ದಿದ್ದು, ಸೋಮವಾರ ಕುಂದೂಝ್ ನಗರವನ್ನು ವಶಕ್ಕೆ ಪಡೆದಿವೆ.

2001ರಲ್ಲಿ ಅಮೆರಿಕದ ನೇತೃತ್ವದ ನ್ಯಾಟೊ ಪಡೆಗಳು ದಾಳಿ ಪ್ರಾರಂಭಿಸಿದ ನಂತರ ತಾಲಿಬಾನ್ ಉಗ್ರರು ತಮ್ಮ ಪ್ರಾಬಲ್ಯ ಕಳೆದುಕೊಂಡಿದ್ದರು. ಈಗ ತಾಲಿಬಾನ್ ಉಗ್ರರು 15 ವರ್ಷಗಳ ನಂತರ ಪ್ರಬಲ ಪ್ರದೇಶವೊಂದರ ಮೇಲೆ ಹಿಡಿತ ಸ್ಥಾಪಿಸಿದ್ದು, ನೂರಾರು ಸಂಖ್ಯೆಯಲ್ಲಿದ್ದ ತಾಲಿಬಾನ್ ಉಗ್ರರು ಸರ್ಕಾರಿ ಪಡೆಗಳನ್ನು ಹಿಮ್ಮೆಟ್ಟಿಸಿ ನಗರವನ್ನು ವಶಕ್ಕೆ ಪಡೆದಿದ್ದಾರೆ. ಅಮೆರಿಕ ಮತ್ತು ನ್ಯಾಟೊ ಪಡೆಗಳು ಕಳೆದ ವರ್ಷ ಯೋಧರನ್ನು ಹಿಂದಕ್ಕೆ ಕರೆಸಿಕೊಂಡ ನಂತರ ತಾಲಿಬಾನ್ ಉಗ್ರರು ಮತ್ತೆ ತಮ್ಮ ಪ್ರಾಬಲ್ಯವನ್ನು ಸ್ಥಾಪಿಸಲು ಪ್ರಯತ್ನಿಸುತ್ತಿದ್ದರು. ನಗರದ ಮೇಲೆ ದಾಳಿ ನಡೆಸಿರುವ ಉಗ್ರರು ಪ್ರಮುಖ ಸರ್ಕಾರಿ ಕಟ್ಟಡಗಳನ್ನು ವಶಕ್ಕೆ ಪಡೆದಿದ್ದು, ಸೆರೆಯಲ್ಲಿದ್ದ ನೂರಾರು ತಾಲಿಬಾನ್ ಉಗ್ರರನ್ನು ಬಿಡುಗಡೆ ಮಾಡಿದ್ದಾರೆ.

ಕುಂದೂಝ್ ನಗರವನ್ನು ಮರಳಿ ಪಡೆಯಲು ಆಫ್ಘನ್ ಪಡೆಗಳ ಶತಪ್ರಯತ್ನ

ಇದೇ ವೇಳೆ ಭದ್ರತಾ ಪಡೆಗಳ ಕೈಯಿಂದ ಜಾರಿ ಹೋಗಿರುವ ಕುಂದೂಝ್ ನಗರವನ್ನು ಮತ್ತೆ ತಮ್ಮ ವಶಕ್ಕೆ ಪಡೆಯಲು ಆಫ್ಘನ್ ಪಡೆಗಳ ಶತ ಪ್ರಯತ್ನ ನಡೆಸಿದ್ದು, ಹೋರಾಟದ ಮೂಲಕವೇ ನಗರವನ್ನು ವಶಕ್ಕೆ ಪಡೆಯುವುದಾಗಿ ಹೇಳಿಕೊಂಡಿದೆ.

ಆಫ್ಘಾನಿಸ್ತಾನದ ಭದ್ರತಾ ಪಡೆ ಹಾಗೂ ನ್ಯಾಟೋ ತರಬೇತಿ ಪಡೆದ ಭದ್ರತಾ ಸಿಬ್ಬಂದಿಗಳು ದಂಗೆಕೋರರ ಪತ್ತೆಗೆ ಮುಂದಾಗಿದ್ದು, ತುರ್ತು ಕಾರ್ಯಾಚರಣೆ ನಡೆಸುತ್ತಿವೆ. ಈ ಬಗ್ಗೆ ಮಾಹಿತಿ ನೀಡಿರುವ ಆಫ್ಘನ್ ಆಂತರಿಕ ಸಚಿವಾಲಯದ ವಕ್ತಾರ ಸೆದಿಕ್ ಸಿದ್ದಿಕ್ಕಿ ಅವರು, ಹೋರಾಟದ ಮೂಲಕ ಶೀಘ್ರವೇ ನಗರವನ್ನು ಮರಳಿ ಪಡೆಯುವುದಾಗಿ ಹೇಳಿದ್ದಾರೆ. ಅಲ್ಲದೆ ಈಗಾಗಲೇ ಭದ್ರತಾ ಪಡೆಗಳು ದಾಳಿಗೆ ಸಜ್ಜಾಗಿದ್ದು, ದಾಳಿ ಕುರಿತಂತೆ ತಂತ್ರ ಹೆಣೆಯಲಾಗುತ್ತಿದೆ. ತಾಲಿಬಾನ್ ದಂಗೆಕೋರರು ಪೊಲೀಸ್ ವಾಹನಗಳಿಗೆ ಕಲ್ಲು ತೂರಾಟ ನಡೆಸಿದ್ದಾರೆ. ಅನೇಕ ಸರ್ಕಾರಿ ವಾಹನಗಳಿಗೆ ಬೆಂಕಿ ಇಟ್ಟಿದ್ದಾರೆ. ನ್ಯಾಟೋ ತರಬೇತಿ ಪಡೆದ ಕಮಾಂಡೋಗಳ ಸಹಾಯದಿಂದ ದಂಗೆಕೋರರ ವಿರುದ್ಧದ ಹೋರಾಟಕ್ಕೆ ಸರ್ಕಾರ ಮುಂದಾಗಲಾಗಿದೆ ಎಂದು ಹೇಳಿದ್ದಾರೆ.

ಒಟ್ಟಾರೆ ಆಫ್ಘಾನಿಸ್ತಾನ ಬಲವಾಗಿ ಬೇರೂರಿರುವ ತಾಲಿಬಾನ್ ಮೂಲಭೂತವಾದಿಗಳು ಅಷ್ಟು ಸುಲಭವಾಗಿ ತಮ್ಮ ಹಿಡಿತ ಸಡಿಲಿಸುವ ಲಕ್ಷಣಗಳು ಕಾಣುತ್ತಿಲ್ಲ.

Write A Comment