ಕರ್ನಾಟಕ

ಕೃಷಿ ಇಲಾಖೆಯ ಮುಖ್ಯಸ್ಥರೊಂದಿಗೆ ಕಾರ್ಯಾಗಾರ: 100 ಎಪಿಎಂಸಿಗಳಲ್ಲಿ ಏಕೀಕೃತ ಮಾರುಕಟ್ಟೆ ವ್ಯವಸ್ಥೆ ಜಾರಿ

Pinterest LinkedIn Tumblr

dalawai-fiಬೆಂಗಳೂರು, ಸೆ. 29: ರಾಷ್ಟ್ರೀಯ ಕೃಷಿ ಮಾರುಕಟ್ಟೆ ಯೋಜನೆ ಅಡಿ 2016ರ ಮಾರ್ಚ್ ಅಂತ್ಯಕ್ಕೆ ದೇಶದ ನೂರು ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ)ಗಳನ್ನು ಇ-ಆಕ್ಷನ್ (ಏಕೀಕೃತ ಮಾರುಕಟ್ಟೆ ವ್ಯವಸ್ಥೆ) ವ್ಯಾಪ್ತಿಗೊಳಪಡಿಸುವ ಗುರಿ ಹೊಂದಿದೆ ಎಂದು ಕೇಂದ್ರ ಕೃಷಿ, ಸಹಕಾರ ಮತ್ತು ರೈತರ ಕಲ್ಯಾಣ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಡಾ.ಅಶೋಕ್ ದಳವಾಯಿ ತಿಳಿಸಿದ್ದಾರೆ.

ನಗರದ ಕೃಷಿ ಇಲಾಖೆಯಲ್ಲಿ ಕೃಷಿ ಬೆಲೆ ಆಯೋಗ ಮಂಗಳವಾರ ಹಮ್ಮಿಕೊಂಡಿದ್ದ ರಾಜ್ಯದ ರೈತರ ಉತ್ಪನ್ನಗಳಿಗೆ ಬೆಂಬಲ ಬೆಲೆ ಮತ್ತು ಖರೀದಿ ವ್ಯವಸ್ಥೆಯನ್ನು ಸದೃಢಗೊಳಿಸುವ ಕುರಿತು ಒಂದು ದಿನದ ಕಾರ್ಯಾಗಾರದಲ್ಲಿ ಪಾಲ್ಗೊಂಡ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಮಧ್ಯವರ್ತಿಗಳ ಏಕಸ್ವಾಮ್ಯ ನಿಯಂತ್ರಿಸಲು ರಾಷ್ಟ್ರೀಯ ಕೃಷಿ ಮಾರುಕಟ್ಟೆ ಯೋಜನೆ ಅಡಿ ದೇಶದ ಎಲ್ಲ ಎಪಿಎಂಸಿಗಳನ್ನು ಏಕೀಕೃತ ಮಾರುಕಟ್ಟೆ ವ್ಯವಸ್ಥೆ ವ್ಯಾಪ್ತಿಗೊಳಪಡಿಸಲು ನಿರ್ಧರಿಸಲಾಗಿದೆ. ಈ ವ್ಯವಸ್ಥೆ ಅಳವಡಿಸಿಕೊಳ್ಳಲು ಈಗಾಗಲೇ ಕರ್ನಾಟಕ, ತೆಲಂಗಾಣ ಸೇರಿ ದಂತೆ 11 ರಾಜ್ಯಗಳು ಆಸಕ್ತಿ ತೋರಿಸಿವೆ. ಈ ಏಕೀಕೃತ ಮಾರುಕಟ್ಟೆ ವ್ಯವಸ್ಥೆಗೆ ಕೇಂದ್ರ ಸರಕಾರ ಒಂದು ಪ್ರತ್ಯೇಕ ಸಾಫ್ಟ್ ವೇರ್ ಅಭಿವೃದ್ಧಿಪಡಿ ಸುತ್ತಿದ್ದು, ಡಿಸೆಂಬರ್‌ಗೆ ಅದು ಲೋಕಾರ್ಪಣೆ ಆಗಲಿದೆ ಎಂದರು.

ಈ ನೂತನ ವ್ಯವಸ್ಥೆಯಿಂದ ರೈತರು ನೇರವಾಗಿ ಹರಾಜು ಪ್ರಕ್ರಿ ಯೆಯಲ್ಲಿ ಭಾಗವಹಿಸಬಹುದು. ರೈತರು ಖುದ್ದಾಗಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವುದರಿಂದ ಮಧ್ಯವರ್ತಿಗಳ ಹಾವಳಿ ತಪ್ಪಲಿದೆ. ಹಣ ಕೂಡ ನೇರವಾಗಿ ರೈತರ ಖಾತೆಗೆ ಜಮೆ ಆಗಲಿದೆ ಎಂದರು.

ಈ ಸಂಬಂಧ ಸಲಹೆಗಾರರನ್ನು ಒಳಗೊಂಡ ಸಮಿತಿಯನ್ನು ನೇಮಿಸಲಾಗಿದೆ. ಎಲ್ಲ ಪ್ರಕಾರದ ಉತ್ಪನ್ನಗಳು ಈ ವ್ಯವಸ್ಥೆ ಏಕೀಕೃತ ಮಾರುಕಟ್ಟೆ ವ್ಯವಸ್ಥೆ ಅಡಿ ಬರಲಿವೆ. ಮಾರ್ಚ್ ಅಂತ್ಯದೊಳಗೆ ನೂರು ಎಪಿಎಂಸಿಗಳು ಈ ವ್ಯಾಪ್ತಿಗೊಳಪಡಲಿವೆ ಎಂದರು.

ರಾಷ್ಟ್ರೀಯ ಕೃಷಿ ಮಾರುಕಟ್ಟೆ ಯೋಜನೆ ಮೂಲ ಉದ್ದೇಶ ಮಧ್ಯವರ್ತಿಗಳ ಏಕಸ್ವಾಮ್ಯ ನಿಯಂತ್ರಿಸುವುದು. ಆ ಮೂಲಕ ರೈತರ ಶೋಷಣೆ ತಪ್ಪಿಸುವುದು. ಏಕಪ್ರಕಾರ ಲೇವಿ ವಿಧಿಸುವುದು, ಎಲ್ಲ ಎಪಿಎಂಸಿಗಳಿಗೆ ಒಂದೇ ಪ್ರಕಾರದ ಪರವಾನಿಗೆ ನೀಡುವುದು ಆಗಿದೆ. ಯೋಜನೆ ಅಡಿ ಸರಕಾರ ಮೂರು ವರ್ಷಗಳಲ್ಲಿ 200 ಕೋಟಿ ರೂ. ನೆರವು ನೀಡಲಿದೆ. ಅದರಲ್ಲಿ ಮೊದಲ ಹಂತದಲ್ಲಿ ಸಾಫ್ಟ್‌ವೇರ್ ಅಭಿವೃದ್ಧಿಪಡಿಸಲಾಗುತ್ತಿದ್ದು, ಈ ವ್ಯವಸ್ಥೆ ಅಳವಡಿಸಲು ಮುಂದೆಬರುವ ಎಪಿಎಂಸಿಗಳಿಗೆ ಮೂಲಸೌಕರ್ಯಕ್ಕಾಗಿ ತಲಾ ಮೂರು ಲಕ್ಷ ರೂ. ನೀಡಲಾಗುವುದು ಎಂದು ವಿವರಿಸಿದರು.

ಕಾರ್ಯಾಗಾರದಲ್ಲಿ ಭಾರತೀಯ ಸಾಮಾಜಿಕ ಆರ್ಥಿಕ ಕೇಂದ್ರದ ಮಾಜಿ ನಿರ್ದೇಶಕ ಪ್ರೊ.ಆರ್.ಎಸ್. ದೇಶಪಾಂಡೆ, ಕೃಷಿ ವೆಚ್ಚ ಮತ್ತು ಬೆಲೆ ಆಯೋಗ (ಸಿಎಸಿಪಿ) ಸದಸ್ಯ ಡಿ.ಎಸ್. ರಘು, ತೋಟಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೀವ್ ಚಾವ್ಲ್ಲಾ, ಕೃಷಿ ಇಲಾಖೆ ಆಯುಕ್ತ ಪಾಂಡುರಂಗ ನಾಯಕ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಆಯುಕ್ತ ಎಸ್.ಎಸ್. ಪಟ್ಟಣಶೆಟ್ಟಿ, ರೈತ ಮುಖಂಡರಾದ ಕೆ.ಎಸ್. ಪುಟ್ಟಣ್ಣಯ್ಯ, ಕುರುಬೂರು ಶಾಂತಕುಮಾರ್, ಕೋಡಿಹಳ್ಳಿ ಚಂದ್ರಶೇಖರ್ ಸೇರಿ ಪ್ರಮುಖರು ಉಪಸ್ಥಿತರಿದ್ದರು.

ಬೆಂಬಲ ಬೆಲೆ ಶಾಸನ ಸ್ವರೂಪ ನೀಡಿ: ಕೃಷಿ ಉತ್ಪನ್ನಗಳಿಗೆ ಸರಕಾರಘೋಷಿಸುವ ಬೆಂಬಲ ಬೆಲೆಗೆ ಶಾಸನಬದ್ಧ ಸ್ವರೂಪ ಕೊಡಬೇಕು. ಸಮೀಕ್ಷೆ ಪ್ರಕಾರ ಶೇ. 70ರಷ್ಟು ಎಪಿಎಂಸಿಗಳಲ್ಲಿ ಸರಕಾರ ನಿಗದಿಪಡಿಸಿದ ಬೆಂಬಲ ಬೆಲೆಗಿಂತ ಕಡಿಮೆ ಬೆಲೆಯಲ್ಲಿ ಕೃಷಿ ಉತ್ಪನ್ನಗಳು ಮಾರಾಟ ಆಗುತ್ತಿವೆ. ಆದ್ದರಿಂದ ಬೆಂಬಲ ಬೆಲೆಗೆ ಶಾಸನಬದ್ಧ ಸ್ವರೂಪ ಕೊಡುವ ಅಗತ್ಯವಿದೆ ಎಂದು ಎಂದು ರಾಜ್ಯ ಬೆಲೆ ಆಯೋಗದ ಅಧ್ಯಕ್ಷ ಡಾ.ಟಿ.ಎನ್.ಪ್ರಕಾಶ್ ಕಮ್ಮರಡಿ ಆಗ್ರಹಿಸಿದರು.

Write A Comment