ಅಂತರಾಷ್ಟ್ರೀಯ

ಸಿರಿಯಾ: ವಾಯುದಾಳಿಯಲ್ಲಿ ಕನಿಷ್ಟ 23 ಮಂದಿ ಸಾವು..!

Pinterest LinkedIn Tumblr

us-airstrikes-in-syriaಬೈರೂತ್: ಉಗ್ರಗಾಮಿ ಸಂಘಟನೆ ಇಸಿಸ್ ವಿರುದ್ಧ ಸಿರಿಯಾ ಮತ್ತು ಅಮೆರಿಕ ಮೈತ್ರಿ ಪಡೆಗಳು ವಾಯುದಾಳಿ ಆರಂಭಿಸಿದ್ದು, ವಾಯುದಾಳಿಯಲ್ಲಿ ಕನಿಷ್ಟ 23 ಮಂದಿ ಸಾವಿಗೀಡಾಗಿದ್ದಾರೆ ಎಂದು  ತಿಳಿದುಬಂದಿದೆ.

ಇಸಿಸ್ ಉಗ್ರಗಾಮಿ ಸಂಘಟನೆಯ ಜಿಹಾದಿಗಳ ಹಿಡಿತದಲ್ಲಿದ್ದ ಪೂರ್ವ ಸಿರಿಯಾದ ಮಾರುಕಟ್ಟೆಯೊಂದರ ಮೇಲೆ ಸಿರಿಯಾ ಸೇನೆ ವಾಯು ದಾಳಿ ನಡೆಸಿದ ಪರಿಣಾಮ 8 ಮಕ್ಕಳು ಸೇರಿದಂತೆ  ಕನಿಷ್ಠ 23 ಮಂದಿ ಬಲಿಯಾಗಿದ್ದಾರೆ. ಮಯಾದೀನ್ ಎಂಬಲ್ಲಿನ ಮಾರುಕಟ್ಟೆ ಮೇಲೆ ಸಿರಿಯಾ ವಾಯು ಸೇನೆ ಕನಿಷ್ಠ ಎರಡು ಕ್ಷಿಪಣಿ ದಾಳಿ ನಡೆಸಿದ್ದು, ದಾಳಿಯಲ್ಲಿ 8 ಮಕ್ಕಳು, 5 ಮಹಿಳೆಯರು  ಸೇರಿ ಕನಿಷ್ಠ 23 ನಾಗರಿಕರು ಬಲಿಯಾಗಿದ್ದಾರೆ ಎಂದು ಮಾನವಹಕ್ಕುಗಳ ಸಿರಿಯನ್ ನಿಗಾ ತಂಡದ ಮುಖ್ಯಸ್ಥ ರಮಿ ಅಬ್ದುಲ್ ರೆಹಮಾನ್ ತಿಳಿಸಿದ್ದಾರೆ.

ಮುಂದುವರೆದ ವಾಯುದಾಳಿ

ಅಮೆರಿಕ ನೇತೃತ್ವದ ಮೈತ್ರಿಪಡೆಗಳು ಸೋಮವಾರದಿಂದಲೇ ವಾಯುದಾಳಿ ಆರಂಭಿಸಿದ್ದು, ಇರಾಕ್ ನ 12 ಪ್ರದೇಶ ಮತ್ತು ಸಿರಿಯಾಗೆ ಸೇರಿದ 5 ಪ್ರದೇಶಗಳಲ್ಲಿ ಸತತ ವಾಯುದಾಳಿ  ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಇಸ್ಲಾಮಿಕ್ ಸ್ಟೇಟ್ ಸಂಘಟನೆಗೆ ಸೇರಿದ ಆರು ಘಟಕಗಳ ಮೇಲೆ ವಾಯು ದಾಳಿ ನಡೆಸಲಾಗಿದ್ದು, ಉಗ್ರರು ವಶಕ್ಕೆ ಪಡೆದಿದ್ದ ಬಹುಮಹಡಿ  ಕಟ್ಟಡಗಳು, ಅಡಗುತಾಣಗಳು, ಶಸ್ತ್ರಾಸ್ತ್ರ ಕೊಠಡಿಗಳು ಸೇರಿದಂತೆ ಅವರ ವಿಶ್ರಾಂತಿ ನೆಲೆಗಳನ್ನು ಧ್ವಂಸಗೊಳಿಸಲಾಗಿದೆ.

ಭದ್ರತಾ ಪಡೆಗಳ ಮೂಲಗಳ ಪ್ರಕಾರ ಅಲ್ ಹುವಾಯ್ಝಾ, ರಮಾದಿ, ಬಾಯ್ಜಿ ಸೇರಿದಂತೆ ಇಸಿಸ್ ಹಿಡಿತದಲ್ಲಿರುವ ಒಟ್ಟು 8 ನಗರಗಳ ಮೇಲೆ ವಾಯುದಾಳಿ ನಡೆಸಲಾಗಿದ್ದು, ಸಿರಿಯಾದ ಅಬು  ಕಮಲ್ ಬಳಿ ಇರುವ ಕಚ್ಚಾ ತೈಲ ಸಂಗ್ರಹ ಕೇಂದ್ರ ಸಂಪೂರ್ಣ ನಾಶವಾಗಿದೆ. ಸಿರಿಯಾದ ತೈಲಭರಿತ ಪ್ರದೇಶವಾದ ಡೇರ್ ಎಜ್ಝರ್ ಪ್ರಾಂತ್ಯದಲ್ಲಿರುವ ಮಯಾದೀನ್ ಮೇಲಿನ ದಾಳಿಯಲ್ಲಿ  50ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಡೇರ್ ಎಜ್ಝರ್ ಪ್ರಾಂತ್ಯ ಐಎಸ್ ಉಗ್ರರ ಹಿಡಿತದಲ್ಲಿತ್ತು. ಡೇರ್ ಎಜ್ಝರ್ ಮತ್ತು ಮಾರ್ಆ ಬಳಿ ನಡೆದ ಪ್ರತ್ಯೇಕ ಮೂರು ದಾಳಿಗಳಲ್ಲಿ ಇಸಿಸ್ ಗೆ ಸೇರಿದ  ಎರಡು ಘಟಕಗಳು ಸಂಪೂರ್ಣ ಧ್ವಂಸಗೊಂಡಿವೆ ಎಂದು ತಿಳಿದುಬಂದಿದೆ.

Write A Comment