ಕಠ್ಮಂಡು, ಸೆ.29: ನೇಪಾಳದಲ್ಲಿ ಹೊಸಸಂವಿಧಾನ ಘೋಷಣೆಯಾಗುತ್ತಿದ್ದಂತೆಯೇ ಹಿಂದೂ ಸಂಘಟನೆಗಳ ಪ್ರತಿಭಟನೆ ತಾರಕಕ್ಕೇರಿದೆ. ಈ ಹಿನ್ನೆಲೆಯಲ್ಲಿ ದೇಶದಲ್ಲಿ ಇಂಧನ ಪೂರೈಕೆ ವ್ಯತ್ಯಯವಾಗಿ, ಕೊರತೆ ತೀವ್ರವಾಗಿ ಕಾಡುತ್ತಿದ್ದು, ಖಾಸಗಿ ಮತ್ತು ಸರಕಾರಿ ವಾಹನಗಳ ಬಳಕೆಗೆ ನೇಪಾಳ ಸರಕಾರ ನಿಯಂತ್ರಣ ಹೇರಿದೆ. ನಿಯಂತ್ರಣ ನಿಯಮದ ಅನ್ವಯ ವಾಹನಗಳ ನಂಬರ್ ಪ್ಲೇಟ್ನಲ್ಲಿನ ಕೊನೆಯ ಸಂಖ್ಯೆಯ ಆಧಾರದಲ್ಲಿ ಆ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲು ನಿರ್ಧರಿಸಲಾಗಿದೆ.
ಅಂದರೆ ವಾಹನವೊಂದರ ನಂಬರ್ ಪ್ಲೇಟ್ನ ಕೊನೆಯ ಸಂಖ್ಯೆ ಸಮವಾಗಿದ್ದರೆ (ಉದಾ: 0,2,4) ಸಮಸಂಖ್ಯೆಯ ದಿನಾಂಕದಂದು ಮಾತ್ರ ಆ ವಾಹನಗಳು ಓಡಾಡಬೇಕು. ಬೆಸಸಂಖ್ಯೆ ಇದ್ದಲ್ಲಿ (1,3,5) ಬೆಸ ದಿನಾಂಕಗಳಂದು ಆ ವಾಹನಗಳ ಓಡಾಟಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ಸರಕಾರ ಪ್ರಕಟಿಸಿದೆ.
ಇದೇ ವೇಳೆ ಅಂತಾರಾಷ್ಟ್ರೀಯ ವಿಮಾನಗಳು, ವಿದೇಶದಲ್ಲೇ ಇಂಧನ ತುಂಬಿಸಿಕೊಳ್ಳಬೇಕು ಎಂದು ಸರಕಾರ ಸೂಚಿಸಿದೆ.
ಭಾರತ ವಿರೋಧಿ ಲೇಖನ: ಇದೇ ವೇಳೆ ನೇಪಾಳ ಪತ್ರಿಕೆಗಳು, ದೇಶದಲ್ಲಿ ತಲೆದೋರಿರುವ ಇಂಧನ ಮತ್ತು ಅಗತ್ಯ ವಸ್ತುಗಳ ಕೊರತೆಗೆ ಭಾರತ ಸರಕಾರ ನೇರಕಾರಣ ಎಂದು ಲೇಖನ ಬರೆದಿವೆ. ಗಡಿಯಲ್ಲಿ ಸುಂಕ ಅಧಿಕಾರಿಗಳು ಅಗತ್ಯ ವಸ್ತುಗಳ ಸಾಗಾಟಕ್ಕೆ ಅಡ್ಡಿಮಾಡಿ, ನೇಪಾಳಕ್ಕೆ ತೊಂದರೆ ನೀಡುತ್ತಿದ್ದಾರೆ ಎಂದು ಕಿಡಿಕಾರಿವೆ. ಇನ್ನು ಕೆಲವು ಪತ್ರಿಕೆಗಳು, ಭಾರತ ನಮ್ಮ ಆಂತರಿಕ ವಿಷಯದಲ್ಲಿ ತಲೆಹಾಕುವ ಯತ್ನ ಮಾಡುತ್ತಿದೆ ಎಂದು ಆರೋಪಿಸಿವೆ.
ನೇಪಾಳ ಸರಕಾರ ಇತ್ತೀಚೆಗೆ ಅಂಗೀಕರಿಸಿದ ಸಂವಿಧಾನದಲ್ಲಿನ ಕೆಲ ಅಂಶಗಳ ಬಗ್ಗೆ ಮಧೇಸಿ ಹಿಂದೂ ಸಮುದಾಯ ವಿರೋಧ ಹೊಂದಿದೆ. ಹೀಗಾಗಿ ಅದು ಭಾರತಕ್ಕೆ ಹೊಂದಿಕೊಂಡಿರುವ ನೇಪಾಳ ಗಡಿ ಸೇರಿದಂತೆ ಹಲವು ಕಡೆ ಭಾರೀ ಪ್ರತಿಭಟನೆ ನಡೆಸಿವೆ. ಈ ಪ್ರತಿಭಟನೆ ವೇಳೆ 40ಕ್ಕೂ ಹೆಚ್ಚುಜನ ಬಲಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ನೇಪಾಳಕ್ಕೆ ಪೆಟ್ರೋಲಿಯಂ ಉತ್ಪನ್ನಗಳನ್ನು ಸರಬರಾಜು ಮಾಡುವ ಭಾರತದ ಇಂಡಿಯನ್ ಆಯಿಲ್ ಕಾರ್ಪೋರೇಷನ್, ತನ್ನ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಿದೆ.