ವಾಷಿಂಗ್ಟನ್, ಸೆ.22: ಭಾರತದಲ್ಲಿನ ಸುಮಾರು 200 ದಶಲಕ್ಷ ಜನರಿಗೆ ಕಡಿಮೆ ವೆಚ್ದದಲ್ಲಿ ಇಂಧನ ದೊರೆಯುವಂತೆ ಮಾಡುವ ಯತ್ನಗಳನ್ನು ಭಾರತ ಹಾಗೂ ಅಮೆರಿಕ ತ್ವರಿತಗೊಳಿಸಲಿವೆ ಎಂದು ಭಾರತದ ಇಂಧನ ಸಚಿವ ಪೀಯೂಷ್ ಗೋಯಲ್ ಹೇಳಿದ್ದಾರೆ.
‘‘ಇಂಧನಕ್ಕೆ ಸಂಬಂಧಿಸಿದ ಹಲವು ಯೋಜನೆಗಳಲ್ಲಿ ಭಾರತ ಹಾಗೂ ಅಮೆರಿಕ ಜಂಟಿಯಾಗಿ ಪಾಲುದಾರಿಕೆ ವಹಿಸುತ್ತಿರುವುದು ನನಗೆ ಸಂತಸ ತಂದಿದೆ.ಇನ್ನೂ ಮುಂದುವರಿದು ನಾವು ನವೀಕರಣೀಯ ಇಂಧನಕ್ಕೆ ಸಂಬಂಧಿಸಿದ ಯೋಜನೆಗಳಿಗೆ ಆರ್ಥಿಕ ನೆರವು ಒದಗಿಸುವುದು ನಮ್ಮ ನಿರೀಕ್ಷೆಯಾಗಿದೆ’’ ಎಂದವರು ಹೇಳಿದ್ದಾರೆ.
ಸೋಮವಾರ ಮುಕ್ತಾಯಗೊಂಡ ಭಾರತ-ಅಮೆರಿಕ ವ್ಯೆಹಾತ್ಮಕ ಹಾಗೂ ವಾಣಿಜ್ಯ ಮಾತುಕತೆಯ ಬಳಿಕ ಮಾತನಾಡಿದ ಅವರು, ಭಾರತದಲ್ಲಿ ಈಗಲೂ ವಿದ್ಯುತ್ ಸೌಲಭ್ಯವನ್ನು ಪಡೆಯದ ಸುಮಾರು 200 ದಶಲಕ್ಷಕ್ಕೂ ಅಧಿಕ ಮಂದಿಗೆ ಕಡಿಮೆ ವೆಚ್ಚದಲ್ಲಿ ವಿದ್ಯುತ್ ಕೈಗೆಟಕುವಂತೆ ಮಾಡುವ ಯತ್ನಗಳನ್ನು ತ್ವರಿತಗೊಳಿಸಲು ನಿರ್ಧರಿಸುವುದಾಗಿ ತಿಳಿಸಿದ್ದಾರೆ.
ಮಾತುಕತೆಯಲ್ಲಿ ಅಮೆರಿಕನ್ ನಿಯೋಗದ ನೇತೃತ್ವವನ್ನು ಅಮೆರಿಕದ ಇಂಧನ ಕಾರ್ಯದರ್ಶಿ ಅರ್ನೆಸ್ಟ್ ಮೋನಿಝ್ ವಹಿಸಿದ್ದರು. ಹವಾಮಾನ ಬದಲಾವಣೆಗೆ ಸಂಬಂಧಿಸಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಬದ್ಧತೆಯ ಬಗ್ಗೆ ಅಮೆರಿಕನ್ ನಿಯೋಗ ಇದೇ ವೇಳೆ ಮೆಚ್ಚುಗೆ ವ್ಯಕ್ತಪಡಿಸಿರುವುದಾಗಿ ಗೋಯಲ್ ತಿಳಿಸಿದ್ದಾರೆ.
ಸಂಶೋಧನೆ, ಇಂಧನ ದಾಸ್ತಾನು, ಇಂಗಾಲ ಬೇರ್ಪಡಿಸುವಿಕೆ, ಇಂಗಾಲ ಗ್ರಹಣ ಮೊದಲಾದ ವಿಷಯಗಳ ಬಗ್ಗೆ ಮಾತುಕತೆಯ ವೇಳೆ ಚರ್ಚಿಸಲಾಯಿತು. ಈ ನಿಟ್ಟಿನಲ್ಲಿ ನಮ್ಮ ಯತ್ನಗಳನ್ನು ಕ್ಷಿಪ್ರಗೊಳಿಸುವ ಕುರಿತು ಕಾರ್ಯಸೂಚಿ ಯೊಂದನ್ನು ತಯಾರಿಸ ಲಾಯಿತು ಎಂದು ಗೋಯಲ್ ತಿಳಿಸಿದ್ದಾರೆ.
ಸುಸ್ಥಿರ ಹಾಗೂ ಸಮಗ್ರ ಸ್ವಚ್ಛ ಇಂಧನ ಪರಿಹಾರಕ್ಕೆ ಸಂಬಂಧಿಸಿದ ಕಡಿಮೆ ವೆಚ್ಚದ ಮೂಲಸೌಲಭ್ಯಗಳನ್ನು ನಿರ್ಮಿಸುವ ಮೂಲಕ 2019ರ ವೇಳೆಗೆ ಭಾರತದಾದ್ಯಂತ ಸತತ ದಿನದ 24 ತಾಸುಗಳ ಅವಧಿಯಲ್ಲೂ ವಿದ್ಯುತ್ ಪೂರೈಸುವ ಗುರಿಗೆ ಮಾತುಕತೆಯಲ್ಲಿ ಹೆಚ್ಚಿನ ಒತ್ತು ನೀಡಲಾಗಿತ್ತು ಎಂದವರು ಹೇಳಿದ್ದಾರೆ.