ಅಂತರಾಷ್ಟ್ರೀಯ

ನೇಪಾಳದಲ್ಲಿ ಜಾತ್ಯತೀತ ಸಂವಿಧಾನ ಅಸ್ತಿತ್ವಕ್ಕೆ: ರಾಷ್ಟ್ರಪತಿ ರಾಮ್ ಭರಣ್ ಯಾದವ್‌ರಿಂದ ಘೋಷಣೆ

Pinterest LinkedIn Tumblr

NepalaSa-finalಕಠ್ಮಂಡು, ಸೆ.20: ಏಳು ವರ್ಷಗಳ ಕಾಲ ನಡೆದ ಬಿರುಸಿನ ಚರ್ಚೆಗಳ ನಂತರ ಮತ್ತು ಏಳು ರಾಜ್ಯಗಳ ಒಕ್ಕೂಟ ಸ್ವರೂಪದ ವಿರುದ್ಧ ಅಲ್ಪಸಂಖ್ಯಾತ ಮಾಧೇಶಿ ಗುಂಪುಗಳ ಹಿಂಸಾತ್ಮಕ ಪ್ರತಿಭಟನೆಗಳ ನಡುವೆಯೇ ರೂಪುಗೊಂಡ ನೂತನ ಜಾತ್ಯತೀತ ಮತ್ತು ಪ್ರಜಾಸತ್ತಾತ್ಮಕ ಸಂವಿಧಾನವು ರವಿವಾರ ನೇಪಾಳದಲ್ಲಿ ಜಾರಿಗೊಂಡಿದೆ.
ಸಂವಿಧಾನ ಸಭೆಯು ಅಂಗೀಕರಿಸಿರುವ ಸಂವಿಧಾನವು ಇಂದಿನಿಂದ ಜಾರಿಯಾಗಿದೆ ಎಂದು ರಾಷ್ಟ್ರಪತಿ ರಾಮ ಭರಣ್ ಯಾದವ್ ಅವರು ರವಿವಾರ ನಯಾ ಬಾಣೇಶ್ವರದ ಸಂವಿಧಾನ ಸಭೆಯ ಸಭಾಂಗಣದಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಘೋಷಿಸಿದರು. ಇದರೊಂದಿಗೆ ಹಿಂದೂ ಅರಸೊತ್ತಿಗೆಯಾಗಿದ್ದ ನೇಪಾಳವು ಜಾತ್ಯತೀತ,ಒಕ್ಕೂಟ ಗಣರಾಜ್ಯವಾಗಿ ಪರಿವರ್ತನೆಗೊಂಡಿತು.
ಈ ಐತಿಹಾಸಿಕ ಗಳಿಗೆಯಲ್ಲಿ ಎಲ್ಲರ ಒಗ್ಗಟ್ಟು ಮತ್ತು ಸಹಕಾರಕ್ಕೆ ಕರೆ ನೀಡಿದ ಯಾದವ್, ಸಂವಿಧಾನವು ನಮ್ಮ ಸ್ವಾತಂತ್ರ,ಭೌಗೋಳಿಕ ಅಖಂಡತೆ ಮತ್ತು ಸಾರ್ವಭೌಮತೆಯನ್ನು ರಕ್ಷಿಸಲು ನಮಗೆಲ್ಲರಿಗೂ ಸಮಾನ ದಾಖಲೆಯಾಗಿದೆ ಎಂದರು
ಇದರೊಂದಿಗೆ ದೇಶದಲ್ಲಿ ಅಸ್ತಿತ್ವದಲ್ಲಿದ್ದ ಮಧ್ಯಾಂತರ ಸಂವಿಧಾನವು ರದ್ದುಗೊಂಡಿತು. ನೂತನವಾಗಿ ಘೋಷಣೆಯಾಗಿರುವ ‘ಸಂವಿಧಾನ 2072’ ದೇಶದಲ್ಲಿ ಜನಾಡಳಿತವನ್ನು ಸಾಂಸ್ಥೀಕರಿಸಿದೆ ಎಂದ ಯಾದವ್, ಈ ಸಂವಿಧಾನವು ನೇಪಾಳವನ್ನು ಆರ್ಥಿಕ ಅಭಿವೃದ್ಧಿಯತ್ತ ಕೊಂಡೊಯ್ಯಲಿದೆ ಎಂಬ ಆಶಯ ವ್ಯಕ್ತಪಡಿಸಿದರು.
ದೇಶದಲ್ಲಿ ವೈವಿಧ್ಯತೆಯಲ್ಲಿ ಏಕತೆಯನ್ನು ಕಾಯ್ದುಕೊಳ್ಳಲು ಮತ್ತು ಎಲ್ಲರಿಗೂ ಹಕ್ಕುಗಳನ್ನು ಖಚಿತ ಪಡಿಸಲು ನೂತನ ಸಂವಿಧಾನವು ಅವಕಾಶವನ್ನು ನೀಡಿದೆ ಎಂದು ಸಂವಿಧಾನ ಸಭೆಯ ಅಂತಿಮ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಯಾದವ್ ಹೇಳಿದರು. ಇದೇ ವೇಳೆ ಸಂವಿಧಾನ ಘೋಷಣೆ ಗಾಗಿ ರಾಷ್ಟ್ರಪತಿಗಳಿಗೆ ವಂದನಾ ನಿರ್ಣಯವನ್ನು ಸಭೆಯು ಸರ್ವಾನುಮತದಿಂದ ಅಂಗೀಕರಿಸಿತು.
ನೂತನ ಸಂವಿಧಾನವನ್ನು ಸಂವಿಧಾನ ಸಭೆಯ 601 ಸದಸ್ಯರ ಪೈಕಿ ಶೇ.85ರಷ್ಟು ಸದಸ್ಯರು ಒಪ್ಪಿಕೊಂಡಿದ್ದು, ದ್ವಿಸದನ ಶಾಸಕಾಂಗ ಹೊಂದಿರಲು ಅವಕಾಶ ಕಲ್ಪಿಸಲಾಗಿದೆ. ಕೆಳಮನೆ ಅಥವಾ ಪ್ರತಿನಿಧಿ ಸಭೆಯು 375 ಸದಸ್ಯರನ್ನು ಮತ್ತು ಮೇಲ್ಮನೆ 60 ಸದಸ್ಯರನ್ನು ಹೊಂದಿರಲಿವೆ.
ಸಂವಿಧಾನವು 37 ವಿಭಾಗಗಳು ಮತ್ತು 304 ವಿಧಿಗಳ ಜೊತೆ ಏಳು ಉಪ ಆಖ್ಯಾಯಿಕೆಗಳನ್ನು ಹೊಂದಿದೆ. ಉನ್ನತ ಮಟ್ಟದ ಆಯೋಗವೊಂದು ಏಳು ರಾಜ್ಯಗಳನ್ನು ಇನ್ನೊಂದು ವರ್ಷದೊಳಗೆ ಅಂತಿಮಗೊಳಿಸಲಿದೆ. ರಾಷ್ಟ್ರಕ್ಕೆ ಒಕ್ಕೂಟ ಸ್ವರೂಪವನ್ನು ನೀಡುವ ಬಗ್ಗೆ ಮಾಧೇಶಿ ಗುಂಪುಗಳ ಹಿಂಸಾತ್ಮಕ ಪ್ರತಿಭಟನೆಗಳ ನಡುವೆಯೇ ನೂತನ ಸಂವಿಧಾನ ಜಾರಿಯ ಐತಿಹಾಸಿಕ ಗಳಿಗೆಗೆ ನೇಪಾಳವು ಸಾಕ್ಷಿಯಾಯಿತು. ದೇಶವನ್ನು ಏಳು ರಾಜ್ಯಗಳನ್ನಾಗಿ ವಿಭಜಿಸುವ ಒಕ್ಕೂಟ ಸ್ವರೂಪವನ್ನು ವಿರೋಧಿಸಿ ಹಿಮಾಲಯದ ಮಡಿಲಿನಲ್ಲಿರುವ ಈ ಪುಟ ರಾಷ್ಟ್ರದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಇಂದು ಓರ್ವ ಸೇರಿದಂತೆ ಈವರೆಗೆ ಕನಿಷ್ಠ 40 ಜನರು ಬಲಿಯಾದ್ದಾರೆ.

Write A Comment