ಅಂತರಾಷ್ಟ್ರೀಯ

ಅಣು ಒಪ್ಪಂದ ಅನುಷ್ಠಾನದ ಸೂಕ್ತ ಮೇಲ್ವಿಚಾರಣೆ ಅಗತ್ಯ: ರೂಹಾನಿ

Pinterest LinkedIn Tumblr

2Hassan_Rouhani-1ಟೆಹರಾನ್, ಸೆ.20: ಇರಾನ್ ಮತ್ತು ಪಿ5+1 ಸಮೂಹದ ರಾಷ್ಟ್ರಗಳ ನಡುವೆ ಏರ್ಪಟ್ಟಿರುವ ಒಪ್ಪಂದದ ಅನುಷ್ಠಾನವನ್ನು ವಿಶ್ವಸಂಸ್ಥೆಯ ಪರಮಾಣು ಮೇಲ್ವಿಚಾರಣಾ ಘಟಕವು ನ್ಯಾಯಸಮ್ಮತವಾಗಿ ಪರಿಶೀಲಿಸುವುದನ್ನು ನಿರೀಕ್ಷಿಸುವುದಾಗಿ ಇರಾನ್‌ನ ಅಧ್ಯಕ್ಷ ಹಸನ್ ರೂಹಾನಿ ಹೇಳಿದ್ದಾರೆ.
ಅಮೆರಿಕ, ರಶ್ಯ, ಚೀನಾ, ಫ್ರಾನ್ಸ್, ಬ್ರಿಟನ್ ಹಾಗೂ ಜರ್ಮನಿ(ಪಿ51 ಸಮೂಹದ ರಾಷ್ಟ್ರಗಳು) ಮತ್ತು ಇರಾನ್ ನಡುವೆ ಜುಲೈ 14ಂದು ವಿವಾದಿತ ಪರಮಾಣು ಕಾರ್ಯಕ್ರಮಕ್ಕೆ ಸಂಬಂಧಿಸಿ ಮಾರ್ಗಸೂಚಿ ಒಪ್ಪಂದವೊಂದು ಆಸ್ಟ್ರೀಯದ ರಾಜಧಾನಿ ವಿಯೆನ್ನಾದಲ್ಲಿ ಏರ್ಪಟ್ಟಿತ್ತು.
”ಜಂಟಿ ಸಮಗ್ರ ಕ್ರಿಯಾಯೋಜನೆ (ಜೆಸಿಎಫ್‌ಒಎ) ಯನ್ನು ಅನುಷ್ಠಾನಗೊಳಿಸುವಲ್ಲಿ ವಿಶ್ವಸಂಸ್ಥೆಯ ಪರಮಾಣು ಮೇಲ್ವಿಚಾರಣಾ ಘಟಕವು ನ್ಯಾಯೋಚಿತ ಪರಿಶೀಲನೆ ನಡೆಸುವುದನ್ನು ನಾವು ನಿರೀಕ್ಷಿಸುತ್ತೇವೆ” ಎಂದು ರವಿವಾರ ಟೆಹರಾನ್‌ನಲ್ಲಿ ಏರ್ಪಡಿಸಲಾಗಿದ್ದ ಸಮಾರಂಭವೊಂದರಲ್ಲಿ ಅಂತಾರಾಷ್ಟ್ರೀಯ ಅಣು ಇಂಧನ ಸಂಸ್ಥೆ(ಐಎಇಎ)ಯ ಮಹಾನಿರ್ದೇಶಕ ಯುಕಿಯಾ ಅಮಾನೊರೊಂದಿಗಿನ ಭೇಟಿಯ ವೇಳೆ ರೂಹಾನಿ ಈ ಅಭಿಪ್ರಾಯ ವ್ಯಕ್ತಪಡಿಸಿದರು.
ಜಾಗತಿಕ ಶಕ್ತಿಗಳೊಂದಿಗಿನ ಇರಾನ್ ಪರಮಾಣು ಒಪ್ಪಂದದ ಅನುಷ್ಠಾನದಲ್ಲಿ ಅಂತಾರಾಷ್ಟ್ರೀಯ ಅಣು ಇಂಧನ ಸಂಸ್ಥೆಯು ಮಹತ್ವದ ಪಾತ್ರ ವಹಿಸಬೇಕಾಗಿದೆ ಎಂದವರು ಹೇಳಿದ್ದಾರೆ.
”ಐಎಇಎ ಕಾರ್ಯವ್ಯಾಪ್ತಿಯಿಂದ ಹೊರತಾದ ಯಾವುದೇ ಕ್ರಮವನ್ನು ನಾವು ನಿರೀಕ್ಷಿಸುವುದಿಲ್ಲ. ಮಾತ್ರವಲ್ಲದೆ, ಇರಾನ್ ಹಾಗೂ ಐಎಇಎ ನಡುವಿನ ರಕ್ಷಣಾ ಒಪ್ಪಂದವನ್ನು ಮೀರಿದ ಯಾವುದೇ ಬೇಡಿಕೆಯನ್ನು ನಾವು ಮುಂದಿಡುವುದಿಲ್ಲ” ಎಂದು ಇರಾನ್ ಅಧ್ಯಕ್ಷ ತಿಳಿಸಿದ್ದಾರೆ.

ಧಾರ್ಮಿಕ ನೆಲೆಯಲ್ಲೂ ಇರಾನ್ ಅಣ್ವಸ್ತ್ರಗಳನ್ನು ತಿರಸ್ಕರಿಸುತ್ತದೆ ಎಂದಿರುವ ರೂಹಾನಿ, ಇತ್ತೀಚೆಗೆ ಐಎಇಎ ನಡೆಸಿರುವ ತಪಾಸಣೆಗಳು ಕೂಡಾ ಇರಾನ್‌ನ ಪರಮಾಣು ಕಾರ್ಯಕ್ರಮವು ಯಾವುದೇ ಸೇನಾ ಉದ್ದೇಶವನ್ನು ಹೊಂದಿಲ್ಲ ವೆಂಬುದನ್ನು ಸ್ಪಷ್ಟಪಡಿಸಿದೆ ಎಂದು ತಿಳಿಸಿದರು.
ಇರಾನ್‌ನ ಪರಮಾಣು ಕಾರ್ಯಕ್ರಮದ ಬಗೆಗಿನ ವರದಿಯನ್ನು ಐಎಇಎ ನಿಷ್ಪಕ್ಷಪಾತವಾಗಿ ಹಾಗೂ ವಾಸ್ತವಾಂಶಗಳ ಆಧಾರದಲ್ಲಿ ತಯಾರಿಸಲಿದೆ ಎಂದು ಇದೇ ವೇಳೆ ಐಎಇಎ ಮುಖ್ಯಸ್ಥ ಯೂಕಿಯಾ ಅಮಾನೊ ಪುನರುಚ್ಚರಿಸಿದ್ದಾರೆ.
ಮಾರ್ಗಸೂಚಿ ಒಪ್ಪಂದದಡಿ ಐಎಇಎ ಇರಾನ್‌ನ ಪರಮಾಣು ಕಾರ್ಯಕ್ರಮಕ್ಕೆ ಸಂಬಂಧಿಸಿ ತಪಾಸಣೆಗಳನ್ನು ನಡೆಸಿ ಡಿಸೆಂಬರ್ 15ರೊಳಗೆ ಘಟಕದ ಮಂಡಳಿಗೆ ವರದಿ ಯೊಂದನ್ನು ಸಲ್ಲಿಸಬೇಕಾಗಿದೆ.

Write A Comment