ಲಂಡನ್: ಹೊಗೆರಹಿತ ತಂಬಾಕು ಸೇವನೆಗೆ ವಿಶ್ವದಲ್ಲೇ ಅತಿ ಹೆಚ್ಚು ಮಂದಿ ಬಲಿಯಾಗುತ್ತಿರುವುದು ಭಾರತದಲ್ಲಿ! ಈ ರೀತಿ ಸಿಗರೇಟು, ಬೀಡಿ ಬಿಟ್ಟು ಉಳಿದ ತಂಬಾಕು ಉತ್ಪನ್ನ ಸೇವನೆಯಿಂದ ಜಗತ್ತಿನಲ್ಲಿ ಸಂಭವಿಸುವ ನಾಲ್ಕನೇ ಮೂರರಷ್ಟು ಸಾವು ಭಾರತದಲ್ಲಾಗುತ್ತದಂತೆ.
ಜಗಿಯುವ ಮತ್ತು ಮೂಗಿಗಿಡುವ ನಶ್ಯದಂಥ ತಂಬಾಕು ಉತ್ಪನ್ನದಿಂದ 2010ರಲ್ಲಿ ವಿಶ್ವದಲ್ಲಿ 62,283 ಮಂದಿ ಬಾಯಿ, ಗಂಟಲು ಮತ್ತಿತರ ಕ್ಯಾನ್ಸರ್ ನಿಂದ ಮೃತಪಟ್ಟಿದ್ದಾರೆ. ಹೃದಯ ಸಂಬಂಧಿ ಕಾಯಿಲೆಗೆ 2,04,309 ಮಂದಿ ಮೃತಪಟ್ಟಿದ್ದಾರೆ. 115 ದೇಶಗಳಲ್ಲಿ ಈ ಬಗ್ಗೆ ಅಧ್ಯಯನ ನಡೆಸಲಾಗಿದೆ. ಹುಲ್ ಯಾರ್ಕ್ ಮೆಡಿಕಲ್ ಸ್ಕೂಲ್‍ನ ಹಿರಿಯ ಉಪನ್ಯಾಸಕ ಕಮಾರನ್ ಸಿದ್ದಿಕಿ ಪ್ರಕಾರ, ಈ ಕುರಿತು ಇನ್ನಷ್ಟು ಅಧ್ಯಯನ ನಡೆದರೆ ತಂಬಾಕು ಸೇವನೆಯ ಪರಿಣಾಮ ಇನ್ನೂ ಹೆಚ್ಚಿರುವುದು ಬೆಳಕಿಗೆ ಬರಬಹುದು.
ಹಾಗಾಗಿ ಹೊಗೆರಹಿತ ತಂಬಾಕಿನ ಸೇವನೆ ನಿಯಂತ್ರಣ ಕುರಿತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.