ಲಂಡನ್: ವಾರದ ಇತರೆ ವಾರಗಳಿಗಿಂತಲೂ ಹೆಚ್ಚಾಗಿ ಜನರು ಸೋಮವಾರ ಮತ್ತು ಶುಕ್ರವಾರಗಳನ್ನು ಹೆಚ್ಚಾಗಿ ನೆನಪಿನಲ್ಲಿಟ್ಟುಕೊಳ್ಳುತ್ತಾರೆ ಎಂಬ ಸಂಗತಿಯನ್ನು ಲಂಡನ್ ನ ಸಂಶೋಧನೆಯೊಂದು ಹೊರಹಾಕಿದೆ.
ನ್ಯೂಯಾರ್ಕ್, ಹರ್ಟ್ ಫೋರ್ಡ್ ಶೈರ್ ಮತ್ತು ಲಂಡನ್ ನ ಲಿಂಕನ್ ವಿಶ್ವವಿದ್ಯಾಲಯಗಳು ಜಂಟಿ ಸಂಶೋಧನೆಯೊಂದನ್ನು ನಡೆಸಿದ್ದು, ಸಂಶೋಧನೆಯಲ್ಲಿ ಜನರು ಹೆಚ್ಚಾಗಿ ಸೋಮವಾರ ಮತ್ತು ಶುಕ್ರವಾರಗಳನ್ನು ಹೆಚ್ಚಾಗಿ ನೆನಪಿನಲ್ಲಿಟ್ಟುಕೊಳ್ಳುತ್ತಾರೆ ಎಂದು ತಿಳಿದುಬಂದಿದೆ. ಇದಕ್ಕೆ ಪ್ರಮುಖ ಕಾರಣಗಳೆಂದರೆ ಸಾಮಾನ್ಯವಾಗಿ ಸೋಮವಾರದಿಂದ ಕೆಲಸ ಕಾರ್ಯಗಳು ಆರಂಭವಾಗುವುದರಿಂದ ಜನರು ಈ ದಿನವನ್ನು ಒತ್ತಡ ಮತ್ತು ನೀರಸದ ಪ್ರತೀಕವಾಗಿ ನೋಡುತ್ತಾರಂತೆ. ಇನ್ನು ಶುಕ್ರವಾರ ವಾರಾಂತ್ಯವಾದ್ದರಿಂದ ಜನರು ಇದನ್ನು ಸಂತೋಷ ಕೂಟ ಮತ್ತು ಔತಣ ಕೂಟಗಳ ಪ್ರತೀಕವಾಗಿ ನೋಡುತ್ತಾರೆ ಎಂದು ಸಂಶೋಧನೆಯಲ್ಲಿ ಹೇಳಲಾಗಿದೆ.
ಈ ಸಂಶೋಧನೆಯಲ್ಲಿ ಬಳಸಿಕೊಳ್ಳಲಾಗಿದ್ದ ಮಂದಿಯ ಪೈಕಿ ಶೇ.40 ರಷ್ಟು ಮಂದಿ ಸೋಮವಾರ ಮತ್ತು ಶುಕ್ರವಾರ ದಿನಗಳಲ್ಲಿ ಹೆಚ್ಚಾಗಿ ಉತ್ಸಾಹಿಕರಾಗಿದ್ದರಂತೆ. ಇನ್ನು ವಾರದ ಮಧ್ಯ ಭಾಗದಲ್ಲಿ ಶೇ. 40 ರಷ್ಟು ಮಂದಿ ಗೊಂದಲಕ್ಕೊಳಗಾಗಿ, ತಾವು ಒಂದು ದಿನ ಹಿಂದೆ ಇದ್ದೇವೆ ಎನ್ನುವ ಭಾವಕ್ಕೆ ಒಳಗಾಗಿದ್ದರು. ವಾರದ ಮಧ್ಯಭಾಗದಲ್ಲಿ ಹೇಳಲಾದ ಸಂಗತಿಗಳಿಗಿಂತಲೂ ಸೋಮವಾರ ಮತ್ತು ಶುಕ್ರವಾರದ ಸಂಗತಿಗಳು ಅವರಿಗೆ ಹೆಚ್ಚಾಗಿ ನೆನಪಿದ್ದವಂತೆ. ವಾರದ ಮಧ್ಯಭಾಗದ ಸಂಗತಿಗಳನ್ನು ಶೇ.40 ರಷ್ಟು ಮಂದಿ ಗೊಂದಲ ಮಾಡಿಕೊಂಡಿದ್ದರು ಎಂದು ಸಂಶೋಧಕರು ಹೇಳಿದ್ದಾರೆ.
ಇನ್ನು ಈ ಬಗ್ಗೆ ಮಾತನಾಡಿರುವ ಲಿಂಕನ್ ವಿಶ್ವವಿದ್ಯಾಲಯದ ಮನಃಶಾಸ್ತ್ರಜ್ಞರೊಬ್ಬರು, ಶನಿವಾರ ಮತ್ತು ಭಾನುವಾರ ಉದ್ಯೋಗಸ್ಥರಿಗೆ ರಜೆ ಇರುವುದರಿಂದ ಅದರ ಹಿಂದಿನ ದಿನವಾದ ಶುಕ್ರವಾರ ಅವರು ರಜೆಗಾಗಿ ಹಾತೊರೆಯುತ್ತಾರೆ. ವಾರವಿಡೀ ದುಡಿದು ದಣಿದಿರುವುದರಿಂದ ಅವರಿಗೆ ಶುಕ್ರವಾರ ವಾರದ ಸಂತೋಷಕರ ದಿನವಾಗಿರುತ್ತದೆ. ಇನ್ನು ಸೋಮವಾರ ವಾರದ ಆರಂಭಿಕ ದಿನವಾದ್ದರಿಂದ ರಜೆಯ ಮಜದಿಂದ ಮತ್ತೆ ಉದ್ಯೋಗಕ್ಕೆ ಮರಳಬೇಕು ಎನ್ನುವ ಕಾರಣದಿಂದಾಗಿ ಸೋಮವಾರ ಅವರಿಗೆ ನೀರಸವಾಗಿ ಕಂಡುಬರುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ವಾರದ ಏಳೂ ದಿನಗಳು ಚಕ್ರಾವರ್ತಿಯಾಗಿ ಪುನಾರಾವರ್ತನೆಗೊಳ್ಳುತ್ತವೆಯಾದರೂ, ಈ ಎರಡು ದಿನಗಳು ಮಾತ್ರ ಹೆಚ್ಚಾಗಿ ಜನರ ನೆನಪಿನಲ್ಲಿರುತ್ತವೆ. ಆದರೆ ಉಳಿದ ವಾರಗಳು ಜನರ ಸ್ಮೃತಿ ಪಟಲದಲ್ಲಿ ಹೆಚ್ಚಾಗಿ ಉಳಿಯುವುದಿಲ್ಲ. ಬದಲಿಗೆ ಗೊಂದಲಕರವಾಗಿರುತ್ತವೆ. ಶೇ.40 ರಷ್ಟು ಮಂದಿ ಸೋಮವಾರ ಮತ್ತು ಶುಕ್ರವಾರಗಳನ್ನು ಹೊರತು ಪಡಿಸಿ ವಾರದ ಉಳಿದ ವಾರಗಳನ್ನು ಗೊಂದಲ ಮಾಡಿಕೊಳ್ಳುತ್ತಾರೆ ಎಂದು ಸಂಶೋಧಕ ಡಾ.ಎಲ್ಲಿಸ್ ಹೇಳಿದ್ದಾರೆ.