ಟೋಕಿಯೋ: ಸಾಧನೆಗೆ ವಯಸ್ಸು ಅಡ್ಡಿಯಾಗಲಾರದೆಂಬುದನ್ನು ಈ 100 ವರ್ಷದ ವೃದ್ದ ಮಹಿಳೆ ನಿರೂಪಿಸಿದ್ದಾರೆ. ಈಜು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಇವರು 1500 ಮೀಟರ್ ದೂರವನ್ನು 1 ಗಂಟೆ 15 ನಿಮಿಷ 54.39 ನಿಮಿಷಗಳಲ್ಲಿ ಕ್ರಮಿಸಿದ್ದಾರೆ.
ಜಪಾನಿನ ಮಿಹಿಕೋ ನಾಗಾಓಕೋ ಎಂಬ ಈ ವೃದ್ದೆ 1914 ರಲ್ಲಿ ಜನಿಸಿದ್ದು, ತಮಗಿದ್ದ ಮೊಣಕಾಲಿನ ನೋವಿನಿಂದ ಹೊರ ಬರುವ ಸಲುವಾಗಿ ವೈದ್ಯರ ಸಲಹೆಯಂತೆ ತಮ್ಮ 82 ನೇ ವಯಸ್ಸಿನಲ್ಲಿ ಈಜುವುದನ್ನು ಕಲಿತರು. ಬಳಿಕ ಅದರಲ್ಲಿ ಪಳಗಿದ ಅವರು ಹಿರಿಯರಿಗಾಗಿ ಏರ್ಪಡಿಸುತ್ತಿದ್ದ ಈಜು ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ಹಲವು ದಾಖಲೆಗಳನ್ನು ನಿರ್ಮಿಸಿದ್ದರು.
ಈಗ ತಮಗಿಂತ ಅತ್ಯಂತ ಕಿರಿಯರೊಂದಿಗೂ ಸ್ಪರ್ಧೆ ಮಾಡಲು ಹಿಂಜರಿಯದ ಮಹಿಕೋ ನಾಗಾಓಕೋ, ದೇಶ- ವಿದೇಶಗಳಲ್ಲಿ ನಡೆದ ಆನೇಕ ಈಜು ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಅಲ್ಲದೇ ಈಜುವುದರಿಂದ ಆರೋಗ್ಯಕ್ಕಾಗುವ ಅನುಕೂಲತೆಗಳನ್ನೂ ವಿವರಿಸುತ್ತಾರೆ. ಈ ವೃದ್ದೆಯ ಮಕ್ಕಳು, ಮೊಮ್ಮಕ್ಕಳೂ ಸಹ ಇವರಿಂದ ಸ್ಪೂರ್ತಿಗೊಂಡು ಈಜಿನಲ್ಲಿ ಪ್ರಾವೀಣ್ಯತೆ ಪಡೆದಿದ್ದಾರೆ.