ಅಂತರಾಷ್ಟ್ರೀಯ

ಅಮೆರಿಕದ ಭಾರತೀಯ ಕಾರ್ಮಿಕರಿಗೆ 127 ಕೋಟಿ ಪರಿಹಾರ

Pinterest LinkedIn Tumblr

hurricanerನ್ಯೂಯಾರ್ಕ್: ಕತ್ರಿನಾ ಚಂಡಮಾರುತದ ಬಳಿಕ ಮರು ನಿರ್ಮಾಣಕ್ಕೆ ಕರೆತಂದಿದ್ದ ಸುಮಾರು 200 ಭಾರತೀಯ ಕಾರ್ಮಿಕರಿಗೆ ಅನ್ಯಾಯ ಮಾಡಲು ಯತ್ನಿಸಿದ್ದ ಕಂಪನಿಗೆ ತಕ್ಕ ಶಾಸ್ತಿಯಾಗಿದೆ.

ಚಂಡಮಾರುತದಿಂದ ಹಾನಿಗೊಳಗಾಗಿದ್ದ ತೈಲ ಬಾವಿ ಸೇರಿದಂತೆ ನಾನಾ ಯಂತ್ರಗಳ ದುರಸ್ತಿಗಾಗಿ ಬಂದು ವಂಚನೆ ಹಾಗೂ ಶೋಷಣೆಗೆ ಒಳಗಾಗಿದ್ದ ಭಾರತೀಯ ಕಾರ್ಮಿಕರಿಗೆ ಕೊನೆಗೂ ನ್ಯಾಯ ದೊರಕಲಿದ್ದು, 127 ಕೋಟಿ (2 ಕೋಟಿ ಡಾಲರ್‌) ಪರಿಹಾರ ನೀಡುವ ಅನಿವಾರ್ಯತೆ ಅಮೆರಿಕನ್ ನೌಕಾ ನಿರ್ಮಾಣ ಸಂಸ್ಥೆಗೆ ಎದುರಾಗಿದೆ.

ಭಾರತದಿಂದ ಅಕ್ರಮವಾಗಿ ತರಿಸಿಕೊಂಡು ಕೆಲಸ ಮಾಡಿಸಿದ್ದಲ್ಲದೆ, ವಂಚನೆ ಹಾಗೂ ಶೋಷಣೆ ನಡೆಸಿದ ಆರೋಪ ಸಿಗ್ನಲ್ ಇಂಟರ್ನ್ಯಾಷನಲ್ ಎಂಬ ಕಂಪನಿ ಮೇಲಿತ್ತು. ಕಾರ್ಮಿಕ ಕಳ್ಳಸಾಗಣೆ ಮೊಕದ್ದಮೆ ಹಿನ್ನೆಲೆಯಲ್ಲಿ ಆ ಸಂಸ್ಥೆ ವಿರುದ್ದ ವಿರುದ್ಧ ದೂರು ಕೂಡ ದಾಖಲಾಗಿತ್ತು. ಇದೀಗ ಅಲ್ಲಿನ ಫೆಡರಲ್‌ ನ್ಯಾಯಾಧೀಶರು ಈ ಬಗ್ಗೆ ವಿಚಾರಣೆ ನಡೆಸಿ ಕಂಪನಿ ತಪ್ಪಿತಸ್ಥ ಎನ್ನುವುದನ್ನು ಮನವರಿಕೆ ಮಾಡಿಕೊಂಡು ಆದೇಶ ನೀಡಿದ್ದಾರೆ. ಅಮೆರಿಕದ ಇತಿಹಾಸದಲ್ಲಿ ಈ ಮೊಕದ್ದಮೆ ಅತಿ ದೊಡ್ಡ ಕಾರ್ಮಿಕ ಕಳ್ಳಸಾಗಣೆ ಪ್ರಕರಣಗಳಲ್ಲಿ ಒಂದಾಗಿದೆ.

2005ರಲ್ಲಿ ಕತ್ರಿನಾ ಚಂಡಮಾರುತ ಮಾಡಿದ್ದ ದಾಂಧಲೆಯಿಂದ ಹಾನಿಗೀಡಾಗಿದ್ದ ತೈಲ ಬಾವಿ ಯಂತ್ರಗಳು ಸೇರಿದಂತೆ ನಾನಾ ಕೆಲಸಗಳಿಗಾಗಿ ಅಲಬಾಮಾ ಮೂಲದ ಕಂಪೆನಿ ಭಾರತದ ಕಾರ್ಮಿಕರನ್ನು ನೇಮಿಸಿತ್ತು. ವೆಲ್ಡರ್‌ಗಳು, ಪೈಪ್‌ ಫಿಟ್ಟರ್‌ ಮುಂತಾದ ನಾನಾ ಕುಶಲ ಕೆಲಸಗಳನ್ನು ಮಾಡ ಬಲ್ಲ 200 ಕಾರ್ಮಿಕರಿದ್ದರು. ಅವರೆಲ್ಲರೂ ಸೇರಿ ತ್ವರಿತವಾಗಿ ನಿಗದಿಪಡಿಸಿದ ಕೆಲಸ ಮಾಡಿದ್ದರೂ ಅನ್ಯಾಯ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಅಮೆರಿಕದ ಸಂಸ್ಥೆ ಈಗ ಭಾರತೀಯ ಕಾರ್ಮಿಕರ ಕ್ಷಮೆ ಕೇಳಿದೆ.

ತಮಗೆ ಹಾಗೂ ತಮ್ಮ ಕುಟುಂಬಕ್ಕೆ ಅಮೆರಿಕದಲ್ಲಿ ಉತ್ತಮ ಉದ್ಯೋಗ, ಗ್ರೀನ್‌ ಕಾರ್ಡ್ ಹಾಗೂ ಅಮೆರಿಕದಲ್ಲಿ ಶಾಶ್ವತವಾಗಿ ನೆಲೆಸಲು ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ತಾವು ತಮ್ಮ ಉದ್ಯೋಗದಾತರು ಹಾಗೂ ವಕೀಲರಿಗೆ ಹಣ ಕೊಟ್ಟಿದ್ದೆವು. ಪ್ರತಿ ಕಾರ್ಮಿಕ ಸುಮಾರು 10ರಿಂದ 20 ಸಾವಿರ ಡಾಲರ್‌ ಹಣವನ್ನು ನೇಮಕಾತಿ ಶುಲ್ಕ ಮತ್ತು ಇತರೆ ವೆಚ್ಚಗಳಿಗಾಗಿ ಅವರಿಗೆ ನೀಡಿದ್ದ ಎಂದು ಭಾರತೀಯ ಕಾರ್ಮಿಕರು ಆರೋಪಿಸಿದ್ದರು.

ಈ ಹಣ ಹೊಂದಿಸಲು ಅನೇಕರು ತಮ್ಮ ಮನೆ ಮಠ ಅಡವಿಟ್ಟು ಇಲ್ಲವೇ ಮಾರಿ ದುಡ್ಡು ಕೊಟ್ಟಿದ್ದರು. ಇದರಿಂದಾಗಿ ಅವರ ಕುಟುಂಬ ಸಾಲದ ಶೂಲಕ್ಕೆ ಸಿಲುಕಿದ್ದವು ಎಂದು ಕಾರ್ಮಿಕರ ಪರ ಹೋರಾಡಿದ್ದ ಸದರ್ನ್‌ ಪವರ್ಟಿ ಲಾ ಸೆಂಟರ್‌ ಹೇಳಿಕೆ ನೀಡಿದೆ.

2006ರಲ್ಲಿ ಅನೇಕ ಕನಸುಗಳೊಂದಿಗೆ ಅಮೆರಿಕದ ನೆಲಕ್ಕೆ ಕಾಲಿಟ್ಟಿದ್ದ ಕಾರ್ಮಿಕರಿಗೆ ತಮಗೆ ಗ್ರೀನ್‌ ಕಾರ್ಡ್‌ ಆಗಲಿ ಅಮೆರಿಕದಲ್ಲಿ ಶಾಶ್ವತ ವಾಸದ ಸೌಲಭ್ಯವಾಗಲಿ ಸಿಗದು ಎಂದು ಅರಿವಾದಾಗ ಭ್ರಮ ನಿರಸನವಾಗಿತ್ತು. ಕೊಟ್ಟ ಭರವಸೆ ಹುಸಿ ಎಂದು ಗೊತ್ತಾಗಲು ಭಾರತೀಯ ಕಾರ್ಮಿಕರಿಗೆ ಹೆಚ್ಚು ದಿನ ಬೇಕಾಗಿರಲಿಲ್ಲ.

ಅವರನ್ನೆಲ್ಲ ಪ್ರತ್ಯೇಕಿಸಿ, ಕಾವಲು ಇರಿಸಿದ ಶಿಬಿರಗಳಲ್ಲಿ ಉಳಿಸಿಕೊಳ್ಳಲಾಗಿತ್ತು. ತಿಂಗಳಿಗೆ ಕೇವಲ 1050 ಡಾಲರ್‌ ಸಂಬಳ ನೀಡಿ ಬದುಕಲು ಬಲವಂತಪಡಿಸಲಾಗಿತ್ತು. ಸಣ್ಣ ಕೊಠಡಿಯಲ್ಲಿ 24 ಮಂದಿಗೆ ವಾಸ್ತವ್ಯ ನೀಡಲಾಗಿತ್ತು. ಆದರೆ ಅದೇ ಕಂಪನಿಯ ಭಾರತೀಯೇತರ ನೌಕರರಿಗೆ ಮಾತ್ರ ಇಲ್ಲಿ ವಾಸಿಸಲು ಒತ್ತಡವಿರಲಿಲ್ಲ ಎಂದು ದೂರಲಾಗಿದೆ.

Write A Comment