ರಾಷ್ಟ್ರೀಯ

ನೆಟ್ ನ್ಯೂಟ್ರಾಲಿಟಿಗೆ ಗ್ರೀನ್ ಸಿಗ್ನಲ್

Pinterest LinkedIn Tumblr

net-neutralityಹೊಸದಿಲ್ಲಿ: ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಅಂತರ್ಜಾಲ ಸಮಾನತೆಗೆ (ನೆಟ್ ನ್ಯೂಟ್ರಾಲಿಟಿ) ದೂರಸಂಪರ್ಕ ಇಲಾಖೆ ವಿಶೇಷ ಸಮಿತಿ ಒಪ್ಪಿಗೆ ಸೂಚಿಸಿದೆ. ಆದರೆ ಇದೇ ವೇಳೆ ‘ಸ್ಕೈಪ್’, ‘ವಾಟ್ಸ್‌ಆ್ಯಪ್’ ಮತ್ತು ‘ವೈಬರ್’ಗಳಂತಹ ಇಂಟರ್‌ನೆಟ್ ಆಧರಿತ ಕಾಲಿಂಗ್ ಅಪ್ಲಿಕೇಷನ್‌ಗಳ ಬಳಕೆಗೆ ಬಗ್ಗೆ ಆಕ್ಷೇಪಣೆ ವ್ಯಕ್ತಪಡಿಸಿದೆ.

ಟೆಲಿಕಾಂ ಕಂಪೆನಿಗಳ ಶಿಫಾರಸಿನಂತೆ ಅಂತರ್ಜಾಲ ಬಳಕೆ ನಿರ್ಬಂಧದಿಂದ ಆಗಬಹುದಾದ ಪರಿಣಾಮಗಳ ಬಗ್ಗೆ ಅಧ್ಯಯನ ಮಾಡಲು ಎ.ಕೆ. ಭಾರ್ಗವ ನೇತೃತ್ವದ ಸಮಿತಿ ರಚಿಸಲಾಗಿತ್ತು. ಈ ಸಮಿತಿ ಇಂದು ತನ್ನ 100 ಪುಟಗಳ ಶಿಫಾರಸು ವರದಿಯನ್ನು ಸರಕಾರಕ್ಕೆ ಸಲ್ಲಿಸಿದೆ. ವರದಿಯಲ್ಲಿ ಅಂತರ್ಜಾಲ ಸಮಾನತೆಯನ್ನು ಸಮಿತಿ ಎತ್ತಿ ಹಿಡಿದಿದೆ.

ಸ್ಥಳೀಯ ಕರೆಗೆ ಆಕ್ಷೇಪ: ಇಂಟರ್‌ನೆಟ್ ಆಧರಿತ ಅಪ್ಲಿಕೇಷನ್‌ಗಳ (ಓವರ್ ದಿ ಟಾಪ್) ಮೂಲಕ ಮೆಸೇಜ್ ಮತ್ತು ಅಂತಾರಾಷ್ಟ್ರೀಯ ಕರೆಗಳಿಗೆ ವರದಿಯಲ್ಲಿ ಯಾವುದೇ ನಿರ್ಬಂಧ ಸೂಚಿಸಿಲ್ಲ. ಆದರೆ ಸ್ಥಳೀಯ ಮತ್ತು ಎಸ್‌ಟಿಡಿ ಕರೆಗಳಿಗಾಗಿ ಇಂತಹ ಅಪ್ಲಿಕೇಷನ್‌ಗಳ ಬಳಕೆಯನ್ನು ನಿರ್ಬಂಧಿಸಲು ಸಮಿತಿ ಶಿಫಾರಸು ಮಾಡಿದೆ.

ಫೇಸ್‌ಬುಕ್ ಯೋಜನೆಗೆ ವಿರೋಧ: ಇದೇ ವೇಳೆ ಅಂತರ್ಜಾಲ ಶುಲ್ಕವಿಲ್ಲದೆಯೇ ಕೆಲ ವೆಬ್‌ಸೈಟ್‌ಗಳಿಗೆ ಸಂಪರ್ಕ ಕಲ್ಪಿಸುವ ಫೇಸ್‌ಬುಕ್ ಸಂಸ್ಥೆಯ ಐ್ಞಠಿಛ್ಟ್ಞಿಛಿಠಿ.ಟ್ಟಜ ಗೆ ಯೋಜನೆಯನ್ನು ಸಮಿತಿ ವಿರೋಧಿಸಿದೆ. ಆದರೆ, ಭಾರತೀಯ ಟೆಲಿಕಾಂ ಸಂಸ್ಥೆ ‘ಏರ್‌ಟೆಲ್’ ಪ್ರಸ್ತಾಪಿಸಿರುವ ಇಂಥದ್ದೇ ‘ಏರ್‌ಟೆಲ್ ಝೀರೋ’ ಯೋಜನೆಗೆ ಟ್ರಾಯ್ ಅನುಮತಿ ಮೇರೆಗೆ ಅನುಷ್ಠಾನಕ್ಕೆ ಒಪ್ಪಿಗೆ ಸೂಚಿಸಲಾಗಿದೆ. ಒಟ್ಟಾರೆ ವರದಿ ಬಗ್ಗೆ ಸಲಹೆ ಸೂಚನೆ ನೀಡಲು ಸಮಿತಿ ಆಗಸ್ಟ್ 15ರವರೆಗೂ ಗಡುವು ನೀಡಿದೆ.

ಟೆಲಿಕಾಂ ಕಂಪೆನಿಗಳ ಅಳಲು: ಮೊಬೈಲ್ ಬಳಕೆದಾರರು ಮೆಸೇಜ್ ಮತ್ತು ಕಾಲ್‌ಗಳಿಗೆ ಸ್ಕೈಪ್, ವಾಟ್ಸ್‌ಆ್ಯಪ್‌ನಂತಹ ಇಂಟರ್‌ನೆಟ್ ಆಧರಿತ ಅಪ್ಲಿಕೇಷನ್‌ಗಳನ್ನು ಬಳಸುವುದರಿಂದ ತಮಗೆ ನಷ್ಟವಾಗುತ್ತಿದೆ ಎಂದು ಖಾಸಗಿ ಟೆಲಿಕಾಂ ಕಂಪನಿಗಳು ಟ್ರಾಯ್‌ಗೆ ದೂರು ಸಲ್ಲಿಸಿದ್ದವು. ನೆಟ್ ನ್ಯೂಟ್ರಲಿಟಿ ತೆರವುಗೊಳಿಸುವಂತೆ ಮನವಿ ಮಾಡಿದ್ದವು. ಆದರೆ ಇದಕ್ಕೆ ಸಾರ್ವಜನಿಕರಿಂದ ಭಾರಿ ವಿರೋಧ ವ್ಯಕ್ತವಾಗಿತ್ತು.

ಕಿಡಿ ಹೊತ್ತಿಸಿದ ‘ಏರ್‌ಟೆಲ್ ಝೀರೋ’: ಪ್ರಮುಖ ಟೆಲಿಕಾಂ ಕಂಪೆನಿ ಏರ್‌ಟೆಲ್ ನೆಟ್ ನ್ಯೂಟ್ರಾಲಿಟಿಗೆ ವಿರೋಧವಾದ ತನ್ನ ‘ಏರ್‌ಟೆಲ್ ಝೀರೋ’ ಎಂಬ ಯೋಜನೆ ಪ್ರಸ್ತಾಪಿಸುವುದರೊಂದಿಗೆ ದೇಶಾದ್ಯಂತ ಅಂತರ್ಜಾಲ ಸಮಾನತೆ ಗಾಗಿ ಸಮರ ಶುರುವಾಗಿತ್ತು. ಈ ಯೋಜನೆಯಡಿ ಏರ್‌ಟೆಲ್ ತನ್ನ ಗ್ರಾಹಕರಿಗೆ ಇಂಟರ್‌ನೆಟ್ ಸಂಪರ್ಕವಿಲ್ಲದಿದ್ದರೂ ಕೆಲವೊಂದು ವೆಬ್‌ಸೈಟ್‌ಗಳ ಉಚಿತ ಬಳಕೆಗೆ ಅವಕಾಶ ಅವಕಾಶ ಮಾಡಿಕೊಡಲು ನಿರ್ಧರಿಸಿತ್ತು. ಆದರೆ ಇದಕ್ಕಾಗಿ ವೆಬ್‌ಸೈಟ್‌ಗಳಿಂದ ಇಂತಿಷ್ಟು ಹಣ ಪಡೆಯುವ ಯೋಜನೆ ಹೊಂದಿತ್ತು.

Write A Comment