ನವದೆಹಲಿ; ಪದೇ ಪದೇ ಕದನ ವಿರಾಮ ಉಲ್ಲಂಘನೆ ಮಾಡುವ ಪಾಕ್ ತನ್ನೀ ವರ್ತನೆಯನ್ನು ಬದಲಾಯಿಸಿಕೊಳ್ಳಲಾರದು ಎಂದಿರುವ ವಿರೋಧ ಪಕ್ಷ ಕಾಂಗ್ರೆಸ್, ಮುಂದಿನ ವರ್ಷ ಪಾಕಿಸ್ತಾನಕ್ಕೆ ಭೇಟಿ ನೀಡಲಿರುವ ಪ್ರಧಾನಿ ಮೋದಿ ಸುರಕ್ಷತತೆಯ ಬಗ್ಗೆ ವ್ಯಾಕುಲತೆಯನ್ನು ವ್ಯಕ್ತಪಡಿಸಿದೆ.
ಪಾಕಿಸ್ತಾನ ತನ್ನ ದುರ್ವತನೆಯನ್ನು ಬಿಡಲೊಲ್ಲದು. ಅವರಿಂದ ಪದೇ ಪದೇ ಬದಲಾವಣೆಯನ್ನು ಅಪೇಕ್ಷಿಸುವುದು ಸರ್ವಥಾ ತಪ್ಪು. ಹಾಗಿದ್ದೂ ಪ್ರಧಾನಿ ಪಾಕಿಸ್ತಾನಕ್ಕೆ ಹೋಗಲು ಸಿದ್ಧರಾಗಿದ್ದಾರಾ? ಅಲ್ಲಿಗೆ ಹೋದರೆ ಅವರ ಪ್ರಾಣಕ್ಕೆ ಅಪಾಯವಾಗಬಹುದು. ಇದನ್ನೇ ನಾವು ಈ ಮೊದಲು ಸಹ ಹೇಳಿದ್ದು. ಪಾಕ್ ಪ್ರವಾಸಕ್ಕೆ ಹೋಗಲಿರುವ ಪ್ರಧಾನಿ ಮೋದಿ ಸುರಕ್ಷತೆ ಚಿಂತೆ ನನ್ನನ್ನು ಕಾಡುತ್ತಿದೆ ಎಂದು ಕಾಂಗ್ರೆಸ್ ನಾಯಕ ರಶೀದ್ ಅಳ್ವಿ ಕಳವಳವನ್ನು ವ್ಯಕ್ತ ಪಡಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಅಖನೂರ್ ವಲಯದಲ್ಲಿ ಪಾಕ್ ಸತತ ಎರಡು ಬಾರಿ ಕದನ ವಿರಾಮ ಉಲ್ಲಂಘನೆ ಮಾಡಿದ್ದು ಭಾರತ ಈ ಕುರಿತು ಪಾಕಿಸ್ತಾನ ರಾಯಭಾರಿ ಬಳಿ ವಿರೋಧವನ್ನು ವ್ಯಕ್ತಪಡಿಸಿದೆ.
ಆರ್.ಎಸ್.ಪುರ ಪೂಂಚ್ ಶಾಹ್ಪುರ ವಲಯದಲ್ಲಿ ಪಾಕ್ ಸೈನಿಕರು ಅಪ್ರಚೋದಿತ ಗುಂಡಿನ ದಾಳಿ ನಡೆಸಿದ ಪರಿಣಾಮ ಮೂರು ನಾಗರಿಕರು ತೀವ್ರವಾಗಿ ಗಾಯಗೊಂಡಿದ್ದಾರೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ವರದಿಗಳ ಪ್ರಕಾರ ಭಾರತಕ್ಕೆ ಸೇರಿದ ಭೂಭಾಗದಲ್ಲಿ ಪಾಕ್ ಸೈನಿಕರು ಇಂದು ಮುಂಜಾನೆ 2 ಗಂಟೆಯ ಸುಮಾರಿಗೆ ಅಪ್ರಚೋದಿತ ಗುಂಡಿನ ದಾಳಿ ನಡೆಸಲು ಪ್ರಾರಂಭಿಸಿದೆ. ಅದಕ್ಕೆ ಭಾರತೀಯ ಸೈನಿಕರು ತಕ್ಕ ತಿರುಗೇಟು ನೀಡಿದ್ದಾರೆ.
ಬುಧವಾರ ಪರ್ಗವಾಲ್ ವಲಯದಲ್ಲಿ ಸಹ ಪಾಕ್ ಸೈನಿಕರು ದಾಳಿ ನಡೆಸಿದ್ದು , ಪರಿಣಾಮ ಒಬ್ಬ ವ್ಯಕ್ತಿ ಸಾವನ್ನಪ್ಪಿ ನಾಲ್ಕು ಜನರು ಗಂಭೀರವಾಗಿ ಗಾಯಗೊಂಡಿದ್ದರು.