ಅಂತರಾಷ್ಟ್ರೀಯ

ಜರ್ಮನಿಯಲ್ಲಿ ಮನುಷ್ಯನ ಕೊಂದ ರೋಬೋ !

Pinterest LinkedIn Tumblr

robo

ಬರ್ಲಿನ್: ಜರ್ಮನಿಯ ವಾಹನ ತಯಾರಿಕೆ ಸಂಸ್ಥೆಯಾದ ವೋಕ್ಸ್‌ವ್ಯಾಗನ್‌ನ ಉತ್ಪಾದನಾ ಘಟಕದಲ್ಲಿ ನಡೆದ ಅವಘಡದಲ್ಲಿ ಗುತ್ತಿಗೆದಾರನೊಬ್ಬನ ಯಂತ್ರಮಾನವನ ಕೈಗಳಲ್ಲಿ ವ್ಯಕ್ತಿಯೊಬ್ಬ ಸಾವು ಕಂಡಿದ್ದಾನೆ.

ಫ್ರಾಂಕ್‌ಫರ್ಟ್‌ನಿಂದ 100 ಕಿಮೀ ಉತ್ತರದಲ್ಲಿರುವ ಬೌನತಲ್‌ ಎಂಬಲ್ಲಿನ ವಾಹನ ತಯಾರಿಕೆ ಘಟಕದಲ್ಲಿ ಸೋಮವಾರ ಘಟನೆ ನಡೆದಿದೆ ಎಂದು ಸಂಸ್ಥೆಯ ವಕ್ತಾರ ಹೀಕೊ ವಿಲ್ವಿಗ್‌ ಸ್ಪಷ್ಟಪಡಿಸಿದ್ದಾರೆ.

ಸ್ಟೇಷನರಿ ರೋಬೋ( ಯಂತ್ರಮಾನವ) ಅನ್ನು ಅನುಷ್ಠಾನ ಮಾಡುವ ತಂಡದಲ್ಲಿದ್ದ 22 ವರ್ಷದ ಯುವಕನನ್ನು ಅದು ಬರ ಸೆಳೆದು ಲೋಹದ ಕೈಗಳ ನಡುವೆ ಅಪ್ಪಚ್ಚಿ ಮಾಡಿದೆ ಎಂದು ಹೀಕೊ ವಿಲ್ವಿಗ್‌ ಹೇಳಿದರು.

ಈವರೆಗೆ ನಡೆಸಿದ ಪ್ರಾಥಮಿಕ ತನಿಖೆಗಳ ಪ್ರಕಾರ ಈ ದುರಂತಕ್ಕೆ ಮಾನವನ ತಪ್ಪು ಕಾರಣವಾಗಿದೆ. ಈ ವಿಚಾರದಲ್ಲಿ ಯಂತ್ರಮಾನವನ ತಪ್ಪಿಲ್ಲ. ಬೇರೆ ಬೇರೆ ಕೆಲಸ ಮಾಡುವಂತೆ ಪ್ರೋಗ್ರಾಮಿಂಗ್‌ ಮಾಡಲು ಸಾಧ್ಯವಿರುವ ರೋಬೋದಲ್ಲಿ ದೋಷವೂ ಇರಲಿಲ್ಲ. ಅದು ಸಾಮಾನ್ಯವಾಗಿ ನಿರ್ದಿಷ್ಟವಾಗಿ ತನಗೆ ವಹಿಸಿದ ಕೆಲಸವನ್ನು ನಿರ್ದಿಷ್ಟ ಜಾಗದಲ್ಲಷ್ಟೇ ನಿರ್ವಹಿಸುತ್ತದೆ. ಅದು ಘಟಕದಲ್ಲಿ ವಾಹನಗಳ ಭಾಗಗಳನ್ನು ಬರಸೆಳೆದುಕೊಂಡು ಮುಂದಿನ ಕೆಲಸಕ್ಕೆ ಬೇಕಾದಂತೆ ಬಾಗಿಸುವ ಕೆಲಸ ಮಾಡುತ್ತದೆ ಎಂದು ತಿಳಿಸಿದರು.

ದುರ್ಘಟನೆ ನಡೆದಾಗ ಇನ್ನೊಬ್ಬ ಸಾವಿಗೀಡಾದ ಗುತ್ತಿಗೆದಾರನ ಜತೆಗೆ ಇನ್ನೊಬ್ಬನೂ ಇದ್ದ. ಅದರೆ ಆತನಿಗೇನೂ ಅಪಾಯವಾಗಿಲ್ಲ. ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿರುವುದರಿಂದ ಹೆಚ್ಚಿನ ವಿವರ ನೀಡಲು ಅಸಾಧ್ಯ ಎಂದು ವಿಲ್ವಿಗ್‌ ಹೇಳಿದರು. ಕೊಲೆಯೇನೋ ನಡೆದಿದೆ. ಆದರೆ ಆರೋಪ ಪಟ್ಟಿ ಸಿದ್ಧಪಡಿಸುವುದು ಯಾರ ವಿರುದ್ಧ ಎಂದು ಪ್ರಾಸಿಕ್ಯೂಟರ್‌ಗಳು ತಲೆಕೆಡಿಸಿಕೊಳ್ಳುತ್ತಿದ್ದಾರೆ ಎಂದು ಜರ್ಮನ್ ಸುದ್ದಿ ಸಂಸ್ಥೆ ಡಿಪಿಎ ವರದಿ ಮಾಡಿದೆ.

Write A Comment