ಮನುಷ್ಯನ ಖುಷಿಗೆ ನಾನಾ ಮುಖಗಳು… ಇನ್ನು ಮನರಂಜನೆಗೋ ನಾನಾ ರೂಪಗಳು… ಈ ರೀತಿ ತನ್ನ ಸುಖಕ್ಕೆ, ಮೋಜಿಗೆ ಮನುಷ್ಯ ನೂರಾರು ಮಾರ್ಗಗಳನ್ನು ಹುಡುಕಿಕೊಂಡಿದ್ದಾನೆ. ಇದು ಅನಾದಿಕಾಲದಿಂದಲೂ ನಡೆದು ಬಂದಿರುವ ಪದ್ಧತಿ. ಆದರೆ, ಇದೀಗ ಈ ಮಾರ್ಗಗಳ ಸ್ವರೂಪ ಸಾಕಷ್ಟು ಬದಲಾಗಿದೆ.
ಪ್ರಾಣಿ- ಪಕ್ಷಿಗಳ ಬಳಕೆ ಈ ಸಾಲಿನಲ್ಲಿ ಇದೀಗ ಪ್ರಮುಖ ಸ್ಥಾನ ಪಡೆದಿವೆ. ಕುದುರೆ ಜೂಜಿಗೆ ವಿಶ್ವ ಮಾನ್ಯತೆಯಿದೆ. ಇನ್ನು ಹುಂಜಗಳ ಫೈಟ್ ನೋಡಿ ವಿಕೃತ ಖುಷಿ ಪಡುವವರ ಸಂಖ್ಯೆಗೂ ಕಡಿಮೆಯಿಲ್ಲ. ಅವುಗಳ ಕಾಲಿಗೆ ಕಟ್ಟಿದ ಸಣ್ಣ ಕತ್ತಿಗಳು ಬಡಿದಾಡುವಾಗ ಚುಚ್ಚಿಕೊಂಡು ಒಂದು ಹುಂಜ ಸತ್ತರಂತೂ ಗೆದ್ದ ಹುಂಜದ ಮಾಲೀಕನ ಖುಷಿ ಮುಗಿಲು ಮುಟ್ಟುತ್ತದೆ. ಈ ಸಂದರ್ಭದಲ್ಲಿ ಸಾವಿರ, ಲಕ್ಷಗಳ ಬೆಟ್ಟಿಂಗ್ ನಡೆಯುತ್ತದೆ. ಈ ಸಾಲಿಗೆ ಟಗರುಗಳ ಕಾಳಗವೂ ಸೇರುತ್ತದೆ. ಇದಕ್ಕೂ ವಿಶ್ವಮಟ್ಟದಲ್ಲಿ ಬೇಡಿಕೆಯಿದೆ. ಇನ್ನು ಗೂಳಿಗಳ ಕಾದಾಟವೂ ಜನಾಕರ್ಷಕವಾಗಿದೆ.
ಹೀಗೆ ನಾನಾ ವಿಧಗಳಿಂದ ಮನುಷ್ಯ ತನ್ನ ಮನರಂಜನೆಗೆ ಹಾದಿಗಳನ್ನು ಕಂಡುಕೊಂಡಿದ್ದಾನೆ. ಆ ಮೂಲಕ ಖುಷಿ ಪಡುತ್ತ ಬಂದಿದ್ದಾನೆ. ಇವುಗಳ ಸಾಲಿಗೆ ಹಂದಿಗಳ ಓಟ ಮತ್ತು ಈಜು ಸ್ಪರ್ಧೆ ಸೇರ್ಪಡೆಯಾಗಿ ಹಲವು ದಶಕಗಳೇ ಕಳೆದಿವೆ. ಆಸ್ಟ್ರೇಲಿಯಾ, ಅಮೆರಿಕ ಮತ್ತು ಚೀನಾಗಳಲ್ಲಿ ಹಂದಿಗಳನ್ನು ಮಾಂಸಕ್ಕೆ ಮಾತ್ರ ಸೀಮಿತಗೊಳಿಸಿಕೊಂಡಿಲ್ಲ. ಇಲ್ಲಿನ ಜನ ಅವುಗಳನ್ನು ತಮ್ಮ ಮನರಂಜನೆಗೂ ಬಳಸಿಕೊಳ್ಳುತ್ತ ಬಂದಿದ್ದಾರೆ. ಹಾಗಾಗಿ ಈ ಸ್ಪರ್ಧೆಗಳು ವಿಶ್ವದ ಆಕರ್ಷಣೆಯಾಗಿವೆ. ಆಸ್ಟ್ರೇಲಿಯಾದಲ್ಲಿ ಹಂದಿಗಳ ಓಟದ ಸ್ಪರ್ಧೆ ನೋಡಲು ಜನ ನೂಕು-ನುಗ್ಗಲಿನಲ್ಲಿ ಸೇರುತ್ತಾರೆ. ಮುಗಿಬಿದ್ದು ನೋಡುತ್ತಾರೆ. ಅದಕ್ಕಾಗಿ ಅವುಗಳಿಗೆ ಸಾಕಷ್ಟು ತಿಂಗಳುಗಳ ಕಾಲ ತರಬೇತಿ ಕೊಟ್ಟಿರುತ್ತಾರೆ. ಅವು ಹಾರುತ್ತ, ಜಿಗಿಯುತ್ತ ಓಡುವುದನ್ನು ನೋಡಿ ಅಲ್ಲಿ ನೆರೆದ ಜನ ಕುಣಿದು ಕುಪ್ಪಳಿಸುತ್ತಾರೆ, ಕೇಕೆ ಹಾಕಿ ನಗುತ್ತಾರೆ. ಹೀಗೆ ಇಡೀ ದಿನ ನಡೆಯುವ ಸ್ಪರ್ಧೆಗಳನ್ನು ನೋಡಲು ಸಾವಿರ, ಲಕ್ಷ ಸಂಖ್ಯೆಯಲ್ಲಿ ಪ್ರೇಕ್ಷಕರು ಸೇರುತ್ತಾರೆ.ಇಲ್ಲೂ ಪಂದ್ಯದಲ್ಲಿ ಗೆಲ್ಲುವ ಹಂದಿಗಳಿಗೆ ಭಾರೀ ಮೊತ್ತದ ಬಹುಮಾನ ಸಿಗಲಿದೆ. ಇನ್ನು ಚೀನಾದ ಹುವನ್ ಪ್ರಾಂತ್ಯದ ಶಿಯನ್ ಸರೋವರದಲ್ಲಿ ಏರ್ಪಡಿಸುವ ಹಂದಿಗಳ ಜಿಗಿಯುವ ಮತ್ತು ಈಜು ಸ್ಪರ್ಧೆಗಳಲ್ಲಿ ಎಲ್ಲಿಲ್ಲದ ಬೇಡಿಕೆ. ಇಲ್ಲಿ ಹಂದಿಗಳ ಡೈ ಮತ್ತು ಈಜು ಸ್ಪರ್ಧೆಗೆ ಜನ ಸಾಕಷ್ಟು ಸಂಖ್ಯೆಯಲ್ಲಿ ಸೇರುತ್ತಾರೆ. ಇಡೀ ದಿನ ನಿಂತು ನೋಡಿ ಆನಂದಿಸುತ್ತಾರೆ. ಪ್ರತಿ ವರ್ಷ ಮೇನಲ್ಲಿ ಈ ಸ್ಪರ್ಧೆ ಏರ್ಪಡಿಸುತ್ತಾರೆ.
ಹೀಗೆ ಪಳಗಿಸಿದ ಹಂದಿಗಳನ್ನು ಹರಿಯುವ ಕಾಲುವೆ, ನದಿ, ಸಮುದ್ರ ತೀರ ಮತ್ತು ದ್ವೀಪಗಳ ತೀರಗಳಲ್ಲಿನ ಪ್ರಶಾಂತ ನೀರಿಗೆ ಮೇಲಿನಿಂದ ಜಿಗಿಯುವ ಸ್ಪರ್ಧೆ ಏರ್ಪಡಿಸುತ್ತಾರೆ.
ಹೀಗೆ ಜಿಗಿದ ಹಂದಿಗಳು ನೀರಿನಲ್ಲಿ ಓಟದ ಸ್ಪರ್ಧೆ ನಡೆಸುತ್ತವೆ. ಯಾವ ಹಂದಿ ಮುಂಚಿತವಾಗಿ ತನ್ನ ಗುರಿ ತಲುಪುತ್ತದೆಯೋ ಅದಕ್ಕೆ ಚಾಂಪಿ ಯನ್‌ಶಿಪ್ ಪಟ್ಟ ನೀಡಲಾಗುತ್ತದೆ. ಪಂದ್ಯದಲ್ಲಿ ಗೆಲ್ಲುವ ಹಂದಿ ಗಳ ಮಾಲೀಕರ ಹರ್ಷಕ್ಕಂತೂ ಈ ಸಂದರ್ಭದಲ್ಲಿ ಮಿತಿಯೇ ಇರುವುದಿಲ್ಲ. ಇದರಿಂದ ಸ್ಪರ್ಧೆ ಏರ್ಪಡಿಸುವ ಆಯೋಜಕರಿಗೆ ಸಾಕಷ್ಟು ಹಣ ಸಿಗುತ್ತದೆ. ಹಂದಿಗಳ ಓಟದ-ಈಜು ಸ್ಪರ್ಧೆ ಸಂಪೂರ್ಣ ಮನರಂಜನೆ ಗಾಗಿಯೇ ಏರ್ಪಡಿಸಲಾಗಿದೆ ಎಂಬುದು ಆಯೋಜಕರ ಸಮರ್ಥನೆ. ಇದು ಪ್ರಾಣಿಹಿಂಸೆಯಲ್ಲ ಎಂಬುದು ಅವರ ಮತ್ತೊಂದು ಸಬೂಬು. ಜತೆಗೆ ಬೆಟ್ಟಿಂಗ್ ಸಹ ಈ ಪಂದ್ಯಗಳ ಮೂಲ ಉದ್ದೇಶ ವಲ್ಲ ಎಂಬುದನ್ನು ಹೇಳಲು ಅವರು ಮರೆಯುವುದಿಲ್ಲ. ರಜಾ ದಿನಗಳಲ್ಲಂತೂ ಪ್ರವಾಸಿ ಗರು ಇಲ್ಲಿಗೆ ತಂಡೋಪ ತಂಡವಾಗಿ ಬಂದು ಮನರಂಜನೆ ಪಡೆಯುತ್ತಾರೆ.
ಇನ್ನು ದಕ್ಷಿಣ ಅಮೆರಿಕದ ಉತ್ತರ ಕರೋಲಿನಾ ಪ್ರಾಂತ್ಯದ ಚಾರ್‌ಲೊಟ್ಟೆ ನಗರದಲ್ಲಿ ಸಾಂದರ್ಭಿಕವಾಗಿ ಹಂದಿಗಳ ಓಟದ ಸ್ಪರ್ಧೆ ಏರ್ಪಡಿಸುತ್ತಾರೆ. ವರ್ಷಕ್ಕೊಮ್ಮೆ ನಡೆಯುವ ಹೂಸ್ಟನ್ ಲೈವ್‌ಸ್ಟಾಕ್ ಶೋ ಮತ್ತು ರೊಡಿಯೋ ಸ್ಪರ್ಧೆಗಳಂತೂ ವಿಶ್ವದ ಅತಿ ದೊಡ್ಡ ಪಂದ್ಯಗಳೆಂದು ಗುರುತಿಸಲ್ಪಟ್ಟಿದೆ.
ವಿಶ್ವದ ಅತ್ಯಂತ ಎರಡನೆ ದೊಡ್ಡ ಹಂದಿಗಳ ಓಟದ ಸ್ಪರ್ಧೆ ಉತ್ತರ ಅಮೆರಿಕದಲ್ಲಿ ನಡೆಯಲಿದೆ. ಇತ್ತೀಚೆಗೆ ಅಮೆರಿಕದಲ್ಲಿ ಹಂದಿ ಓಟದ ಸ್ಪರ್ಧೆ ‘ಹಾಟ್ ಡಾಗ್ ಪಿಗ್ ರೇಸಸ್’ ಎಂದೇ ಪ್ರಖ್ಯಾತಿ ಪಡೆದಿದೆ. ಒಟ್ಟಾರೆ ಈ ರೀತಿ ಓಟದ ಸ್ಪರ್ಧೆ, ಜಿಗಿಯುವ ಸ್ಪರ್ಧೆ ಮತ್ತು ಈಜು ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ಹಂದಿ ಮಾಂಸ ರುಚಿಕರ ಮತ್ತು ಆರೋಗ್ಯಕ್ಕೂ ಅತ್ಯುತ್ತಮ ಎಂಬುದು ಅಲ್ಲಿನ ಜನರ ನಂಬಿಕೆ. ಹೀಗಾಗಿ ಈ ಸ್ಪರ್ಧೆಗಳನ್ನು ಜಗತ್ತಿನ ಉದ್ದಕ್ಕೂ ಪರಿಚಯಿಸುವ ಕಾರ್ಯಕ್ಕೆ ಮುಂದಾಗಿರುವ ಈ ಮಂದಿ ಹಂದಿ ಸಾಕಾಣಿಕೆಯನ್ನೇ ದೊಡ್ಡ ಉದ್ಯಮವನ್ನಾಗಿ ಮಾಡಿಕೊಂಡಿದ್ದಾರೆ. ಆ ಮೂಲಕ ಕುಬೇರರಾಗುತ್ತ ಸಾಗಿದ್ದಾರೆ.
