ಲಾಸ್ ಏಂಜಲೀಸ್ (ಪಿಟಿಐ): ನಾಯಿ ದಾಳಿಗೆ ತುತ್ತಾಗಿದ್ದ ತನ್ನ ಆರು ವರ್ಷದ ಮಾಲೀಕನನ್ನು ರಕ್ಷಿಸಿದ ಅಮೆರಿಕದ ಬೆಕ್ಕೊಂದು ‘ಹೀರೊ ಡಾಗ್’ ಪ್ರಶಸ್ತಿಗೆ ಪಾತ್ರವಾಗಿದೆ.
ಅಮೆರಿಕದ ಪ್ರಾಣಿ ದಯಾ ಸಂಘ ತಾರಾ ಹೆಸರಿನ ಬೆಕ್ಕಿಗೆ ಈ ಪ್ರಶಸ್ತಿ ನೀಡಿ ಗೌರವಿಸಿದೆ. ತಾರಾ ನೆಲೆಸಿದ್ದ ಮನೆಯ ಮಾಲೀಕ ಜೆರಿಮಿ ಟ್ರಯಾಂತಫಿಲೊ ಮೈದಾನದಲ್ಲಿ ಸೈಕಲ್‌ನಲ್ಲಿ ಆಟವಾಡುತ್ತಿದ್ದಾಗ ನಾಯಿಯೊಂದು ದಾಳಿ ನಡೆಸಿತ್ತು. ಆಗ ತಾರಾ ಆ ನಾಯಿಯ ಬೆನ್ನಟ್ಟಿ ಬಾಲಕನನ್ನು ರಕ್ಷಿಸಿತ್ತು ಎಂದು ಸ್ಥಳೀಯ ಸುದ್ದಿಸಂಸ್ಥೆ ವರದಿ ಮಾಡಿದೆ. ತಾರಾ ನಾಯಿಯೊಂದಿಗೆ ಸೆಣಸಾಡಿದ ದೃಶ್ಯಗಳು ಸಿಸಿ ಟಿ.ವಿ ಕ್ಯಾಮೆರಾದಲ್ಲಿ ದಾಖಲಾಗಿತ್ತು. ಈ ದೃಶ್ಯಾವಳಿಗಳು ಅಂತರ್ಜಾಲದಲ್ಲಿಯೂ ಹರಿದಾಡಿದವು. ಇದನ್ನು 6.50 ಲಕ್ಷಕ್ಕೂ ಹೆಚ್ಚು ಜನರು ಮೆಚ್ಚಿಕೊಂಡಿದ್ದರು.
ತಾರಾ ಧೈರ್ಯವನ್ನು ಮೆಚ್ಚಿ ಅಮೆರಿಕ ಪ್ರಾಣಿ ದಯಾ ಸಂಘ ತನ್ನ 33ನೇ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ‘ಹೀರೊ ಡಾಗ್’ಪ್ರಶಸ್ತಿ ನೀಡಿದೆ. ಅಲ್ಲದೇ ತಾರಾ ಕಾರ್ಯಾಚರಣೆ ಮೆಚ್ಚಿ ಟ್ರೋಫಿಯಲ್ಲಿದ್ದ ‘ಡಾಗ್’ ಶಬ್ದವನ್ನು ತೆಗೆದು ‘ಕ್ಯಾಟ್’ ಶಬ್ದ ಸೇರಿಸಿದೆ.

