ಕರ್ನಾಟಕ

ನಕಲಿ ಆಯುರ್ವೇದ ಔಷಧ ಮಾರಾಟ ಜಾಲ ಪತ್ತೆ; ಇಬ್ಬರ ಬಂಧನ

Pinterest LinkedIn Tumblr

cheating

ಬೆಂಗಳೂರು: ಕಾಯಿಲೆಗಳನ್ನು ಗುಣಪಡಿಸುವುದಾಗಿ ಸಾರ್ವಜನಿಕರಿಂದ ಲಕ್ಷಾಂತರ ರೂಪಾಯಿ ಹಣ ಪಡೆದು, ನಕಲಿ ಆಯುರ್ವೇದ ಔಷಧ ಮಾರಾಟ ಮಾಡುತ್ತಿದ್ದ ವಂಚಕರ ಜಾಲವನ್ನು ಪತ್ತೆ ಮಾಡಿರುವ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಬೆಳಗಾವಿ ಜಿಲ್ಲೆ ಗೋಕಾಕ್‌ನ ರೋಹಿತ್ (20) ಹಾಗೂ ದುರ್ಗಪ್ಪ (49) ಎಂಬುವರನ್ನು ಬಂಧಿಸಿ, ನಕಲಿ ಗಿಡಮೂಲಿಕೆಗಳನ್ನು ಜಪ್ತಿ ಮಾಡಲಾಗಿದೆ. ಪ್ರಕರಣದ ಪ್ರಮುಖ ಆರೋಪಿಗಳಾದ ಶಿವಾನಂದ ಮತ್ತು ವಿರೂಪಾಕ್ಷ ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ವಿಲ್ಸನ್‌ ಗಾರ್ಡನ್‌ನಲ್ಲಿ ‘ತುಳಸಿ ಆಯುರ್ವೇದ ಮೆಡಿಸಿನ್’ ಕ್ಲಿನಿಕ್ ಇಟ್ಟುಕೊಂಡಿದ್ದ ಶಿವಾನಂದ ಹಾಗೂ ವಿರೂಪಾಕ್ಷ, ರೋಗಿಗಳ ಬಳಿ ತಮ್ಮನ್ನು ಆಯುರ್ವೇದ ವೈದ್ಯರೆಂದು ಪರಿಚಯ ಮಾಡಿಕೊಳ್ಳುತ್ತಿದ್ದರು. ಅಲ್ಲದೆ, ರೋಗಿಗಳನ್ನು ಪುಸಲಾಯಿಸಿ ಕ್ಲಿನಿಕ್‌ಗೆ ಕರೆತರಲು ಹಲವು ಸಹಾಯಕರನ್ನು ಇಟ್ಟುಕೊಂಡಿದ್ದರು.

ಸರ್ಕಾರಿ ಆಸ್ಪತ್ರೆ ಹಾಗೂ ಪ್ರತಿಷ್ಠಿತ ನರ್ಸಿಂಗ್ ಹೋಮ್‌ಗಳಿಗೆ ಹೋಗುತ್ತಿದ್ದ ಸಹಾಯಕರು, ಚಿಕಿತ್ಸೆಗೆ ಬರುವ ವೃದ್ಧರ ಪಕ್ಕದಲ್ಲಿ ಕುಳಿತು ಪರಿಚಯ ಮಾಡಿ ಕೊಳ್ಳುತ್ತಿದ್ದರು. ನಂತರ ಅವರ ಕಾಯಿಲೆ ಬಗ್ಗೆ ತಿಳಿದುಕೊಂಡು, ‘ನಮ್ಮ ತಂದೆ–ತಾಯಿ ಕೂಡ ಹಲವು ವರ್ಷಗಳಿಂದ ಇದೇ ಕಾಯಿಲೆಯಿಂದ ಬಳಲುತ್ತಿದ್ದರು. ಪರಿಚಿತರ ಮಾತಿನಂತೆ ಆಯುರ್ವೇದ ವೈದ್ಯರ ಮೊರೆ ಹೋದೆವು. ಈಗ ಗುಣಮುಖರಾಗಿದ್ದಾರೆ. ವೈದ್ಯರೇ ಮನೆಗೆ ಬಂದು ಔಷಧ ಕೊಡುವುದರಿಂದ ನೀವು ಸಹ ಅಲ್ಲೇ ಚಿಕಿತ್ಸೆ ಪಡೆಯುವುದು ಉತ್ತಮ’ ಎಂದು ಸುಳ್ಳು ಹೇಳಿ ದೂರವಾಣಿ ಸಂಖ್ಯೆ ಕೊಡುತ್ತಿದ್ದರು.

ವಂಚನೆ ತಂತ್ರವನ್ನು ಅರಿಯದ ಕೆಲ ವೃದ್ಧರು, ಆ ಸಂಖ್ಯೆಗೆ ಕರೆ ಮಾಡಿ ಕಾಯಿಲೆ ಬಗ್ಗೆ ವಿವರಿಸುತ್ತಿದ್ದರು. ನಂತರ ವೈದ್ಯನ ಸೋಗಿನಲ್ಲಿ ತೆರಳುತ್ತಿದ್ದ ವಿರೂಪಾಕ್ಷ, ವಿವಿಧ ಸೊಪ್ಪನ್ನು ಅರೆದು, ಅದಕ್ಕೆ ಎಣ್ಣೆ, ಎಳನೀರು ಹಾಗೂ ಚೂರ್ಣ ಬೆರೆಸುತ್ತಿದ್ದ. ನಂತರ ಅದನ್ನು ಕುಡಿಸಿ, ₹ 40 ರಿಂದ ₹ 50 ಸಾವಿರ ಹಣ ಪಡೆದುಕೊಳ್ಳುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದರು.

ಮೂರು ತಿಂಗಳಲ್ಲಿ ಕಾಯಿಲೆ ಗುಣವಾಗದಿದ್ದರೆ ಹಣ ವಾಪಸ್ ಕೊಡುವುದಾಗಿ ಆರೋಪಿಗಳು ಸಾರ್ವಜನಿಕರಿಗೆ ಹೇಳಿರುತ್ತಿದ್ದರು. ಆದರೆ, ತಮ್ಮ ವಂಚನೆ ರಹಸ್ಯ ಗೊತ್ತಾಗುತ್ತದೆ ಎಂಬ ಕಾರಣಕ್ಕೆ ಎರಡು ತಿಂಗಳಿಗೊಮ್ಮೆ ಕ್ಲಿನಿಕ್‌ನ ಸ್ಥಳ ಬದಲಾಯಿಸುತ್ತಿದ್ದರು. ಹೆಚ್ಚಿನ ಬಾಡಿಗೆ ಕೊಡುವುದಾಗಿ ಮಳಿಗೆ ಬಾಡಿಗೆ ಪಡೆಯುತ್ತಿದ್ದ ಇವರು, ಮುಂಗಡ ಹಣ ಕೊಡದೆ ಕಾಲ ತಳ್ಳುತ್ತಿದ್ದರು. ನಂತರ ರಾತ್ರೋರಾತ್ರಿ ಮಳಿಗೆ ಖಾಲಿ ಮಾಡುತ್ತಿದ್ದರು.

‘ಆರು ತಿಂಗಳು ಕಳೆದರೂ ಕಾಯಿಲೆ ಗುಣವಾಗದ ಕಾರಣ ವೃದ್ಧರೊಬ್ಬರು ಆರೋಪಿಗಳಿಗೆ ಕರೆ ಮಾಡಿ ಹಣ ವಾಪಸ್ ಕೇಳಿದ್ದರು. ಆದರೆ, ಹಣ ಕೊಡಲು ಒಪ್ಪದಿದ್ದಾಗ ಅವರು ಸಿಸಿಬಿಗೆ ಕರೆ ಮಾಡಿ ದೂರು ಕೊಟ್ಟರು. ಕ್ಲಿನಿಕ್ ಮೇಲೆ ದಾಳಿ ನಡೆಸಿದಾಗ ನಕಲಿ ಆಯುರ್ವೇದ ಔಷಧ ಮಾರಾಟ ಮಾಡುತ್ತಿರುವುದು ಗೊತ್ತಾಯಿತು’ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದರು.

‘ಯೋಗೇಂದ್ರ ರಸ್, ರೇಷಮ್ ಕಸ್ತೂರಿ, ಬಂಗರಾಜ ಬುಟ್ಟಿ, ಅಬ್ರಾಕ್ ಬಸ್ಮಾ, ಕುಮಾರ ಕಲ್ಯ ರಸ್ ಹಾಗೂ ಮೋತಿ ಬಸ್ಮಾ, ಬೀಕ್‌ ಕಾಕ್ಲಿ ಮುಂತಾದ ಹೆಸರಿನ ಗಿಡಮೂಲಿಕೆಗಳನ್ನು ಜಪ್ತಿ ಮಾಡಲಾಗಿದೆ. ಅಲ್ಲದೆ, ಅವಧಿ ಮುಗಿದಿರುವ ಬೈದ್ಯನಾಥ್ ಆಯುರ್ವೇದ ಔಷಧಗಳು ಸಹ ಕ್ಲಿನಿಕ್‌ನಲ್ಲಿ ಪತ್ತೆಯಾಗಿವೆ’ ಎಂದರು.

ಜೈಲು ಶಿಕ್ಷೆ ಆಗಿತ್ತು: ವಿರೂಪಾಕ್ಷ ಹಾಗೂ ಶಿವಾನಂದ ಅವರು 2012ರಿಂದ ಈ ಜಾಲ ನಡೆಸುತ್ತಿದ್ದಾರೆ. ಅವರ ವಿರುದ್ಧ ಕೋರಮಂಗಲ ಹಾಗೂ ಅಶೋಕನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದವು. ಜೈಲಿಗೆ ಹೋಗಿದ್ದ ಅವರು ಜಾಮೀನಿನ ಮೇಲೆ ಬಿಡುಗಡೆ ಆದ ನಂತರವೂ ಕೃತ್ಯ ಮುಂದುವರಿಸಿದ್ದರು.

Write A Comment