ಅಂತರಾಷ್ಟ್ರೀಯ

116 ವರ್ಷದ ವಿಶ್ವದ ಹಿರಿಯ ‘ಅಮ್ಮ’!

Pinterest LinkedIn Tumblr

4444

ಕ್ವಾಲಾಲಂಪುರ(ಪಿಟಿಐ): ಮಲೇಷ್ಯಾದ 116 ವರ್ಷ ವಯಸ್ಸಿನ ಮಹಿಳೆಯೊಬ್ಬರು ವಿಶ್ವದ ಅತ್ಯಂತ ಹಿರಿಯ ಮಹಿಳೆ ಎಂದು ನಂಬಲಾಗಿದ್ದು, ಈ ಮಹಿಳೆ ವೃದ್ಧಾಪ್ಯದಲ್ಲೂ ಸ್ಪಷ್ಟ ದೃಷ್ಟಿ ಹೊಂದಿದ್ದು, ಯಾವುದೇ ಶ್ರವಣ ಸಾಧನವಿಲ್ಲದೆ ಧ್ವನಿಯನ್ನು ಆಲಿಸಬಲ್ಲ ಸಾಮರ್ಥ್ಯ ಇವರಿಗಿದೆ.

ಯಟಿ ಮುಸ್ಡಿ ಅವರೇ ಈ ಹಿರಿಯ ಜೀವ. ಜೋಹರ್ ನ ಬಾಟು ಪಹಟ್ ನಲ್ಲಿ 1899ರ ಏ. 27ರಂದು ಜನಿಸಿದ ಈ ಮಹಿಳೆ 116 ವರ್ಷಗಳ ಜೀವನ ನಡೆಸಿದ್ದು, ವಿಶ್ವದ ಹಿರಿಯ ಜೀವ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ವಿಶ್ವದ ಹಳೇಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಅಮೆರಿಕದ ಗೆರ್ಟ್ರೂಡ್ ವೀವರ್ ಕೆಲ ದಿನಗಳ ಹಿಂದೆಯಷ್ಟೇ ನಿಧನರಾಗಿದ್ದಾರೆ. ಇವರ ನಿಧನದ ನಂತರ ಲಾಸ್ ಏಂಜಲೀಸ್ ಮೂಲದ ಮುಪ್ಪುಶಾಸ್ತ್ರ ಸಂಶೋಧನೆ ಸಂಸ್ಥೆ 115 ವರ್ಷ ವಯೋಮಾನದ ಜೆರಲಿನಾ ಟ್ಯಾಲಿ ಅವರು ವಿಶ್ವದ ಅತ್ಯಂತ ಹಿರಿಯ ಜೀವಿಯ ಸ್ಥಾನ ಪಡೆದಿದ್ದಾರೆ ಎಂದು ಹೇಳಿಕೊಂಡಿತ್ತು.

ಆದರೆ, ಮಲೇಷ್ಯಾದ ರಾಷ್ಟ್ರೀಯ ನೋಂದಣಿ ದಾಖಲೆಗಳ ಪ್ರಕಾರ ಯಟಿ ಮಸ್ಡಿ ಅವರು 116 ವರ್ಷಗಳ ವಯೋಮಾನ ಹೊಂದಿದ್ದಾರೆ ಎಂದು ‘malaysiandigest.com’ ನಲ್ಲಿ ವರದಿ ಮಾಡಿದೆ. ಈ ಮಹಿಳೆ ಆರೋಗ್ಯವಾಗಿದ್ದು, ಇವರಿಗೆ ತೀವ್ರವಾದ ಯಾವುದೇ ಅನಾರೋಗ್ಯ ಕಾಡಿಲ್ಲ, ನೆನಪಿನ ಶಕ್ತಿಯೂ ಉತ್ತಮವಾಗಿದೆ. ಅವರು ಅತ್ಯಂತ ಹಿಂದಿನ ಘಟನೆಗಳನ್ನೂ ನೆನಪಿಸಿಕೊಳ್ಳುವ ಸಾಮರ್ಥ್ಯವನ್ನು ಈಗಲೂ ಹೊಂದಿದ್ದಾರೆ ಎಂದು ಹೇಳಿದೆ.

‘ಸುದೀರ್ಘವಾದ ಜೀವನ ನಡೆಸಲು ಉಸಿರು ನೀಡಿದ ಆ ದೇವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ’ ಎಂದಿರುವ ಈ ಹಿರಿಯ ಜೀವ, ‘ವೃದ್ಧಾಪ್ಯದಲ್ಲೂ ಸ್ಪಷ್ಟ ದೃಷ್ಟಿ ಹೊಂದಿದ್ದು, ಯಾವುದೇ ಶ್ರವಣ ಸಾಧನವಿಲ್ಲದೆ ಧ್ವನಿಯನ್ನು ಆಲಿಸಬಲ್ಲ ಸಾಮರ್ಥ್ಯ ನನಗಿದೆ. ನೆನಪಿನ ಶಕ್ತಿಯೂ ಉತ್ತಮವಾಗಿದೆ’ ಎಂದು ಹೇಳಿದ್ದಾರೆ.

ಆರೋಗ್ಯದ ಗುಟ್ಟೇನು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಅವರು, ಒಣ ಬ್ರೆಡ್ ಅಥವಾ ಸಿಹಿಯಿಲ್ಲದ ಬಿಸ್ಕತ್ ಹಾಲು ನನಗೆ ಬೆಳಗಿನ ಪ್ರೀತಿಯ ಆಹಾರ. ಮಧ್ಯಾಹ್ನ ಸ್ವಲ್ಪ ಅನ್ನ ಹಾಗೂ ತರಕಾರಿಯನ್ನು ಸೇವಿಸುತ್ತೇನೆ’ ಎಂದು ಸುದೀರ್ಘ ಜೀವನದ ಗುಟ್ಟನ್ನು ಹಂಚಿಕೊಂಡಿದ್ದಾರೆ.
-ಪ್ರಜಾವಾಣಿ

Write A Comment