ಅಂತರಾಷ್ಟ್ರೀಯ

ಕೇಳಿದ್ದೀರಾ ಚಾಕೊಲೇಟ್ ಫೋಬಿಯಾ!

Pinterest LinkedIn Tumblr

Chocolate-1

ಲಂಡನ್‌: ಚಾಕೊಲೇಟ್ ಅಂದ್ರೆ ಮುಗಿಬಿದ್ದು ತಿನ್ನೋವ್ರನ್ನ ನೋಡಿದ್ದೀರಿ, ಚಾಕೊಲೇಟ್ ಹೆಸರು ಕೇಳಿದ್ರೇನೆ ಮಾರುದೂರ ಓಡೋವ್ರನ್ನ ನೋಡಿದ್ದೀರಾ. ಬ್ರಿಟನ್ನಿನ ಮೆಯ್ಡಿನ್‌ಹೆಡ್ ಮೂಲದ ಈ ಟಿವಿ ಕಾರ‌್ಯಕ್ರಮಗಳ ನಿರ್ಮಾಪಕ ಆಂಡ್ರ್ಯೂ ಬುಲಕ್‌ಗೆ ಚಾಕ್ಲೇಟ್ ಅಂದ್ರೆ ಭಯಂಕರ ಹೆದರಿಕೆ. ತಾನು ತಿನ್ನೋದಿರಲಿ, ಚಾಕ್ಲೇಟ್ ತಿನ್ನೋವ್ರ ಹತ್ತಿರ ಬಂದ್ರೂ ಈತನಿಗೆ ಭಯವಾಗುತ್ತೆ.

”ಚಾಕ್ಲೇಟ್ ಮುಟ್ಟಿದರೆ ಮೈಕೈಗೆ ಗಲೀಜು ಮೆತ್ತಿಕೊಂಡಂತೆ ಅನ್ನಿಸುತ್ತೆ. ಪದೇಪದೆ ಕೈತೊಳೆದುಕೊಂಡರೂ ಅದು ನನ್ನ ಕೈಯಲ್ಲೇ ಇದೆ ಅನ್ನಿಸುತ್ತಿರುತ್ತದೆ. ಹಾಗೆಂದ ಮಾತ್ರಕ್ಕೆ ನನಗೆ ಸ್ವಚ್ಛತೆಯ ಗೀಳಿದೆ ಅಂದ್ಕೋಬೇಡಿ. ಬೇರಾವುದೇ ವಸ್ತು ನನ್ನ ಕೈಗೆ ಮೆತ್ತಿಕೊಂಡರೂ ನನಗೆ ಏನೂ ಅನ್ನಿಸುವುದಿಲ್ಲ. ಆದರೆ ಚಾಕ್ಲೇಟ್ ವಿಷಯಕ್ಕೆ ಬಂದಾಗ ಮಾತ್ರ ಹೀಗಾಗುತ್ತದೆ,” ಎಂದು ಸುದೀರ್ಘ ವಿವರಣೆ ನೀಡುತ್ತಾನೆ ಬುಲಕ್.

ತನ್ನ ತಾಯಿಗೂ ಇಂಥದ್ದೇ ಹೆದರಿಕೆ ಇತ್ತು ಎಂಬುದನ್ನು ನೆನಪಿಸಿಕೊಳ್ಳುವ ಬುಲಕ್, ಈ ಭೀತಿ ಹುಟ್ಟಲು ಕಾರಣಗಳಿಲ್ಲ ಎಂದೂ ಹೇಳುತ್ತಾನೆ.

ಈ ತರ್ಕಕ್ಕೆ ನಿಲುಕದ ಭೀತಿ ಕ್ಸೊಕೊಲೆಟೊಫೋಬಿಯಾ ಆತನನ್ನು ಯಾವುದೇ ಸಮಾರಂಭದಲ್ಲಿ ಭಾಗವಹಿಸದಂತೆ ಮಾಡಿದೆ. ಯಾರೋ ಚಾಕೊಲೇಟ್ ಬಾರ್ ತಿನ್ನುತ್ತಿದ್ದರೆ ಅವರಿಂದ ದೂರ ಸರಿಯುತ್ತಾನೆ ಈ ಮನುಷ್ಯ. ಆತನ ಕಾರು ಅಥವಾ ಮನೆಯೊಳಕ್ಕೆ ಚಾಕ್ಲೇಟ್ ತರುವುದು ನಿಷಿದ್ಧ. ಕ್ರಿಸ್ಮಸ್ ಈಸ್ಟರ್‌ಗಳು ಬಂದುಬಿಟ್ಟರಂತೂ ಈತನ ಫಜೀತಿ ಹೇಳತೀರದು. ಈ ಅವಧಿಯಲ್ಲಿ ಸೂಪರ್ ಮಾರ್ಕೆಟ್‌ಗಳಲ್ಲಿ ಚಾಕ್ಲೇಟ್ ಮಾರಾಟದ ಭರಾಟೆ ಹೆಚ್ಚಿರುವುದರಿಂದ ಅತ್ತ ಕಾಲಿಡೋದಿಲ್ಲ ಅಂತಾನೆ. ಇದೊಂದು ಅತಾರ್ಕಿಕ ಭೀತಿ ಅನ್ನೋದು ಗೊತ್ತು ಆದ್ರೂ ಏನೂ ಮಾಡಲಾರೆ ಅಂತ ಕೈಚೆಲ್ಲುತ್ತಾನೆ ಆಂಡ್ರೂ ಬುಲಕ್.

Write A Comment