ಬೆಂಗಳೂರು: ಜನರಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿದ್ದ ಆಮ್ ಆದ್ಮಿ ಪಕ್ಷ (ಆಪ್)ದ ರಾಷ್ಟ್ರೀಯ ಘಟಕದಲ್ಲಿ ತಲೆದೋರಿರುವ ಭಿನ್ನಮತದ ಪರಿಣಾಮ ಕರ್ನಾಟಕದ ಘಟಕಕ್ಕೂ ತಟ್ಟಿದ್ದು, ನಿರೀಕ್ಷಿತ ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡಲು ತೊಡಕು ಉಂಟಾಗುತ್ತಿದೆ.
ಪಕ್ಷದ ರಾಷ್ಟ್ರೀಯ ಘಟಕದಿಂದ ಉಚ್ಚಾಟಿತರಾಗಿರುವ ಹಿರಿಯ ಮುಖಂಡ ಯೋಗೇಂದ್ರ ಯಾದವ್ ಅವರು ಸ್ವರಾಜ್ ಅಭಿಯಾನ ಆರಂಭಿಸಿದ ನಂತರ ಆಮ್ ಆದ್ಮಿ ಪಕ್ಷದ ರಾಜ್ಯ ಘಟಕದಲ್ಲಿನ ಅನೇಕ ಕಾರ್ಯಕರ್ತರು ಅತ್ತ ವಾಲುತ್ತಿದ್ದಾರೆ. ಹಾಗೆ ವಾಲುತ್ತಿರುವುದಕ್ಕೆ ರಾಜ್ಯ ಘಟಕದ ಮುಖಂಡರು ಕನ್ನಡಕ್ಕೆ ಆದ್ಯತೆ ನೀಡದೆ ಇಂಗ್ಲಿಷ್‌ಗೆ ಹೆಚ್ಚು ಮಣೆ ಹಾಕುತ್ತಿರುವುದೂ ಒಂದು ಪ್ರಮುಖ ಅಂಶವಾಗಿ ಪರಿಣಮಿಸಿದೆ ಎಂದು ತಿಳಿದು ಬಂದಿದೆ.
ಸ್ಥಳೀಯ ಅಧಿಕೃತ ಭಾಷೆಯಾಗಿರುವ ಕನ್ನಡಕ್ಕಿಂತ ಇಂಗ್ಲಿಷ್‌ಗೆ ಹೆಚ್ಚು ಮನ್ನಣೆ ನೀಡುವುದರಿಂದ ಸ್ಥಳೀಯ ಮತದಾರರ ಒಲವು ಗಳಿಸಲು ಸಾಧ್ಯವಾಗುವುದಿಲ್ಲ ಎಂಬ ಮಾತನ್ನು ಕಾರ್ಯಕರ್ತರು ಹಲವು ಬಾರಿ ಹೇಳಿದರೂ ರಾಜ್ಯ ಮುಖಂಡರು ಮಾತ್ರ ಅದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಬದಲಾಗಿ, ಕನ್ನಡ ಬಳಕೆಗೆ ಒತ್ತಾಯಿಸಿದವರನ್ನೇ ದಬಾಯಿಸಿದ ಪ್ರಸಂಗಗಳು ನಡೆದಿವೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಹಲವು ಕಾರ್ಯಕರ್ತರು ಮಾಹಿತಿ ನೀಡಿದ್ದಾರೆ.
ಕನ್ನಡವನ್ನು ನಿರ್ಲಕ್ಷಿಸಲಾಗುತ್ತಿದೆ ಎಂಬುದಕ್ಕೆ ಪೂರಕವಾಗಿ ಎನ್ನುವಂತೆ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರೂ ಆಗಿರುವ ರಾಜ್ಯ ಘಟಕದ ಉಸ್ತುವಾರಿ ಪೃಥ್ವಿ ರೆಡ್ಡಿ ಅವರು ಎರಡು ದಿನಗಳ ಹಿಂದೆ ಪಕ್ಷದ ಕಾರ್ಯಕರ್ತರನ್ನು, ಪ್ರತಿನಿಧಿಗಳನ್ನು ಉದ್ದೇಶಿಸಿ ಫೇಸ್‌ಬುಕ್ ಮೂಲಕ ಕೇವಲ ಇಂಗ್ಲಿಷ್‌ನಲ್ಲಿ ಮಾತನಾಡಿರುವ ದೃಶ್ಯ ಸಂದೇಶವೊಂದನ್ನು ರವಾನಿಸಿದ್ದಾರೆ. ಮೂರು ನಿಮಿಷಗಳ ಈ ಸಂದೇಶದಲ್ಲಿ ಮುಂಬರುವ ಬಿಬಿಎಂಪಿ ಚುನಾವಣೆಗೆ ಪಕ್ಷವನ್ನು ಅಣಿಗೊಳಿಸಲು ಸಿದ್ಧರಾಗುವಂತೆ ರೆಡ್ಡಿ ಕರೆ ನೀಡಿದ್ದಾರೆ.
ಆದರೆ, ಅವರ ಫೇಸ್‌ಬುಕ್‌ನ ದೃಶ್ಯ ಸಂದೇಶಕ್ಕೆ ಹಲವು ಕಾರ್ಯಕರ್ತರು, ಪ್ರತಿನಿಧಿಗಳು ಹಾಗೂ ಪಕ್ಷದ ಅಭಿಮಾನಿಗಳು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಅದರಲ್ಲಿ ಹಲವರು ಕನ್ನಡ ಬಳಸುವ ಅಗತ್ಯತೆ ಹೇಳುವ ಜತೆಗೆ ಕೇವಲ ಇಂಗ್ಲಿಷ್‌ನಲ್ಲಿ ಸಂದೇಶ ರವಾನಿಸಿರುವ ಬಗ್ಗೆ ಆಕ್ಷೇಪವನ್ನೂ ಹೊರಹಾಕಿದ್ದಾರೆ. ಇಂಗ್ಲಿಷ್ ಹಾಗೂ ಕನ್ನಡದಲ್ಲೂ ಸಂದೇಶ ನೀಡಬಹುದಿತ್ತಲ್ಲ ಎಂಬ ಪ್ರಶ್ನೆಯನ್ನೂ ಮುಂದಿಟ್ಟಿದ್ದಾರೆ. ಪಕ್ಷದ ಮುಖಂಡರ ತಂಡದಲ್ಲಿ ಕನ್ನಡ ಮಾತನಾಡುವವರ ಸಂಖ್ಯಾಬಲ ಕಡಮೆ ಇರುವುದರ ಬಗ್ಗೆಯೂ ಗಮನ ಸೆಳೆದಿರುವುದು ಕಂಡು ಬಂದಿದೆ. ಇದುವರೆಗೆ ಈ ಎಲ್ಲ ಪ್ರತಿಕ್ರಿಯೆಗಳಿಗೆ ಪೃಥ್ವಿ ರೆಡ್ಡಿ ಮಾತ್ರ ಉತ್ತರ ನೀಡಿಲ್ಲ.