ಅಂತರಾಷ್ಟ್ರೀಯ

ನೇಪಾಳ ಅವಶೇಷಗಳೆಡೆಯಲ್ಲಿ 7 ದಿನ ಕಳೆದ 105ರ ತಾತ

Pinterest LinkedIn Tumblr

107

ಕಾಠ್ಮಂಡು: ನೇಪಾಳವನ್ನೇ ಚಿಂದಿ ಚಿಂದಿ ಮಾಡಿದ ಭೂಕಂಪ ಸಂಭವಿಸಿ 7 ದಿನಗಳಾಗಿದೆ. ಪರಿಹಾರ ಕಾರ್ಯಾಚರಣೆ ಸಮರೋಪಾದಿಯಲ್ಲಿ ನಡೆಯುತ್ತಿದೆ. 7 ದಿನಗಳ ನಂತರ ಅಲ್ಲಿನ ಘಟನಾವಳಿಗಳ ನೋಟ ಇಲ್ಲಿದೆ.

105ರ ಅಜ್ಜ ಬಚಾವ್!
ಏ.25ರ ಭೂಕಂಪಕ್ಕೆ ಸಿಲುಕಿ ಕುಸಿದು ಬಿದ್ದಿದ್ದ ಮನೆಯೊಂದರ ಅವಶೇಷಗಳ ಅಡಿಯಿಂದ 8 ದಿನಗಳ ಬಳಿಕ ಬರೋಬ್ಬರಿ 105 ವರ್ಷಗಳ ಹಣ್ಣಣ್ಣು ಮುದುಕರೊಬ್ಬರನ್ನು ಶನಿವಾರ ಜೀವಂತವಾಗಿ ರಕ್ಷಣೆ ಮಾಡಲಾಗಿದೆ. ಫಂಚು ಘಾಲೆ ಎಂಬ ಹೆಸರಿನ ಈ ವಯೋವೃದ್ಧರನ್ನು ನುವಾಕೋಟ್ ಜಿಲ್ಲೆಯ ಕಿಮ್‌ತಂಗ್ ಹಳ್ಳಿಯಲ್ಲಿ ನೇಪಾಳಿ ಪೊಲೀಸರು ರಕ್ಷಣೆ ಮಾಡಿದ್ದು, ಅಜ್ಜನ ಕಾಲಿಗೆ ಚೂರು ಗಾಯವಾಗಿರುವುದು ಬಿಟ್ಟರೆ ಜೀವಕ್ಕೆ ಆಪತ್ತು ಇಲ್ಲ, ಅವರ ಆರೋಗ್ಯ ಸ್ಥಿತಿ ಸಹಜವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಅಜ್ಜನನ್ನು ಹೆಲಿಕಾಪ್ಟರ್ ಮೂಲಕ ತ್ರಿಶೂಲಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಭಾರಿ ವಿಮಾನಗಳಿಗೆ ನಿರ್ಬಂಧ
ಪರಿಹಾರ ಸಾಮಗ್ರಿಗಳನ್ನು ಹೊತ್ತು ತರುವ ವಿದೇಶದ ಭಾರಿ ವಿಮಾನಗಳಿಗೆ ನೇಪಾಳದಲ್ಲಿ ನಿರ‌್ಬಂಧ ವಿಧಿಸಲಾಗಿದೆ. ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇ ಐದು ದಶಕಗಳಷ್ಟು ಹಳತಾಗಿದ್ದು, ಈಗಾಗಲೇ ಇದು ಕಿತ್ತು ಬರುವಂತಿದೆ. ರನ್‌ವೇ ಇನ್ನಷ್ಟು ಜಖಂ ಆಗದಿರಲಿ ಎಂಬ ಕಾರಣಕ್ಕೆ ಭಾರಿ ವಿಮಾನಗಳಿಗೆ ನಿಷೇಧ ವಿಧಿಸಲಾಗಿದೆ. 196 ಟನ್‌ಗಿಂತ ಕಡಿಮೆ ತೂಕವಿರುವ ವಿಮಾನಗಳು ಮಾತ್ರ ಇಳಿಯಲು ಅವಕಾಶ ಕಲ್ಪಿಸಲಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ
”ನೇಪಾಳವನ್ನು ತನ್ನ ಕಡೆಗೆ ಒಲಿಸಿಕೊಳ್ಳಲು ಭಾರತದ ಈಗಿನ ಸರಕಾರ ಯತ್ನಿಸುತ್ತಿರುವಂತಿದೆ. ನೇಪಾಳದಲ್ಲಿ ಚೀನಾದ ಪ್ರಾಬಲ್ಯವನ್ನು ತಪ್ಪಿಸಿ, ತಾನು ಆ ಜಾಗದಲ್ಲಿ ನಿಲ್ಲಲು ಭಾರತ ಸರಕಾರ ಹವಣಿಸುತ್ತಿದೆ. ಹೀಗಾಗಿಯೇ ಚೀನಾಕ್ಕೆ ಪೈಪೋಟಿ ಒಡ್ಡುವ ರೀತಿಯಲ್ಲಿ ಭಾರತ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದು, ಮಾಧ್ಯಮಗಳ ಮೂಲಕ ತನ್ನ ದೊಡ್ಡತನವನ್ನು ಪ್ರಚಾರ ಮಾಡುತ್ತಿದೆ. ಮಾಧ್ಯಮಗಳೂ ಭಾರತದ ಸರಕಾರಕ್ಕೆ ಪ್ರಚಾರ ಕೊಡುತ್ತಿವೆ,” ಎಂದು ನೇಪಾಳಿಗರು ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಕಾರಿದ್ದಾರೆ.

ವಿಶ್ವಸಂಸ್ಥೆ ಕಳವಳ
ಪರಿಹಾರ ಕಾರ್ಯಾಚರಣೆ ಕೈಗೊಳ್ಳಲು ವಿದೇಶಿ ಸಿಬ್ಬಂದಿಗೆ ನೇಪಾಳ ನೂರೆಂಟು ನೆಪ ಮಾಡಿಕೊಂಡು ತೊಂದರೆ ಕೊಡುತ್ತಿದೆ ಎಂದು ವಿಶ್ವಸಂಸ್ಥೆ ದೂರಿದೆ. ”ಸಂತ್ರಸ್ತರ ಪರಿಹಾರ ಸಾಮಾಗ್ರಿಗಳಿಗೆ ಕ್ಲಿಯರೆನ್ಸ್ ನೀಡಲು ನೇಪಾಳದ ಅಧಿಕಾರಿಗಳು ಅಡ್ಡಿ ಇಲ್ಲವೇ ತಡ ಮಾಡುತ್ತಿದ್ದಾರೆ. ಇದರಿಂದ ಸಂತ್ರಸ್ತರಿಗೆ ಪರಿಹಾರ ಸಾಮಾಗ್ರಿ ಸೂಕ್ತ ಸಮಯದಲ್ಲಿ ದೊರೆಯುತ್ತಿಲ್ಲ. ಸಮಸ್ಯೆ ಮತ್ತಷ್ಟು ಬಿಗಡಾಯಿಸುತ್ತಿದೆ,” ಎಂದು ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳ ಮುಖ್ಯಸ್ಥೆ ವೆಲೆರಿ ಅಮೋಸ್ ಆತಂಕ ವ್ಯಕ್ತಪಡಿಸಿದ್ದಾರೆ.

ನಿಮ್ಮ ಕಾಳಜಿ ನಿಮ್ಮದೆ
ಪರಿಹಾರ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳಲು ದೇಶ-ವಿದೇಶಗಳಿಂದ ದೊಡ್ಡ ಸಂಖ್ಯೆಯ ಸ್ವಯಂ ಸೇವಕರು ನೇಪಾಳಕ್ಕೆ ಆಗಮಿಸುತ್ತಿದ್ದಾರೆ. ಇವರೆಲ್ಲರ ಕಾಳಜಿ ಮಾಡಲು ನೇಪಾಳ ನಿರಾಕರಿಸಿದ್ದು, ಅವರ ಊಟ, ವಸತಿ, ಸಾರಿಗೆ, ಸುರಕ್ಷತೆ ಮುಂತಾದ ದೇಖರೇಖಿಯನ್ನು ಅವರೇ ನೋಡಿಕೊಳ್ಳಬೇಕು ಎಂದು ಸ್ಪಷ್ಟಪಡಿಸಿದೆ.
-ವಿಜಯ ಕನಾಱಟಕ

Write A Comment