ಅಂತರಾಷ್ಟ್ರೀಯ

ನೇಪಾಳದಲ್ಲಿ ಮನೆ-ಮಠ ಕಳೆದುಕೊಂಡು ನಲುಗಿದ ಭಾರತೀಯರು

Pinterest LinkedIn Tumblr

Indian-In-Nepal-Earthquake

ಕಠ್ಮಂಡು, ಮೇ 3- ದಿನೇ ದಿನೇ ಹೆಚ್ಚುತ್ತಿರುವ ಸಾವಿನ ಸಂಖ್ಯೆ, ಗರ್ಭಿಣಿಯರ ಪರದಾಟ, ಅನ್ನ-ನೀರಿಗಾಗಿ ಮುಂದುವರಿದ ಹಾಹಾಕಾರ, ಮುಗಿಲು ಮುಟ್ಟಿದ ಸಂತ್ರಸ್ತರ ಆಕ್ರಂದನ ಎಂಥವರ ಕರುಳು ಹಿಂಡುವಂತಿದೆ. ಪುಟ್ಟ ರಾಷ್ಟ್ರ ನೇಪಾಳ ಭೂಕಂಪದ ಹೊಡೆತಕ್ಕೆ ನಲುಗಿ ಹೋಗಿದೆ. ಚೇತರಿಸಿಕೊಳ್ಳಲಾಗದಷ್ಟು ಪ್ರಮಾಣದ ಹಾನಿ ಸಂಭವಿಸಿದ್ದು, ನೇಪಾಳ ಸರ್ಕಾರ ಹಾಗೂ ವೀರಯೋಧರಿಗೆ ಕಾರ್ಯಾಚರಣೆಯೇ ದೊಡ್ಡ ಸವಾಲಾಗಿದೆ. ಸುಮಾರು 50 ಸಾವಿರಕ್ಕೂ ಹೆಚ್ಚು ಗರ್ಭಿಣಿಯರು ಭೂಕಂಪಕಕ್ಕೆ ನಲುಗಿ ಪರದಾಡುವ ಸ್ಥಿತಿ ಉಂಟಾಗಿ ಇವರುಗಳ ಹೆರಿಗೆಗಾಗಿ ಆಸ್ಪತ್ರೆಯ

ಮುಂಭಾಗದಲ್ಲಿ ತಾತ್ಕಾಲಿಕ ಟೆಂಟ್‌ಗಳನ್ನು ನಿರ್ಮಿಸಲಾಗಿದ್ದು, ಗರ್ಭಿಣಿಯರ ನರಳಾಟ ಮನಕಲಕುವಂತಿದೆ. ಆಸ್ಪತ್ರೆಗಳೆಲ್ಲವೂ ತುಂಬಿ ತುಳುಕುತ್ತಿದ್ದು, ಸಂತ್ರಸ್ತರ ರೋದನ ಮುಗಿಲು ಮುಟ್ಟಿದೆ. ಕೈ-ಕಾಲು ಕಳೆದುಕೊಂಡು ಅವಶೇಷಗಳಡಿ ಸಿಲುಕಿ ಗಾಯಗೊಂಡು ಚಿಕಿತ್ಸೆಗಾಗಿ ಬರುವವರ ಸಂಖ್ಯೆ ಹೆಚ್ಚುತ್ತಲೇ ಹೋಗಿದೆ.

ಗರ್ಭಿಣಿಯರಿಗೆ ಮಲಗಲು ಜಾಗವೇ ಇಲ್ಲದಂತಾಗಿದೆ. ಆಸ್ಪತ್ರೆಯಲ್ಲೂ ಸಹ ಹೆರಿಗೆಗೆ ಸ್ಥಳಾವಕಾಶ ಇಲ್ಲದಿದ್ದರಿಂದ ಸರ್ಕಾರಕ್ಕೆ ಇದೊಂದುದ ಒಡ್ಡ ತಲೆನೋವಾಗಿದೆ. ವೈದ್ಯರ ತಂಡವೇ ಸಮರೋಪಾದಿಯಲ್ಲಿ ಅಹೋರಾತ್ರಿ ಕಾರ್ಯನಿರ್ವಹಿಸುತ್ತಿದೆ. ದೇಶ-ವಿದೇಶಗಳಿಂದ ವೈದ್ಯರ ತಂಡ ಆಗಮಿಸಿವೆ. ಇಷ್ಟಾದರೂ ಎಲ್ಲ ಸಂತ್ರಸ್ತರ ಚಿಕಿತ್ಸೆ ನೋಡಿಕೊಳ್ಳುವುದೇ ಅಸಾಧ್ಯದ ಮಾತಾಗಿದೆ. ಭೂಕಂಪದಿಂದ ನಲುಗಿದ ಸಾವಿರಾರು ಜನರು ಗಡಿ ಪ್ರದೇಶವಾದ ಉತ್ತರ ಪ್ರದೇಶಕ್ಕೆ ಆಗಮಿಸಿದ್ದು, ಅಲ್ಲಿ ಅವರಿಗೆ ತಾತ್ಕಾಲಿಕ ಟೆಂಟ್ ನಿರ್ಮಿಸಿಕೊಡಲಾಗಿದ್ದು, ಗಂಜಿಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಕೆಲಸಕ್ಕೆಂದು ಅರಸಿ ಹೋದ ಭಾರತೀಯರ ಸ್ಥಿತಿಯಂತೂ ಹೇಳತೀರದು. ಅನ್ನ-ಆಹಾರವಿಲ್ಲದೆ ಕಂಗಾಲಾಗಿದ್ದಾರೆ. ಮನೆ-ಮಠ ಎಲ್ಲವನ್ನೂ ಕಳೆದುಕೊಂಡಿದ್ದಾರೆ. ಹೇಗಾದರೂ ಮಾಡಿ ತಮ್ಮನ್ನು  ತಾಯ್ನಾಡಿಗೆ ಕರೆತರುವ ವ್ಯವಸ್ಥೆ ಮಾಡಿರಿ ಎಂದು ಭಾರತ ಸರ್ಕಾರದ ಮೊರೆ ಹೋಗಿದ್ದಾರೆ. ಭೂಕಂಪದಿಂದ ನಲುಗಿದ ನೇಪಾಳ ಹಾಳು ಕೊಂಪೆಯಾಗಿದ್ದು, ವಿದ್ಯುತ್, ನೀರಿನ ಸಮಸ್ಯೆ ಹೆಚ್ಚಾಗಿದ್ದು, ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ದೇಶದ ಜನತೆಯಲ್ಲಿ ಇನ್ನೂ ಭೂಕಂಪದ ಭಯ ಆವರಿಸಿದೆ.
-ಈ ಸಂಜೆ

Write A Comment