ಕಾಠ್ಮಂಡು: ಭೂಕಂಪ ಪೀಡಿತ ನೇಪಾಳದಲ್ಲಿ ಸಾವಿನ ಸಂಖ್ಯೆ 10,000ಕ್ಕೆ ಏರುವ ಆತಂಕ ವ್ಯಕ್ತವಾಗಿದೆ.
‘ಶನಿವಾರದ ಭೂಕಂಪದಿಂದ ಈಗಾಗಲೇ 4,400 ಮಂದಿ ಮೃತಪಟ್ಟಿದ್ದು, ಗಾಯಗೊಂಡಿರುವ ಸಾವಿರಾರು ಜನರ ಸ್ಥಿತಿ ಬಹಳ ಗಂಭೀರವಾಗಿದೆ. ದೇಶಾದ್ಯಂತ ಹಲವು ಸಾವಿರ ಮಂದಿ ಕಣ್ಮರೆ ಆಗಿದ್ದಾರೆ. ಈ ಎಲ್ಲ ಅಂಶಗಳನ್ನು ಗಮನಿಸಿದರೆ ಸಾವಿನ ಸಂಖ್ಯೆ 10 ಸಾವಿರ ದಾಟುವ ಸಾಧ್ಯತೆ ಇದೆ,’ ಎಂದು ಭಾರತ, ಚೀನಾ ಹಾಗೂ ಅಮೆರಿಕದ ರಾಯಭಾರಿಗಳಿಗೆ ನೇಪಾಳದ ಪ್ರಧಾನಿ ಸುಶೀಲ್ ಕೊಯಿರಾಲಾ ತಿಳಿಸಿದ್ದಾರೆ.
‘ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆ ಪರಿಣಾಮಕಾರಿಯಾಗಿಲ್ಲ. ಅವಶೇಷಗಳಡಿ ನೂರಾರು ಮಂದಿ ಸಿಲುಕಿದ್ದು, ಭೂಕಂಪದ ಹೊಡತಕ್ಕೆ ನಲುಗಿರುವ ದುರ್ಗಮ ಪ್ರದೇಶಗಳನ್ನು ತಲುಪಲು ಇನ್ನೂ ಸಾಧ್ಯವಾಗಿಲ್ಲ,’ ಎಂದು ಅವರು ಹೇಳಿದ್ದಾರೆ. ಜತೆಗೆ, ಭೂಕಂಪ ಸಂತ್ರಸ್ತರಿಗೆ ತುರ್ತು ನೆರವು ಹಾಗೂ ದೇಶದ ಪುನರ್ ನಿರ್ಮಾಣಕ್ಕೆ ನೆರವು ನೀಡುವಂತೆ ಕೊಯಿರಾಲಾ ಅಂತಾರಾಷ್ಟ್ರೀಯ ಸಮುದಾಯಕ್ಕೆ ಮನವಿ ಮಾಡಿದ್ದಾರೆ.
ಕುಂಭದ್ರೋಣ ಮಳೆ :
ಕಾಠ್ಮಂಡುವಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ, ಭೂಕಂಪ ಸಂತ್ರಸ್ತರನ್ನು ಮತ್ತಷ್ಟು ಆತಂಕಕ್ಕೆ ದೂಡಿದೆ. ಭಾರಿ ಮಳೆಯಿಂದ ರಕ್ಷಣಾ ಕಾರ್ಯವೂ ಸ್ಥಗಿತಗೊಂಡಿದೆ. ಕಟ್ಟಡದ ಅವಶೇಷಗಳು, ಕಸ ತುಂಬಿದ್ದ ರಸ್ತೆಗಳಲ್ಲಿ ಈಗ ಕೆಸರು ತುಂಬಿದೆ. ಟೆಂಟ್‌ಗಳಲ್ಲಿ ವಾಸವಿರುವ ಜನರ ಸ್ಥಿತಿ ಶೋಚನೀಯವಾಗಿದ್ದು, ದೊಡ್ಡ ಪ್ಲ್ಯಾಸ್ಟಿಕ್ ಶೀಟ್ ಹಾಗೂ ಟಾರ್ಪಲಿನ್‌ಗಳಿಗೆ ಬೇಡಿಕೆ ಹೆಚ್ಚಿದೆ.
ಪಶ್ಚಾತ್ ಕಂಪನದ ಎಚ್ಚರಿಕೆ:
ಪ್ರಬಲ ಭೂಕಂಪ ಸಂಭವಿಸಿ 72 ತಾಸು ಕಳೆದ ನಂತರ ಪಶ್ಚಾತ್ ಕಂಪನಗಳ ತೀವ್ರತೆ ಕಡಿಮೆ ಆಗಿದೆ ಎಂದು ನೇಪಾಳ ರಾಷ್ಟ್ರೀಯ ಭೂಕಂಪ ಮಾಹಿತಿ ಕೇಂದ್ರ ತಿಳಿಸಿದೆ. ಮಂಗಳವಾರ ಬೆಳಗ್ಗೆಯೂ 4.5 ತೀವ್ರತೆಯ ಲಘು ಭೂಕಂಪ ಸಂಭವಿಸಿದ್ದು, ಒಂದು ತಿಂಗಳ ಕಾಲ ಇಂಥ ಪಶ್ಚಾತ್ ಕಂಪನಗಳು ಸಂಭವಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
-ಕೃಪೆ: ವಿಜಯ ಕನಾಱಟಕ