ರಾಷ್ಟ್ರೀಯ

ಟ್ರಾಯ್‌ ವೆಬ್‌ಸೈಟ್‌ ನಲ್ಲಿ ಪ್ರೇಮ ಪತ್ರ

Pinterest LinkedIn Tumblr

love

ಹೊಸದಿಲ್ಲಿ: ಸುಮಾರು 10 ಲಕ್ಷ ಖಾಸಗಿ ಇಮೇಲ್‌ ವಿಳಾಸಗಳನ್ನು ಬಹಿರಂಗಪಡಿಸಿ ಜನರ ಆಕ್ರೋಶಕ್ಕೆಗುರಿಯಾಗಿರುವ ಟ್ರಾಯ್‌, ತನ್ನ ವೆಬ್‌ಸೈಟ್‌ನಲ್ಲಿ ಪ್ರೇಮ ಪತ್ರ ಪ್ರಕಟಿಸಿ ಈಗ ಮತ್ತೊಂದು ಅವಾಂತರ ಸೃಷ್ಟಿಸಿದೆ.

ನೆಟ್‌ ನ್ಯೂಟ್ರಾಲಿಟಿಗೆ ಆಗ್ರಹಿಸಿದ್ದ 10 ಲಕ್ಷ ಮಂದಿಯ ಇಮೇಲ್‌ ವಿಳಾಸ ಹಾಗೂ ಪತ್ರವನ್ನು ಬಹಿರಂಗಪಡಿಸಿದ್ದ ಟ್ರಾಯ್‌, ತಪ್ಪಾಗಿ ಪ್ರಾಧಿಕಾರದ ವಿಳಾಸಕ್ಕೆ ತಲುಪಿದ್ದ ಬಳಕೆದಾರರ ಪ್ರೇಮಪತ್ರವನ್ನೂ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಹತ್ತು ಲಕ್ಷ ಇಮೇಲ್‌ಗಳ ಪೈಕಿ ವಿಷಯಕ್ಕೆ ಸಂಬಂಧಿಸದ ಪತ್ರವನ್ನು ಪ್ರತ್ಯೇಕಿಸುವುದು ಸುಲಭದ ಕೆಲಸವಲ್ಲವಾದರೂ, ಟ್ರಾಯ್‌ ತನ್ನ ಗೌಪ್ಯ ನೀತಿಯನ್ನೇ ಗಾಳಿಗೆ ತೂರಿರುವುದು ಇದರಿಂದ ಸ್ಪಷ್ಟವಾಗುತ್ತದೆ.

ಗೌಪ್ಯ ನೀತಿ: ಟ್ರಾಯ್‌ ವೆಬ್‌ಸೈಟ್‌ ತನ್ನಷ್ಟಕ್ಕೆ ಯಾವುದೇ ವ್ಯಕ್ತಿಯ ಹೆಸರು, ದೂರವಾಣಿ ಸಂಖ್ಯೆ ಅಥವಾ ಇಮೇಲ್‌ ವಿಳಾಸ ಮುಂತಾದ ಖಾಸಗಿ ಮಾಹಿತಿಯನ್ನು ಸಂಗ್ರಹಿಸುವುದಿಲ್ಲ. ಹಾಗಾಗಿ ಯಾವುದೇ ನಿರ್ದಿಷ್ಟ ವ್ಯಕ್ತಿಯ ಗುರುತು ಪತ್ತೆ ಸಾಧ್ಯವಾಗದು. ಒಂದು ವೇಳೆ ಖಾಸಗಿ ಮಾಹಿತಿ ಕೋರಿದರೆ, ಅದಕ್ಕೆ ಸಷ್ಟ ಕಾರಣ ನೀಡುವ ಜತೆಗೆ ಮಾಹಿತಿ ಸೋರಿಕೆ ಆಗದಂತೆ ಭದ್ರತೆ ಬಗ್ಗೆ ನಿಗಾವಹಿಸಲಾಗುವುದು ಎಂದು ಪ್ರಾಧಿಕಾರ ಹೇಳಿದೆ.

ದೂರು:

ನೆಟ್‌ ನ್ಯೂಟ್ರಾಲಿಟಿಗೆ ಆಗ್ರಹಿಸಿದ್ದ 10 ಲಕ್ಷ ಮಂದಿಯ ಇಮೇಲ್‌ ವಿಳಾಸ ಬಹಿರಂಗ ಪಡಿಸಿರುವ ಟ್ರಾಯ್‌ ನಿರ್ಧಾರ ಸಾರ್ವಜನಿಕ ಟೀಕೆಗೆ ಗುರಿಯಾಗಿದೆ. ಇಮೇಲ್‌ವಿಳಾಸ ಬಹಿರಂಗ ಪಡಿಸಿರುವುದರಿಂದ ನಾನಾ ಜಾಹೀರಾತು ಹಾಗೂ ಅನಪೇಕ್ಷಿತ ಸಂದೇಶ(ಸ್ಪ್ಯಾಮ್‌) ಗಳನ್ನು ಕಳುಹಿಸುವವರಿಗೆ ಒಮ್ಮೆಲೆ 10 ಲಕ್ಷ ಇಮೇಲ್‌ ವಿಳಾಸಗಳ ಲಭ್ಯವಾಗುವ ಅಪಾಯವಿದೆ. ಇದರಿಂದ ಖಾಸಗಿತನಕ್ಕೆ ಅಡ್ಡಿಯುಂಟಾಗಿದೆ ಎಂದು ಹಲವರು ದೂರಿದ್ದಾರೆ.

ದೇಶದಲ್ಲಿ ನೆಟ್‌ ನ್ಯೂಟ್ರಾಲಿಟಿ ಬಗ್ಗೆ ಅಭಿಪ್ರಾಯ ತಿಳಿಸುವಂತೆ ಟ್ರಾಯ್‌ ಮಾ.27ರಂದು ವೆಬ್‌ಸೈಟ್‌ನಲ್ಲಿ ಪ್ರಕಟಣೆ ಹೊರಡಿಸಿತ್ತು. ಅಭಿಪ್ರಾಯ ತಿಳಿಸಲು ಏಪ್ರಿಲ್‌. 24ರ ಗಡುವು ವಿಧಿಸಿತ್ತು.
-ಕೃಪೆ: ವಿಜಯ ಕನಾಱಟಕ

Write A Comment