ಅಂತರಾಷ್ಟ್ರೀಯ

ಅಧಿಕಾರ ಉಳಿಸಿಕೊಳ್ಳಲು ಸೇನೆ ಬೆಂಬಲಕ್ಕೆ ಪ್ರಯತ್ನ: ರಾಜಪಕ್ಸೆ ವಿರುದ್ಧ ತನಿಖೆ

Pinterest LinkedIn Tumblr

pvec10jan15h rajapaksa

ಕೊಲಂಬೊ: ಸತತ ಮೂರನೇ ಬಾರಿ ಅಧಿಕಾರ ಹಿಡಿಯುವ ಪ್ರಯತ್ನ­ದಲ್ಲಿ ಮುಖಭಂಗ ಅನುಭವಿಸಿದ ಶ್ರೀಲಂಕಾದ ಮಾಜಿ ಅಧ್ಯಕ್ಷ ಮಹಿಂದ ರಾಜಪಕ್ಸೆ, ಕೊನೆಯ ಹಂತದಲ್ಲಿ ಅಧಿಕಾರ ಉಳಿಸಿಕೊಳ್ಳಲು ಸೇನೆಯ ನೆರವು ಪಡೆಯಲು ಪ್ರಯತ್ನಿಸಿದ್ದ ಆರೋಪಕ್ಕೆ ಸಿಲುಕಿದ್ದಾರೆ.

ಚುನಾವಣೆಯಲ್ಲಿ ಸೋಲು ನಿಶ್ಚಿತ­ವಾಗು­ತ್ತಿದ್ದಂತೆಯೇ ಅಧಿಕಾರವನ್ನು ತಮ್ಮ ಹಿಡಿತದಲ್ಲಿಯೇ ಇರಿಸಿಕೊಳ್ಳಲು ಮಾಜಿ ಅಧ್ಯಕ್ಷ ಮಹಿಂದ ರಾಜಪಕ್ಸೆ ಸೇನೆಯ ಸಹಕಾರ ಪಡೆಯಲು ಪ್ರಯತ್ನಿ­ಸಿ­ದ್ದರೇ ಎನ್ನುವುದರ ಕುರಿತು ತನಿಖೆ ನಡೆಸುವುದಾಗಿ ಶ್ರೀಲಂಕಾದ ಹೊಸ ಸರ್ಕಾರ ಭಾನುವಾರ ಹೇಳಿದೆ.

‘ರಾಜಪಕ್ಸೆ ಅವರು ನಡೆಸಿರುವ ಸಂಚು ಮತ್ತು ಅಕ್ರಮ ಮಾರ್ಗದ ಕುರಿತು ತನಿಖೆ ನಡೆಸುವುದು ಹೊಸ ಸಂಪುಟದ ಮೊದಲ ಕೆಲಸವಾಗಿದೆ’ ಎಂದು ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ಸರ್ಕಾರದ ವಕ್ತಾರ ಮಂಗಳ ಸಮರವೀರ ಸುದ್ದಿಗಾರರಿಗೆ ತಿಳಿಸಿದರು.
‘ಸೇನಾ ಮುಖ್ಯಸ್ಥರು ಮತ್ತು ಪೊಲೀಸ್‌ ಮಹಾನಿರ್ದೇಶಕರು ಸಹ­ಕಾರ ನೀಡಲು ನಿರಾಕರಿಸಿದ ಬಳಿಕವಷ್ಟೇ ರಾಜಪಕ್ಸೆ ಅಧಿಕಾರದಿಂದ ಕೆಳಗಿಳಿದರು’ ಎಂದು ಅವರು ಆರೋಪಿಸಿದರು.

‘ಮತ ಎಣಿಕೆ ನಡೆಯುವ ರಾತ್ರಿ ಏನು ನಡೆಯಿ­ತೆಂದು ನಾವು ನಮ್ಮ ಜನರಿಗೆ ತಿಳಿಸಲೇಬೇಕಿದೆ. ಅವರು ಜನಾದೇಶಕ್ಕೆ ತಲೆಬಾಗಿ ಗೌರವಯುತವಾಗಿ ಅಧಿಕಾರ ತ್ಯಜಿಸಿದಂತೆ ಮತ್ತು ಶಾಂತಿಯುತ ಬದ­ಲಾವಣೆಗೆ ಅವಕಾಶ ನೀಡಿದಂತೆ ಬಿಂಬಿಸಿ­ಕೊಂಡರು. ಜನರೂ ಹಾಗೆಯೇ ಭಾವಿಸಿ­ದರು. ಕೆಲವು ಜಾಗತಿಕ ನಾಯ­ಕರೂ ರಾಜಪಕ್ಸೆ ಅವರಿಗೆ ಶಾಂತಯುತ ಬದ­ಲಾವಣೆಗೆ ಕೋರಿಕೊಂಡಿದ್ದರು. ಯಾರು ಅವ-­ರೊಂದಿಗೆ ಮಾತ­ನಾಡಿ­ದ್ದಾರೆ ಎಂದು ನಮಗೆ ತಿಳಿ­ದಿಲ್ಲ. ಆದರೆ ಕೆಲವು ರಾಷ್ಟ್ರ­ಗಳು ಮಾತನಾಡಿರು­ವುದು ತಿಳಿದಿದೆ’ ಎಂದು ತಿಳಿಸಿದರು.

ಇದಕ್ಕೂ ಮುನ್ನ ನೂತನ ಅಧ್ಯಕ್ಷರ ಮುಖ್ಯ ವಕ್ತಾರ ರಜಿತಾ ಸೇನರತ್ನೆ ಅವರು, ಚುನಾವಣೆಯಲ್ಲಿ ಸೋಲುತ್ತಿ­ದ್ದಂತೆಯೇ ಸೇನಾ ಪಡೆಗಳನ್ನು ನಿಯೋಜಿ­ಸುವಂತೆ ಸೇನಾ ಮುಖ್ಯಸ್ಥ ಲೆಫ್ಟಿನೆಂಟ್‌ ಜನರಲ್‌ ದಯಾ ರತ್ನಾಯಕೆ ಅವರ ಮೇಲೆ ರಾಜಪಕ್ಸೆ ಒತ್ತಡ ಹೇರಿದ್ದರು ಎಂದರು.

‘ಸೇನಾ ಮುಖ್ಯಸ್ಥರ ಮೇಲೆ ಒತ್ತಡ­ವಿದ್ದರೂ ಅವರು ಸೇನೆ ನಿಯೋಜಿಸಲಿಲ್ಲ. ಅಕ್ರಮವಾದ ಯಾವ ಚಟುವಟಿಕೆ­ಯನ್ನೂ  ಮಾಡಲು ಅವರು ನಿರಾಕರಿಸಿ­ದ್ದರು’ ಎಂದು ಅವರು ಹೇಳಿದರು.

‘ಕೊನೆಯ ಅವಧಿವರೆಗೂ ರಾಜಪಕ್ಸೆ ಕಚೇರಿ­ಯಲ್ಲಿಯೇ ಉಳಿದುಕೊಳ್ಳಲು ಪ್ರಯತ್ನಿಸಿದ್ದರು. ಕೊನೆಗೆ ಯಾವ ಆಯ್ಕೆಯೂ ಇಲ್ಲ ಎಂಬ ಅನಿವಾ­ರ್ಯತೆಗೆ ಸಿಲುಕಿದಾಗ ಅವರು ಅಧಿಕಾರ ತ್ಯಜಿಸಲು ಮುಂದಾದರು’ ಎಂದು ಅವರು ಆಪಾದಿಸಿದರು.
ಪಕ್ಷಗಳಿಗೆ ಸಿರಿಸೇನ ಕರೆ: ತಮ್ಮ ರಾಷ್ಟ್ರೀಯ ಏಕತಾ ಸರ್ಕಾರ­ದೊಂದಿಗೆ ಕೈಜೋಡಿಸುವಂತೆ ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ಅವರು ದೇಶದ ಎಲ್ಲಾ ರಾಜಕೀಯ ಪಕ್ಷಗಳಿಗೆ ಆಹ್ವಾನ ನೀಡಿದ್ದಾರೆ.

ಕ್ಯಾಂಡಿಯಲ್ಲಿ ರಾಷ್ಟ್ರವನ್ನುದ್ದೇ­ಶಿಸಿ ಮಾಡಿದ ಮೊದಲ ಭಾಷಣದಲ್ಲಿ ಅವರು, ಎಲ್ಲಾ ರಾಜಕೀಯ ಪಕ್ಷಗಳೂ ಸರ್ಕಾರದೊಂದಿಗೆ ಕೈಜೋಡಿಸುವ ಮೂಲಕ ಅಲ್ಪಸಂಖ್ಯಾತರಿಗೆ ಸೂಕ್ತ ಮನ್ನಣೆ ಒದಗಿಸುವುದರ ಜತೆಗೆ, ಧಾರ್ಮಿಕ ಸೌಹಾರ್ದಕ್ಕಾಗಿ ಶ್ರಮಿಸುವು­ದಾಗಿ ಪ್ರತಿಜ್ಞೆ ಮಾಡಬೇಕೆಂದು ಕರೆ ನೀಡಿದರು.

ಚುನಾವಣಾ ಪ್ರಣಾಳಿಕೆಯಲ್ಲಿ ಮಾಡಿದ ವಾಗ್ದಾನದಂತೆ ಅಧ್ಯಕ್ಷರ ಅಧಿಕಾರವು ಸಂಸತ್‌ಗೆ ಅನುಗುಣವಾಗಿ ಇರಲಿದೆ. ಬಡತನ ನಿರ್ಮೂಲನೆ ತಮ್ಮ ಸರ್ಕಾರದ ಮೊದಲ ಆದ್ಯತೆ ಎಂದ ಅವರು, ಆರ್ಥಿಕತೆಯನ್ನು ಬಲಪಡಿಸಲು ‘ವಿದೇಶಿ ಸ್ನೇಹಿ ನೀತಿ’ ಅಳವಡಿಸಿಕೊಳ್ಳು­ವುದಾಗಿ ಭರವಸೆ ನೀಡಿದರು.

ಎಲ್‌ಟಿಟಿಇ ವಿರುದ್ಧದ ಕಾರ್ಯಾ­ಚ­ರ­ಣೆಯ ಬಳಿಕ ‘ರಾಜ’ ಎಂಬ ಹೊಗಳಿಕೆ ಪಡೆದುಕೊಂಡ ಮಹಿಂದ ರಾಜಪಕ್ಸೆ ವಿರುದ್ಧ ಪರೋಕ್ಷ ಟೀಕೆ ನಡೆಸಿದ ಅವರು, ‘ಈ ದೇಶಕ್ಕೆ ಬೇಕಿರುವುದು ಜನರ ನೈಜ ಸೇವಕನೇ ಹೊರತು ಅರಸನಲ್ಲ’ ಎಂದರು.

ಮೀನುಗಾರರ ಸಮಸ್ಯೆ ನಿವಾರಣೆಗೆ ಪಿಎಂಕೆ ಆಗ್ರಹ
ಚೆನ್ನೈ (ಪಿಟಿಐ): ಭಾರತ ಮತ್ತು ಶ್ರೀಲಂಕಾ ಮೀನುಗಾರರ ಸಮಸ್ಯೆಗಳನ್ನು ಬಗೆಹರಿಸಲು ಶ್ರೀಲಂಕಾದ ನೂತನ ಅಧ್ಯಕ್ಷ ಸಿರಿಸೇನ ಅವರ ಮೇಲೆ ಒತ್ತಡ ಹೇರುವಂತೆ ಎನ್‌ಡಿಎ ಮಿತ್ರಪಕ್ಷ ಪಿಎಂಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದೆ. ಶ್ರೀಲಂಕಾ ಪಡೆಗಳಿಂದ ಬಂಧನಕ್ಕೊಳ­ಗಾದ ತಮಿಳುನಾಡು ಮೀನುಗಾರರನ್ನು ಬಿಡುಗಡೆ ಮಾಡುವುದಾಗಿ ಅಲ್ಲಿನ ಸರ್ಕಾರ ಹೇಳಿದೆ. ಆದರೆ ಅವರಿಂದ ವಶ­ಪಡಿಸಿಕೊಂಡ ದೋಣಿಗಳನ್ನು ಕೂಡಲೇ ಬಿಡುಗಡೆ ಮಾಡಬೇಕು. ಮೀನುಗಾರರ ಸಮಸ್ಯೆ ಬಗ್ಗೆ ಫೆಬ್ರುವರಿಯಲ್ಲಿ ಭಾರತಕ್ಕೆ ಭೇಟಿ ನೀಡಲಿರುವ ಸಿರಿಸೇನ ಅವ­ರೊಂ­ದಿಗೆ ಚರ್ಚಿಸಬೇಕು ಎಂದು ಪಿಎಂಕೆ ಸಂಸ್ಥಾ­ಪಕ ಎಸ್‌. ರಾಮದಾಸ್‌ ಆಗ್ರಹಿಸಿದ್ದಾರೆ.

ಮಾನವ ಹಕ್ಕುಗಳ ರಕ್ಷಣೆಗೆ ಆಮ್ನೆಸ್ಟಿ ಮನವಿ
ನವದೆಹಲಿ (ಐಎಎನ್‌ಎಸ್‌): ಶ್ರೀಲಂಕಾದ ಹೊಸ ಸರ್ಕಾರ ಮಾನವ ಹಕ್ಕುಗಳ ರಕ್ಷಣೆಗೆ ಆದ್ಯತೆ ನೀಡಬೇಕು ಎಂದು ಮಾನವ ಹಕ್ಕುಗಳ ಸಂಘಟನೆ ಆಮ್ನೆಸ್ಟಿ ಇಂಟರ್‌ನ್ಯಾಷನಲ್‌ ಒತ್ತಾಯಿಸಿದೆ. ನ್ಯಾಯಾಂಗ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯದ ರಕ್ಷಣೆ, ಪತ್ರಕರ್ತರು ಮತ್ತು ಮಾನವ ಹಕ್ಕು ಪ್ರತಿಪಾದಕರ ಮೇಲಿನ ದಬ್ಬಾಳಿಕೆ ವಾತಾವರಣವನ್ನು ಅಂತ್ಯಗೊಳಿಸುವುದು, ಅಲ್ಪಸಂಖ್ಯಾತರ ಮೇಲಿನ ದಾಳಿಗಳನ್ನು ತಡೆಯುವುದು, ಮುಂತಾದವುಗಳಿಗೆ ಒತ್ತು ನೀಡಬೇಕು ಆಮ್ನೆಸ್ಟಿ  ಇಂಟರ್‌ನ್ಯಾಷನಲ್ ಶ್ರೀಲಂಕಾವನ್ನು ಆಗ್ರಹಿಸಿದೆ.

‘ಚುನಾವಣೆಯಲ್ಲಿ ಅಕ್ರಮ’
ಇತ್ತೀಚೆಗೆ ನಡೆದ ಶ್ರೀಲಂಕಾದ ಅಧ್ಯ­ಕ್ಷೀಯ ಚುನಾವಣೆಯು ಸಂಪೂರ್ಣ ಪ್ರಜಾಸತ್ತಾತ್ಮಕ­ವಾಗಿ ನಡೆದಿಲ್ಲ ಎಂದು ಕಾಮನ್‌ವೆಲ್ತ್‌ ವೀಕ್ಷಕರ ತಂಡ ಹೇಳಿದೆ. ಸ್ವತಂತ್ರ ಚುನಾವಣಾ ಆಯೋಗದ ಅನು­ಪಸ್ಥಿತಿಯಲ್ಲಿ ಪ್ರಜಾಸತ್ತಾತ್ಮಕ ಚುನಾವಣೆಯ ಪ್ರಮುಖ ಅಗತ್ಯಗಳನ್ನು ಒದಗಿಸಲಾಗಿಲ್ಲ. ಅಲ್ಲದೆ ಅಸಮಾನ ಸ್ಪರ್ಧೆ, ಭಾರಿ ಪ್ರಮಾಣ­ದಲ್ಲಿ ಸಂಪನ್ಮೂ­ಲ­ಗಳ ದುರ್ಬಳಕೆ ನಡೆದಿದೆ ಎಂದು ತಂಡ ತಿಳಿಸಿದೆ.

Write A Comment