ಭಟ್ಕಳ (ಉತ್ತರ ಕನ್ನಡ): ದುಬೈಗೆ ತೆರಳುತ್ತಿದ್ದ ರಿಯಾಜ್ ಅಹ್ಮದ್ ಎಂಬಾತನನ್ನು ಶಂಕಿತ ಉಗ್ರನೆಂದು ಮಂಗಳೂರು ವಿಮಾನ ನಿಲ್ದಾಣದಲ್ಲಿ ಶನಿವಾರ ತಡರಾತ್ರಿ ಬಂಧಿಸಿದ ಸಿಸಿಬಿ ಪೊಲೀಸರು, ಭಾನುವಾರ ಬೆಳಿಗ್ಗೆ ಇಲ್ಲಿಯ ಮುಗ್ದುಂ ಕಾಲೊನಿಯಲ್ಲಿರುವ ಆತನ ಮನೆಯಲ್ಲಿ ತಪಾಸಣೆ ನಡೆಸಿದರು.
ಈ ಬಾರಿ ಪೊಲೀಸರು ಸುತ್ತಮುತ್ತಲಿನ ಜನರ ಸಮ್ಮುಖದಲ್ಲೇ ಮನೆ ಪರಿಶೀಲಿಸಿ, ರಿಯಾಜ್‌ನನ್ನು ಬಂಧಿಸಿರುವ ವಿಷಯವನ್ನು ಕುಟುಂಬದವರಿಗೆ ತಿಳಿಸಿದರು. ತಪಾಸಣೆ ವೇಳೆ ಯಾವುದೇ ಅನುಮಾನಾಸ್ಪದ ವಸ್ತುಗಳು ಮನೆಯಲ್ಲಿ ದೊರಕಿಲ್ಲ ಎನ್ನಲಾಗಿದೆ.
ಬೆಳಿಗ್ಗೆಯೇ ಮುಗ್ದುಂ ಕಾಲೊನಿಗೆ ಪೊಲೀಸ್ ವಾಹನಗಳು ಬಂದಿದ್ದನ್ನು ಕಂಡು ಆಶ್ವರ್ಯಗೊಂಡ ನೂರಾರು ಜನರು ಮನೆಯ ಮುಂದೆ ಜಮಾಯಿಸಿದ್ದರು.
ತಂಝೀಮ್ ಆಗ್ರಹ: ನಾಲ್ಕು ದಿನಗಳ ಹಿಂದೆ ಸ್ಥಳೀಯ ಮನೆಯೊಂದರಲ್ಲಿ ತಪಾಸಣೆ ನಡೆಸಿ ಸ್ಫೋಟಕಗಳನ್ನು ವಶಪಡಿಸಿಕೊಂಡು, ಶಂಕಿತರನ್ನು ಬಂಧಿಸಿದ ಎನ್‌ಐಎ ಹಾಗೂ ಸಿಸಿಬಿ ಪೊಲೀಸರ ನಡವಳಿಕೆ ಕುರಿತು ಸಂಶಯ ವ್ಯಕ್ತಪಡಿಸಿರುವ ಇಲ್ಲಿಯ ತಂಝೀಮ್ ಸಂಸ್ಥೆ ಸ್ಪಷ್ಟನೆ ನೀಡುವಂತೆ ಆಗ್ರಹಿಸಿದೆ.
ತನಿಖಾ ತಂಡಗಳು ನಡೆಸಿದ ಕಾರ್ಯಾಚರಣೆ ನಾಟಕೀಯವಾಗಿದೆ. ಭಟ್ಕಳದ ಮನೆಯಲ್ಲಿ ಸ್ಫೋಟಕ ಸಾಮಗ್ರಿಗಳು ಇರುವ ಕುರಿತು ತನಿಖಾ ಸಂಸ್ಥೆ ಮತ್ತು ಸಿಸಿಬಿ ಪೊಲೀಸರಿಗೆ ಮೊದಲೇ ಗೊತ್ತಿದ್ದರೆ ಮನೆ ಒಳಗೆ ಪ್ರವೇಶಿಸುವ ಮುನ್ನ ಸ್ಥಳೀಯ ಮುಖಂಡರನ್ನು ವಿಶ್ವಾಸಕ್ಕೆ ಏಕೆ ತೆಗೆದುಕೊಳ್ಳಲಿಲ್ಲ ಎಂದು ತಂಝೀಮ್ ಪ್ರಶ್ನಿಸಿದೆ.