ಒಂದು ಕಡೆ ಅಂಬಾರಿ ಹೊತ್ತ ಆನೆ, ಇನ್ನೊಂದೆಡೆ ಹಂಪಿಯ ಕಲ್ಲಿನ ರಥ. ಒಳಗೆ ಕಾಲಿಟ್ಟೊಡನೆ ಎಲ್ಲೆಡೆ ಫಳಫಳ ಹೊಳೆಯುತ್ತಿದ್ದ ಚಿನ್ನ, ಬೆಳ್ಳಿ ಮತ್ತು ಮುತ್ತು ರತ್ನಗಳು. ಇದಕ್ಕೆ ಕಳೆಗಟ್ಟಿದಂತೆ ಅತ್ತಿಂದಿತ್ತ ಓಡಾಡುತ್ತಿದ್ದರು ಅಪ್ಸರೆಯರು (ರೂಪದರ್ಶಿಯರು).
ಇದನ್ನೆಲ್ಲ ಹೇಳುತ್ತಿದ್ದರೆ ವಿಜಯನಗರ ಸಾಮ್ರಾಜ್ಯದ ವೈಭವ ಕಣ್ಣಮುಂದೆ ಬರುವುದು ಸಹಜ. ಆದರೆ, ಇದು ಅದಲ್ಲ. ಅಂದಹಾಗೆ ಇಂತಹದ್ದೊಂದು ವೈಭವಕ್ಕೆ ಸಾಕ್ಷಿಯಾದದ್ದು ನಗರದ ಪ್ರತಿಷ್ಠಿತ ಮಹಾತ್ಮ ಗಾಂಧಿ ರಸ್ತೆಯಲ್ಲಿರುವ ಜೋಯಾಲುಕ್ಕಾಸ್ ಚಿನ್ನದ ಮಳಿಗೆ.
ಜೋಯಾಲುಕ್ಕಾಸ್‌ನಲ್ಲಿ ಜ. ೧೮ರ ವರೆಗೆ ‘ಅಂತರರಾಷ್ಟ್ರೀಯ ಆಭರಣ ಪ್ರದರ್ಶನ’ ಆಯೋಜಿಸಲಾಗಿದ್ದು, ಇತ್ತೀಚಿಗೆ ನಡೆದ ಪ್ರದರ್ಶನದ ಉದ್ಘಾಟನಾ ಸಮಾರಂಭದ ವೇಳೆ ಸಂಭ್ರಮ ಮನೆ ಮಾಡಿತ್ತು. ನಟಿ ಸಿಂಧು ಲೋಕನಾಥ್ ಮತ್ತು ನಟ ಅರುಣ್ ಸಾಗರ್ ಅವರು ಕಾರ್ಯಕ್ರಮ ಉದ್ಘಾಟಿಸಿ ಅದಕ್ಕೆ ಹೆಚ್ಚಿನ ಮೆರಗು ತಂದುಕೊಟ್ಟಿದ್ದರು. ನೀಲಿ ಬಣ್ಣದ ಗೌನ್‌ನಲ್ಲಿ ಕಂಗೊಳಿಸುತ್ತಿದ್ದ ಸಿಂಧು ಅವರ ಕಡೆಯೇ ಎಲ್ಲರ ದೃಷ್ಟಿ ಹರಿದಿತ್ತು.
‘ನಮ್ಮ ನಗರದಲ್ಲಿ ಅಂತರರಾಷ್ಟ್ರೀಯ ಮಟ್ಟದ ಆಭರಣ ಪ್ರದರ್ಶನ ನಡೆಯುತ್ತಿರುವುದು ಖುಷಿಯ ವಿಚಾರ. ಪ್ರತಿಯೊಬ್ಬರು ಈ ಪ್ರದರ್ಶನದಲ್ಲಿ ಭಾಗವಹಿಸಿ ಇದರ ಲಾಭ ಪಡೆದುಕೊಳ್ಳಬೇಕು’ ಎಂದು ಸಿಂಧು ಹೇಳಿದರು.
‘ಅತ್ಯಾಧುನಿಕ ಆಭರಣ ಟ್ರೆಂಡ್‌ಗಳನ್ನು ವೀಕ್ಷಿಸುವ, ಖರೀದಿಸುವ ಅವಕಾಶ ಕಲ್ಪಿಸಲಾಗಿದೆ. ಹಿಂದೆಂದೂ ಕಂಡರಿಯದ ಸಂಗ್ರಹಗಳು, ವಿನ್ಯಾಸಗಳು, ಆಭರಣ ಪ್ರಿಯರ ಮನಸ್ಸನ್ನು ಗೆಲ್ಲುವ, ೨೦೧೫ನೇ ವರ್ಷ ಆಭರಣ ಜಗತ್ತಿನಲ್ಲೇ ಕ್ರಾಂತಿ ಉಂಟು ಮಾಡುವ ವಿಶ್ವಾಸ ನಮ್ಮದು’ ಎಂದು ಜೋಯಾಲುಕ್ಕಾಸ್ ಸಮೂಹದ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಜಾಯ್ ಆಲುಕ್ಕಾಸ್ ಹೇಳಿದರು.
ದುಬೈ, ಸಿಂಗಪುರ, ಯೂರೋಪ್, ಟರ್ಕಿ, ಬಹರೇನ್ ಮತ್ತು ಮಲೇಷಿಯಾದ ಅತ್ಯಾಧುನಿಕ ಆಭರಣ ಸಂಗ್ರಹಗಳು, ಚಿನ್ನ, ವಜ್ರ, ಹರಳು, ಪೋಲ್ಕಿ, ರತ್ನ ಮತ್ತು ಪ್ಲಾಟಿನಂನಿಂದ ಕುಸುರಿ ಮಾಡಿದ ಆಕರ್ಷಕ ವಿನ್ಯಾಸದ ಆಭರಣಗಳನ್ನು ಪ್ರದರ್ಶನದಲ್ಲಿ ಇರಿಸಲಾಗಿದೆ.
ಅಂದಹಾಗೆ ಅಂಬಾರಿ ಹೊತ್ತ ಆನೆ ಮತ್ತು ಹಂಪಿಯ ಕಲ್ಲಿನ ರಥದ ಮಾದರಿಯನ್ನು ವಿನ್ಯಾಸ ಮಾಡಿರುವುದು ನಟ ಅರುಣ್ ಸಾಗರ್.