ಅಂತರಾಷ್ಟ್ರೀಯ

ಸಿಂಗಾಪುರ: ಭಾರತೀಯ ಮೂಲದ ಮಹಿಳೆಗೆ ಜೈಲು

Pinterest LinkedIn Tumblr

jail1

ಸಿಂಗಾಪುರ, ಅ.10: ಸಾಮಾಜಿಕ ಜಾಲತಾಣದಲ್ಲಿ ಭೇಟಿಯಾದ ಗೆಳೆಯನೋರ್ವನಿಗಾಗಿ ಕದ್ದ ಹಣವನ್ನು ಸ್ವೀಕರಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಸಿಂಗಾಪುರದಲ್ಲಿರುವ ಭಾರತೀಯ ಮೂಲದ 50ರ ಹರೆಯದ ಮಹಿಳೆಯೋರ್ವಳು 26 ತಿಂಗಳ ಅವಧಿಯ ಜೈಲುಶಿಕ್ಷೆಗೆ ಒಳಗಾಗಿರುವುದಾಗಿ ವರದಿಯೊಂದು ತಿಳಿಸಿದೆ.

ಸಿಂಗಾಪುರದ ಕಂಪೆನಿಯೊಂದರಲ್ಲಿ ಆಡಳಿತ ಸಮನ್ವಯಾಧಿಕಾರಿ ಹಾಗೂ ಸ್ವಾಗತಕಾರಿಣಿಯಾಗಿರುವ ಭಾರತೀಯ ಮೂಲದ ಮಹಿಳೆ ಸನಿಯಾ ಕುಮಾರಿ ತನ್ನ ವಿರುದ್ಧದ 13 ಪ್ರಕರಣಗಳಲ್ಲಿ ಆರಕ್ಕೆ ಸಂಬಂಧಿಸಿ ತಪ್ಪೊಪ್ಪಿಕೊಂಡಿರುವುದಾಗಿ ವರದಿ ತಿಳಿಸಿದೆ.

ಜಾಲತಾಣದ ತನ್ನ ಗೆಳೆಯನಿಗಾಗಿ ಮಹಿಳೆಯು ಸುಮಾರು 2,98,000 ಸಿಂಗಾಪುರ ಡಾಲರ್ ಅಕ್ರಮ ಹಣವನ್ನು ಸ್ವೀಕರಿಸಿದ್ದಳು. 2012ರ ಸೆಪ್ಟಂಬರ್‌ನಲ್ಲಿ ಮಹಿಳೆಯು ಸಾಮಾಜಿಕ ಜಾಲತಾಣವೊಂದರಲ್ಲಿ ಸ್ವೀವ್ ಸ್ಮಿತ್ ಎಂದು ಹೆಸರಿಸಿಕೊಂಡಿದ್ದ ವ್ಯಕ್ತಿಯೋರ್ವನೊಂದಿಗೆ ಸ್ನೇಹ ಬೆಳೆಸಿರುವುದು ಬುಧವಾರ ನಡೆದ ವಿಚಾರಣೆಯ ವೇಳೆ ಬಹಿರಂಗಗೊಂಡಿತ್ತು.

ನಿರ್ಮಾಣ ಕಾಮಗಾರಿಯ ನಿಮಿತ್ತ ಮಲೇಶ್ಯದಲ್ಲಿ ತಂಗಿರುವ ಓರ್ವ ಅಮೆರಿಕನ್ ತಾನೆಂದು ಸ್ಮಿತ್ ಹೇಳಿಕೊಂಡಿದ್ದನೆನ್ನಲಾಗಿದೆ.

ಕೇವಲ ಆನ್‌ಲೈನ್‌ನಲ್ಲಿ ಪರಿಚಯವಾದ ಸ್ಟೀವ್ ಸ್ಮಿತ್‌ನೊಂದಿಗೆ ಆತನಿಗಾಗಿ ತನ್ನ ಬ್ಯಾಂಕ್ ಖಾತೆಯ ಮೂಲಕ ಹಣ ಸ್ವೀಕರಿಸಲು ಹಾಗೂ ಅದನ್ನು ಸಿಂಗಾಪುರದಲ್ಲಿರುವ ಅಜ್ಞಾತ ವ್ಯಕ್ತಿಯೋರ್ವನಿಗೆ ವರ್ಗಾಯಿಸಲು ಮಹಿಳೆ ಒಪ್ಪಿಕೊಂಡಿದ್ದಳು ಎಂದು ‘ದ ಸ್ಟ್ರೈಟ್ಸ್ ಟೈಮ್ಸ್’ ವರದಿ ಮಾಡಿದೆ.

ಸಿಂಗಾಪುರದಲ್ಲಿ ತನಗೊಂದು ಬ್ಯಾಂಕ್ ಖಾತೆಯ ಅಗತ್ಯವಿದ್ದು, ಆಕೆಯ ಸಹಾಯ ಅಪೇಕ್ಷಿಸುವುದಾಗಿ ಸ್ಮಿತ್ ಹೇಳಿಕೊಂಡಿದ್ದನು. ಬೃಹತ್ ಮೊತ್ತವನ್ನು ಕಮಿಶನ್ ಆಧಾರದಲ್ಲಿ ತನ್ನ ಖಾತೆಯಲ್ಲಿ ಇರಿಸಲು ಹಾಗೂ ವರ್ಗಾಯಿಸಲು ಕುಮಾರಿ ಒಪ್ಪಿಕೊಂಡಿದ್ದಳು ಎಂದು ವರದಿ ವಿವರಿಸಿದೆ.

Write A Comment