
ಇಸ್ಲಾಮಾಬಾದ್, ಅ. 9: ಕಾಶ್ಮೀರ ಗಡಿಯಲ್ಲಿ ಭಾರತ ಮತ್ತು ಪಾಕಿಸ್ತಾನಿ ಪಡೆಗಳ ನಡುವೆ ನಡೆಯುತ್ತಿರುವ ಕಾಳಗದ ಹಿನ್ನೆಲೆಯಲ್ಲಿ ಉದ್ಭವಿಸಿರುವ ಪರಿಸ್ಥಿತಿಯನ್ನು ಅವಲೋಕಿಸುವುದಕ್ಕಾಗಿ ಪಾಕಿಸ್ತಾನದ ಪ್ರಧಾನಿ ನವಾಝ್ ಶರೀಫ್ ನಾಳೆ ಉನ್ನತ ಸೇನಾ ನಾಯಕರನ್ನು ಭೇಟಿಯಾಗಲಿದ್ದಾರೆ.
ದಶಕಕ್ಕೂ ಹೆಚ್ಚಿನ ಅವಧಿಯಲ್ಲಿ ನಡೆದ ಅತ್ಯಂತ ಭೀಕರ ಕಾಳಗದಲ್ಲಿ ಉಭಯ ಕಡೆಗಳಲ್ಲಿ ಈಗಾಗಲೇ ಒಟ್ಟು 17 ಮಂದಿ ಮೃತಪಟ್ಟಿದ್ದಾರೆ ಹಾಗೂ ಅಸಂಖ್ಯಾತ ಮಂದಿ ಗಾಯಗೊಂಡಿದ್ದಾರೆ. ಇವುಗಳ ಪೈಕಿ ಎಂಟು ಸಾವುಗಳು ಭಾರತದಲ್ಲಿ ಸಂಭವಿಸಿದರೆ, ಭಾರತ ನಡೆಸಿದ ದಾಳಿಯಲ್ಲಿ ಪಾಕಿಸ್ತಾನದಲ್ಲಿ ಒಂಭತ್ತು ಸಾವು ಸಂಭವಿಸಿದೆ.
‘‘ಎರಡು ಪರಮಾಣು ಶಕ್ತ ದೇಶಗಳ ನಡುವಿನ ಗಡಿ ಉದ್ವಿಗ್ನತೆಯನ್ನು ಸಂಘರ್ಷವಾಗಿ ಪರಿವರ್ತಿಸಲು ನಾವು ಬಯಸುವುದಿಲ್ಲ’’ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಇಂದು ಹೇಳಿದರು. ಆದರೆ, ‘‘ಭಾರತದ ಯಾವುದೇ ಆಕ್ರಮಣವನ್ನು ಎದುರಿಸಲು ಪಾಕಿಸ್ತಾನ ಸಮರ್ಥವಾಗಿದೆ’’ ಎಂಬುದಾಗಿ ಅವರ ಸಚಿವಾಲಯ ಬಿಡುಗಡೆ ಮಾಡಿದ ಹೇಳಿಕೆಯೊಂದು ತಿಳಿಸಿದೆ.
ಇಂದು ಬೆಳಗ್ಗೆ ರಕ್ಷಣಾ ಸಚಿವ ಅರುಣ್ ಜೇಟ್ಲಿ ನೀಡಿದ ಎಚ್ಚರಿಕೆಯ ಬಳಿಕ ಅವರ ಹೇಳಿಕೆ ಹೊರಬಿದ್ದಿದೆ. ‘‘ಪಾಕಿಸ್ತಾನ ತನ್ನ ದುಸ್ಸಾಹಸವನ್ನು ಮುಂದುವರಿಸಿದರೆ ನಮ್ಮ ಪಡೆಗಳು ಯುದ್ಧವನ್ನು ಮುಂದುವರಿಸುವುದು. ಈ ದುಸ್ಸಾಹಸದ ಬೆಲೆ ಅಗಾಧವಾಗಿರುತ್ತದೆ’’ ಎಂದು ತನ್ನ ಹೇಳಿಕೆಯಲ್ಲಿ ಜೇಟ್ಲಿ ಹೇಳಿದ್ದರು.
ಸಶಸ್ತ್ರ ಪಡೆಗಳ ಮುಖ್ಯಸ್ಥರು ಹಾಗೂ ವಿದೇಶ, ರಕ್ಷಣೆ ಮತ್ತು ಗೃಹ ಸಚಿವರನ್ನೊಳಗೊಂಡ ರಾಷ್ಟ್ರೀಯ ಭದ್ರತಾ ಸಮಿತಿಯ ಸಭೆಯನ್ನು ಶರೀಫ್ ಕರೆದಿದ್ದಾರೆ.
ಗಡಿ ಪರಿಸ್ಥಿತಿ: ಶರೀಫ್ ವೌನ ಪ್ರಶ್ನಿಸಿದ ಇಮ್ರಾನ್
ಇಸ್ಲಾಮಾಬಾದ್, ಅ. 9: ಗಡಿ ನಿಯಂತ್ರಣ ರೇಖೆಯಲ್ಲಿ ನೆಲೆಸಿರುವ ಪರಿಸ್ಥಿತಿಯನ್ನು ನಿಭಾಯಿಸಲು ಪಾಕಿಸ್ತಾನಕ್ಕೆ ಪ್ರಧಾನಿ ನವಾಝ್ ಶರೀಫ್‌ಗಿಂತ ಉತ್ತಮ ನಾಯಕನ ಅಗತ್ಯವಿದೆ ಎಂದು ಆ ದೇಶದ ಪ್ರತಿಪಕ್ಷ ನಾಯಕ ಇಮ್ರಾನ್ ಖಾನ್ ಹೇಳಿದ್ದಾರೆ.
‘‘ಈಗಿನ ಸನ್ನಿವೇಶದಲ್ಲಿ ದೇಶ ನಾಯಕನೊಬ್ಬನನ್ನು ಎದುರು ನೋಡುತ್ತಿದೆ. ಆದರೆ, ನೀವು ಎಲ್ಲಿದ್ದೀರಿ, ನವಾಝ್ ಶರೀಫ್? ನೀವು ಯಾಕೆ ವೌನವಾಗಿದ್ದೀರಿ?’’ ಎಂದು ಪಾಕಿಸ್ತಾನ ತೆಹ್ರೀಕಿ ಇನ್ಸಾಫ್ ಪಕ್ಷದ ಮುಖ್ಯಸ್ಥ ಖಾನ್ ಪ್ರಶ್ನಿಸಿದ್ದಾರೆ. ಶರೀಫ್ ತನ್ನ ಉದ್ಯಮ ಹಿತಾಸಕ್ತಿಯನ್ನು ರಕ್ಷಿಸಿಕೊಳ್ಳುವುದಕ್ಕಾಗಿ ಗಡಿ ಪರಿಸ್ಥಿತಿ ಬಗ್ಗೆ ವೌನವಾಗಿದ್ದಾರೆ ಎಂದು ಮಾಜಿ ಕ್ರಿಕೆಟಿಗನೂ ಆಗಿರುವ ಖಾನ್ ಆರೋಪಿಸಿದರು.
ನೆರೆ ದೇಶಗಳೊಂದಿಗೆ ಸ್ನೇಹ ಸಂಬಂಧವನ್ನು ಹೊಂದಬೇಕೆಂದು ತಾನು ಬಯಸುತ್ತೇನೆ ಎಂದು ಹೇಳಿದ ಅವರು, ಆದರೆ ಆಕ್ರಮಣ ಮಾಡಲು ಯಾರಿಗೂ ಅವಕಾಶ ನೀಡಲಾಗದು ಎಂದಿದ್ದಾರೆ.
ನಿನ್ನೆ ರಾತ್ರಿ ಸಂಸತ್ತಿನ ಎದುರುಗಡೆ ತನ್ನ ಬೆಂಬಲಿಗರನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. ಕಳೆದ ವರ್ಷ ನಡೆದ ಚುನಾವಣೆಯಲ್ಲಿ ಶರೀಫ್ ವಂಚನೆ ನಡೆಸಿದ್ದಾರೆ ಎಂದು ಇಮ್ರಾನ್ ಖಾನ್ ಪಕ್ಷ ಆರೋಪಿಸಿದೆ ಹಾಗೂ ಪ್ರಧಾನಿ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಪಕ್ಷದ ಕಾರ್ಯಕರ್ತರು ಆಗಸ್ಟ್ ತಿಂಗಳಿನಿಂದ ಸಂಸತ್ತಿನ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ.