ಅಂತರಾಷ್ಟ್ರೀಯ

ವಿಶ್ವಸಂಸ್ಥೆ ತ್ವರಿತ ಸುಧಾರಣೆಗೆ ಮೋದಿ ಆಗ್ರಹ

Pinterest LinkedIn Tumblr

modi2_0

ವಿಶ್ವಸಂಸ್ಥೆ, ಸೆ.28: ಮುಂದಿನ ವರ್ಷ ವಿಶ್ವಸಂಸ್ಥೆ ತನ್ನ 70ನೆ ವಾರ್ಷಿಕೋತ್ಸವವನ್ನು ಆಚರಿಸುವುದಕ್ಕೆ ಮುನ್ನ ಈ ಜಾಗತಿಕ ಸಂಸ್ಥೆಯಲ್ಲಿ ಅದರಲ್ಲೂ ವಿಶೇಷವಾಗಿ ಭದ್ರತಾ ಮಂಡಳಿಯಲ್ಲಿ ಭಾರೀ ಸುಧಾರಣೆಗಳನ್ನು ಮಾಡುವ ಅಗತ್ಯವಿದೆಯೆಂದು ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವಸಂಸ್ಥೆ ವರಿಷ್ಠ ಬಾನ್‌ಕಿ ಮೂನ್‌ರನ್ನು ಬಲವಾಗಿ ಆಗ್ರಹಿಸಿದ್ದಾರೆ.

ವಿಶ್ವಸಂಸ್ಥೆಯ ಭದ್ರತಾಮಂಡಳಿಯಲ್ಲಿ ತನ್ನ ಚೊಚ್ಚಲ ಭಾಷಣ ಮಾಡುವ ಮುನ್ನ ಮೋದಿ, ಬಾನ್ ಕಿ ಮೂನ್‌ರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಸಂದರ್ಭದಲ್ಲಿ ಈ ಬೇಡಿಕೆಯನ್ನು ಮಂಡಿಸಿದರೆಂದು ಮೂಲಗಳು ತಿಳಿಸಿವೆ. ಮಾತುಕತೆಯ ವೇಳೆ ಉಭಯ ನಾಯಕರೂ ಪ್ರಾದೇಶಿಕ ಸಮಸ್ಯೆಗಳು ಹಾಗೂ ಹವಾಮಾನ ಬದಲಾವಣೆ ಬಗ್ಗೆಯೂ ಚರ್ಚಿಸಿದರೆಂದು ತಿಳಿದುಬಂದಿದೆ.

ವಿಶ್ವಸಂಸ್ಥೆಯಲ್ಲಿ ತ್ವರಿತವಾದ ಸುಧಾರಣೆಗಳು ಸೇರಿದಂತೆ ಪ್ರಚಲಿತ ವಿಷಯಗಳ ಬಗ್ಗೆ ಉಭಯ ನಾಯಕರು ಚರ್ಚಿಸಿದರೆಂದು ವಿದೇಶಾಂಗ ವ್ಯವಹಾರ ಸಚಿವಾಲಯದ ವಕ್ತಾರ ಸೈಯದ್ ಅಕ್ಬರುದ್ದೀನ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಗೆ ಸದಸ್ಯ ರಾಷ್ಟ್ರಗಳು ಹೆಚ್ಚಿನ ಸಂಖ್ಯೆಯಲ್ಲಿ ಸೈನಿಕರನ್ನು ಒದಗಿಸುವ ಆವಶ್ಯಕತೆಯ ಬಗೆಗೂ ಸಮಾಲೋಚನೆ ನಡೆಸಲಾಯಿತೆಂದು ಅವರು ಹೇಳಿದ್ದಾರೆ.ಹದಿನೈದು ಸದಸ್ಯ ಬಲದ ಭದ್ರತಾ ಮಂಡಳಿಯನ್ನು ಇನ್ನೂ ಹೆಚ್ಚು ಪ್ರಜಾತಾಂತ್ರಿಕ ಹಾಗೂ ಭಾಗಿದಾರ ಸಂಸ್ಥೆಯಾಗಿ ಮಾಡುವ ಉದ್ದೇಶದಿಂದ 2015ರೊಳಗೆ ಅದರಲ್ಲಿ ಬಲವಾದ ಸುಧಾರಣೆಗಳನ್ನು ಮಾಡಬೇಕೆಂದು ಮೋದಿ ವಿಶ್ವಸಂಸ್ಥೆಯಲ್ಲಿ ಮಾಡಿದ ಭಾಷಣದಲ್ಲಿ ಆಗ್ರಹಿಸಿದ್ದರು.

ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯ ಕಾರ್ಯಾಚರಣೆಗಳಲ್ಲಿ ಭಾರತದ ಗಣನೀಯ ಕೊಡುಗೆಗಾಗಿ ಬಾನ್ ಕಿ ಮೂನ್, ಮೋದಿಗೆ ಕೃತಜ್ಞತೆ ವ್ಯಕ್ತಪಡಿಸಿದರೆಂದು ಅವರು ಹೇಳಿದರು. ಹವಾಮಾನ ಬದಲಾವಣೆಯಂತಹ ಜಾಗತಿಕ ಮಟ್ಟದ ಸವಾಲನ್ನು ಎದುರಿಸುವ ಬಗ್ಗೆಯೂ ಉಭಯ ನಾಯಕರು ಚರ್ಚಿಸಿದರೆಂದು ಬಾನ್ ಕಿ ಮೂನ್ ಅವರ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ನ್ಯೂಯಾರ್ಕ್ ಸಂಸ್ಥಾನದ ಕಾನೂನು ಪ್ರಕಾರ ಸಮನ್ಸ್ ಜಾರಿಗೊಂಡಿರುವ ವ್ಯಕ್ತಿಗೆ ಆತ ಉಪಸ್ಥಿತನಿರುವ ಸ್ಥಳಕ್ಕೆ ಅತಿ ಸನಿಹದಿಂದ ಸಮನ್ಸ್ ಪ್ರತಿಯನ್ನು ಎಸೆದರೆ ಅಥವಾ ಆತನ ಕಾಲಬುಡದಲ್ಲಿ ಇಲ್ಲವೇ ಆತನ ಕೈಗೆ ನೀಡಿದರೆ ಆತನಿಗೆ ಸಮನ್ಸ್ ತಲುಪಿತೆಂದು ಪರಿಗಣಿಸಲಾಗುವುದೆಂದು ಮೂಲಗಳು ತಿಳಿಸಿವೆ.

ಪ್ರಧಾನಿಯ ಜೊತೆಗಿನ ಅನಿವಾಸಿ ಭಾರತೀಯರ ನಿಗದಿತ ಸಮಾವೇಶದ ಸಂದರ್ಭದಲ್ಲಿ ಅನಿವಾಸಿ ಭಾರತೀಯರೊಬ್ಬರ ಮೂಲಕ ಈ ಸಮನ್ಸ್‌ನ್ನು ಮೋದಿಗೆ ಹಸ್ತಾಂತರಿಸುವಲ್ಲಿ ಸಂಘಟನೆಯು ಯಶಸ್ವಿಯಾದಲ್ಲಿ, ವಿಷಯವು ಜಟಿಲಗೊಳ್ಳುವ ಸಾಧ್ಯತೆಯಿದೆಯೆಂದು ಮೂಲಗಳು ಹೇಳಿವೆ.

ಸೆಂಟ್ರಲ್ ಪಾರ್ಕ್‌ನಲ್ಲಿ ಯುವಜನರನ್ನುದ್ದೇಶಿಸಿ ಭಾಷಣ
ವಿಶ್ವಶಾಂತಿಗೆ ಕರೆ ನ್ಯೂಯಾರ್ಕ್, ಸೆ.28: ವಿಶ್ವಸಂಸ್ಥೆಯ ಮಹಾಧಿವೇಶನವನ್ನುದ್ದೇಶಿಸಿ ಶನಿವಾರ ಪ್ರಬಲ ಭಾಷಣ ನೀಡಿದ ಬೆನ್ನಲ್ಲೇ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ನ್ಯೂಯಾರ್ಕ್‌ನ ಸೆಂಟ್ರಲ್ ಪಾರ್ಕ್‌ನಲ್ಲಿ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ಭಾರೀ ಸಂಖ್ಯೆಯಲ್ಲಿ ನೆರೆದಿದ್ದ ಯುವಜನರನ್ನು ಉದ್ದೇಶಿಸಿ ಭಾಷಣ ಮಾಡಿದರು.

ಸೆಂಟ್ರಲ್ ಪಾರ್ಕ್‌ನ ರಾಕ್ ಕನ್ಸರ್ಟ್‌ನಲ್ಲಿ ಭಾಷಣ ಮಾಡಿದ ಮೋದಿಯವರು ಭಾರತ ಹಾಗೂ ಜಗತ್ತನ್ನು ಪರಿವರ್ತಿಸಲು ‘ಮಾಡಬಹುದು’ ಎಂಬ ಮನೋಭಾವವನ್ನು ಯುವಜನರಲ್ಲಿ ತುಂಬಿದರು.

ಸುಮಾರು ಏಳು ನಿಮಿಷಗಳ ಕಾಲ ಇಂಗ್ಲಿಷ್‌ನಲ್ಲಿ ಮಾತನಾಡಿದ ಮೋದಿಯವರು ಬಳಿಕ ವಿಶ್ವಶಾಂತಿಯ ಸಂಸ್ಕೃತ ಸೂಕ್ತಿಯನ್ನು ಪಠಿಸಿದರಲ್ಲದೆ, ಜನರ ಭಾರೀ ಹರ್ಷೋದ್ಗಾರ ಹಾಗೂ ಕರತಾಡನಗಳ ಮಧ್ಯೆ ಬೃಹತ್ ಅಮೆರಿಕನ್ ಸಮುದಾಯಕ್ಕೆ ‘ನಮಸ್ತೆ’ ಎಂದು ಹೇಳಿದರು.

ವಿವಿಧ ಕಲಾವಿದರಿಂದ ಏರ್ಪಡಿಸಲಾಗಿದ್ದ ಪ್ರದರ್ಶನಗಳ ಬಳಿಕ ಮೋದಿಯವರನ್ನು ನಟ ಹಗ್ ಜ್ಯಾಕ್‌ಮನ್ ಪರಿಚಯಿಸಿದರು. ‘ಚಹಾ ಮಾರಾಟಗಾರ’ನಾಗಿ ವೃತ್ತಿ ಆರಂಭಿಸಿದ್ದ ವ್ಯಕ್ತಿಯೊಬ್ಬರು ಗುಜರಾತ್‌ನ ಮುಖ್ಯಮಂತ್ರಿಯಾಗಿ ಮತ್ತು ಈಗ ಭಾರತದ ಪ್ರಧಾನಿಯಾಗಿದ್ದಾರೆ ಎಂದು ಬಣ್ಣಿಸಿದರು.

ಅಂತಾರಾಷ್ಟ್ರೀಯ ಯೋಗ ದಿನಕ್ಕೆ ಕರೆ
ನ್ಯೂಯಾರ್ಕ್, ಸೆ.28: ವಿಶ್ವಸಂಸ್ಥೆಯ ಮಹಾಧಿವೇಶನವನ್ನು ಉದ್ದೇಶಿಸಿ ಶನಿವಾರ ಮಾತನಾಡಿರುವ ಭಾರತದ ಪ್ರಧಾನಿ ಮೋದಿಯವರು ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲು ಕರೆ ನೀಡಿದ್ದಾರೆ. ಪುರಾತನ ವಿಜ್ಞಾನವಾದ ಯೋಗವು ಜಗತ್ತಿಗೆ ಭಾರತದ ಕೊಡುಗೆಯಾಗಿದೆ ಎಂದು ಹೇಳಿದ್ದಾರೆ.

ಹವಾಮಾನ ಬದಲಾವಣೆ ಹಾಗೂ ಕೆಲವು ವಿಷಯಗಳಿಗೆ ಸಂಬಂಧಿಸಿ ಮೂಲಕ್ಕೆ ಹಿಂದಿರುಗುವ ಬಗ್ಗೆ ಮಹಾಧಿವೇಶನದಲ್ಲಿ ಮಾತನಾಡಿದ ವೇಳೆ ಮೋದಿಯವರು ಅನಿರೀಕ್ಷಿತವಾಗಿ ಯೋಗದ ವಿಷಯವನ್ನು ಪ್ರಸ್ತಾಪಿಸಿದರು.
ಯೋಗವು ಕೇವಲ ದೈಹಿಕ ಕ್ಷಮತೆ ಅಥವಾ ವ್ಯಾಯಾಮವಲ್ಲ. ಅದು ಓರ್ವ ವ್ಯಕ್ತಿಯ ಜೀವನಶೈಲಿಯನ್ನು ಬದಲಿಸಬಲ್ಲದು ಎಂದವರು ಹೇಳಿದ್ದಾರೆ.

ಇಂದಿನ ದಿನಗಳಲ್ಲಿ ಯೋಗವು ಅಮೆರಿಕದಲ್ಲಿ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದು, ಅದೊಂದು ಬಹುಕೋಟಿ ಡಾಲರ್ ಉದ್ಯಮವಾಗಿ ಬೆಳೆಯುತ್ತಿದೆಯಾದರೂ ಭಾರತ ದೊಂದಿಗಿನ ಅದರ ನಂಟನ್ನು ಬಹುತೇಕ ಕಡೆಗಣಿಸಲಾಗುತ್ತಿದೆ ಎಂದವರು ಹೇಳಿದ್ದಾರೆ. ಜಗತ್ತಿನ ಕೆಲವು ರಾಷ್ಟ್ರಗಳು 2007ರಿಂದಲೂ ವಿಶ್ವ ಯೋಗ ದಿನವನ್ನು ಆಚರಿಸುತ್ತಿದೆಯಾದರೂ ಅದಕ್ಕೆ ಯಾವುದೇ ಅಧಿಕೃತ ಮಾನ್ಯತೆ ದೊರೆತಿಲ್ಲ.

ಮೋದಿ-ನೆತನ್ಯಾಹು ಭೇಟಿ
ನ್ಯೂಯಾರ್ಕ್, ಸೆ.28: ರಕ್ಷಣೆ ಹಾಗೂ ವ್ಯಾಪಾರ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ವ್ಯಾಪಕ ದ್ವಿಪಕ್ಷೀಯ ಬಾಂಧವ್ಯವನ್ನು ವಿಸ್ತರಿಸುವ ಮಾರ್ಗೋಪಾಯಗಳ ಬಗ್ಗೆ ಚರ್ಚಿಸಲು ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಇಸ್ರೇಲ್‌ನ ಅವರ ಸೋದ್ಯೋಗಿ ಬೆಂಜಮಿನ್ ನೆತನ್ಯಾಹು ಭೇಟಿ ರವಿವಾರ ನಿಗದಿಗೊಂಡಿದೆ.

‘‘ಭಾರತದೊಂದಿಗಿನ ಸಂಬಂಧಗಳಿಗೆ ನಾವು ಹೆಚ್ಚಿನ ಮಹತ್ವ ನೀಡುತ್ತೇವೆ ಮತ್ತು ಈ ಭೇಟಿಯು ಅತ್ಯಂತ ಪ್ರಮುಖವಾಗಿದೆ’’ ಎಂದು ಇಸ್ರೇಲ್ ಸರಕಾರದ ಮೂಲವೊಂದು ತಿಳಿಸಿದೆ.

ಅಮೆರಿಕದಲ್ಲಿರುವ ಯಹೂದಿ ಗುಂಪನ್ನು ಮೋದಿಯವರು ಭೇಟಿಯಾಗುವ ಕಾರ್ಯಕ್ರಮವಿದೆ. ಭಾರತದ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಮುಂದಿನ ವಾರ ನ್ಯೂಯಾರ್ಕ್‌ನಲ್ಲಿ ಇಸ್ರೇಲ್‌ನ ತನ್ನ ಸೋದ್ಯೋಗಿ ಅವಿಗ್ದೊರ್ ಲೀಬರ್‌ಮನ್‌ರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.

Write A Comment