ಅಂತರಾಷ್ಟ್ರೀಯ

ಅಮೆರಿಕದಲ್ಲಿ ಕಾವು ಪಡೆದುಕೊಂಡ ಮೋದಿ ವಿರೋಧಿ ಪ್ರತಿಭಟನೆ

Pinterest LinkedIn Tumblr

modi4_0

ನ್ಯೂಯಾರ್ಕ್,ಸೆ.28: ಅಮೆರಿಕ ಪ್ರವಾಸದಲ್ಲಿರುವ ನರೇಂದ್ರ ಮೋದಿಗೆ ನಗರದ ಮ್ಯಾಡಿಸನ್ ಸ್ಕ್ವಾರ್ ಉದ್ಯಾನವನದಲ್ಲಿ ಅನಿವಾಸಿ ಭಾರತೀಯರು ಭವ್ಯವಾದ ಸ್ವಾಗತವನ್ನು ನೀಡಲು ಭರ್ಜರಿ ಸಿದ್ಧತೆ ನಡೆಯುತ್ತಿರುವಂತೆಯೇ, ಅದೇ ಸ್ಥಳದಲ್ಲಿ ವಿವಿಧ ಮಾನವಹಕ್ಕು ಸಂಘಟನೆಗಳು ಪ್ರಧಾನಿ ವಿರುದ್ಧ ಬೃಹತ್ ಪ್ರತಿಭಟನಾ ರ್ಯಾಲಿಗಳನ್ನು ಆಯೋಜಿಸಿರುವುದು ಭಾರೀ ಕುತೂಹಲವನ್ನು ಕೆರಳಿಸಿದೆ.

ನ್ಯಾಯ ಹಾಗೂ ಉತ್ತರದಾಯಿತ್ವ ಕುರಿತ ಒಕ್ಕೂಟದಡಿಯಲ್ಲಿ ವಿವಿಧ ಮಾನವಹಕ್ಕು ಸಂಘಟನೆಗಳು ಸೆ.28ರಂದು ಮೋದಿ ಭಾಷಣ ಮಾಡಲಿರುವ ಮ್ಯಾಡಿಸನ್ ಸ್ಕ್ವೇರ್‌ನಲ್ಲಿ ಪ್ರತಿಭಟನಾ ಪ್ರದರ್ಶನವನ್ನು ಹಮ್ಮಿಕೊಂಡಿವೆ. ನರೇಂದ್ರ ಮೋದಿ ಮುಖ್ಯಮಂತ್ರಿಯಾಗಿದ್ದಾಗ ಅವರು 2002ರ ಗುಜರಾತ್ ಗಲಭೆಯ ವೇಳೆ ನಡೆದ ಮುಸ್ಲಿಮರ ನರಮೇಧವನ್ನು ತಡೆಗಟ್ಟದಿದ್ದುದನ್ನು ಪ್ರತಿಭಟಿಸಿ ಅವರು ಮೋದಿ ವಿರುದ್ಧ ಪ್ರತಿಭಟನೆಗೆ ಸಜ್ಜಾಗಿವೆ.

ಏತನ್ಮಧ್ಯೆ ಗುಜರಾತ್ ಗಲಭೆಯಲ್ಲಿ ಪಾತ್ರ ವಹಿಸಿದ್ದರೆಂಬ ಆರೋಪದಲ್ಲಿ ಮೋದಿ ವಿರುದ್ಧ ವಾಷಿಂಗ್ಟನ್‌ನ ‘ಪೌರ ನ್ಯಾಯಾಲಯ’ವೊಂದು ಜಾರಿಗೊಳಿಸಿರುವ ದೋಷಾರೋಪ ಪತ್ರವನ್ನು, ಭಾರತೀಯ ರಾಯಭಾರ ಕಚೇರಿಗೆ ಹಸ್ತಾಂತರಿಸಲಾಗಿದೆಯೆಂದು ತಿಳಿದುಬಂದಿದೆ. ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಸೆ.30ರಂದು ಮೋದಿಗೆ ಶ್ವೇತಭವನದ ಆವರಣದಲ್ಲಿ ಕೆಂಪುಗಂಬಳಿಯ ಸ್ವಾಗತ ನೀಡಲಿರುವ ಸಂದರ್ಭದಲ್ಲಿಯೇ, ಅಲ್ಲಿಗೆ ತೀರಾ ಸನಿಹದಲ್ಲಿರುವ ಲಾಫಾಯೆಟ್ ಪಾರ್ಕ್‌ನಲ್ಲಿ ಪೌರ ನ್ಯಾಯಾಲಯವೊಂದು ಭಾರತದ ಪ್ರಧಾನಿ ವಿರುದ್ಧ ದೋಷಾರೋಪಣ ಕಲಾಪಗಳನ್ನು ನಡೆಸಲಿದ್ದು, ಅದನ್ನು ಅಮೆರಿಕಾದ್ಯಂತ ಟಿವಿ ವಾಹಿನಿಗಳಲ್ಲಿ ನೇರಪ್ರಸಾರ ಮಾಡಲಾಗುವುದೆಂದು ನ್ಯಾಯಕ್ಕಾಗಿ ಸಿಖ್ಖರು (ಎಸ್‌ಎಫ್‌ಜೆ) ಎಂಬ ಮಾನವಹಕ್ಕು ಸಂಘಟನೆಯೊಂದು ಘೋಷಿಸಿದೆ.

ಈ ದೋಷಾರೋಪ ಪಟ್ಟಿಯ ಪ್ರತಿಯನ್ನು ಸಮನ್ಸ್ ಸೇವಾದಾರ ಸಂಸ್ಥೆಯೊಂದರ ಮೂಲಕ ಭಾರತೀಯ ರಾಯಭಾರ ಕಚೇರಿಗೆ ಹಸ್ತಾಂತರಿಸಲಾಗಿದೆಯೆಂದು ತಿಳಿದುಬಂದಿದೆ. ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿಯೊಬ್ಬರು, ಈ ದಾಖಲೆಗಳ ಪ್ರತಿಯನ್ನು ಸ್ವೀಕರಿಸಿರುವುದನ್ನು ದೃಢಪಡಿಸುವ ಅಫಿದಾವಿತ್‌ಗೆ ಸಹಿಹಾಕಿದ್ದಾರೆ ಹಾಗೂ ಪತ್ರಕ್ಕೆ ಸಂಬಂಧಪಟ್ಟ ವ್ಯಕ್ತಿಗೆ ಪತ್ರದಲ್ಲಿರುವ ವಿಷಯಗಳನ್ನು ತಿಳಿಸಲಾಗಿದೆಯೆಂದು ಅದು ಹೇಳಿದೆ. ಚಾರ್ಜ್‌ಶೀಟ್‌ನಲ್ಲಿ ಮೋದಿ ವಿರುದ್ಧ ಅಮೆರಿಕದ ಕಾನೂನಿನ ಕೆಲವು ಕಾಯ್ದೆಗಳಡಿ ಆರು ಆರೋಪಗಳನ್ನು ಹೊರಿಸಲಾಗಿದೆಯೆಂದು ಎಸ್‌ಎಫ್‌ಜೆ ತಿಳಿಸಿದೆ.

ಶ್ವೇತಭವನದ ಪ್ರವೇಶದ್ವಾರಕ್ಕಿಂತ ಕೆಲವೇ ಅಡಿಗಳಷ್ಟು ದೂರದಲ್ಲಿ ಮೋದಿ ವಿರುದ್ಧ ಭಾರೀ ಪ್ರತಿಭಟನೆಗಳು ನಡೆಯುವುದನ್ನು ತಪ್ಪಿಸಲು ಒಬಾಮ ಆಡಳಿತವು ಸೂಕ್ತ ಕ್ರಮಗಳನ್ನು ಕೈಗೊಳ್ಳಲಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿ ತಿಳಿದುಬಂದಿಲ್ಲ.ಆದರೆ ಪೌರ ನ್ಯಾಯಾಲಯದ ಕಲಾಪವನ್ನು ಆಯೋಜಿಸಲು ಎಸ್‌ಎಫ್‌ಜೆಗೆ ಅಮೆರಿಕದ ‘ರಾಷ್ಟ್ರೀಯ ಉದ್ಯಾನವನ ಸೇವೆ’ಯು ಅನುಮತಿಯನ್ನು ನೀಡಿದೆಯೆಂದು ತಿಳಿದುಬಂದಿದೆ.

ಏತನ್ಮಧ್ಯೆ ಗುಜರಾತ್ ಗಲಭೆಯಲ್ಲಿ ಪಾತ್ರ ವಹಿಸಿದ್ದರೆಂಬ ಆರೋಪದ ಹಿನ್ನೆಲೆಯಲ್ಲಿ ಮೋದಿ ವಿರುದ್ಧ ಫೆಡರಲ್ ಜಿಲ್ಲಾ ನ್ಯಾಯಾಲಯವು ಜಾರಿಗೊಳಿಸಿದ ಸಮನ್ಸ್‌ನ್ನು ಅವರಿಗೆ ತಲುಪಿಸಿದವರಿಗೆ 10 ಸಾವಿರ ಡಾಲರ್‌ಗಳ ಬಹುಮಾನವನ್ನು ನೀಡುವುದಾಗಿ ಅಮೆರಿಕನ್ ಜಸ್ಟೀಸ್ ಸೆಂಟರ್ ಎಂಬ ಮಾನವ ಹಕ್ಕು ಸಂಘಟನೆ ಘೋಷಿಸಿದೆ.

Write A Comment