
ನ್ಯೂಯಾರ್ಕ್, ಸೆ.28: ‘ನೆರೆಹೊರೆಗೆ ಆದ್ಯತೆ’ ನೀತಿಯನ್ನು ಪುನರುಚ್ಚರಿಸಿರುವ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಭಯೋತ್ಪಾದನೆ ಪಿಡುಗು ಸೇರಿದಂತೆ ಹಲವು ವಿಷಯಗಳ ಬಗ್ಗೆ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಹಾಗೂ ನೇಪಾಳದ ಪ್ರಧಾನಿ ಸುಶೀಲ ಕೊಯ್ರಾಲಾ ಮತ್ತು ಶ್ರೀಲಂಕಾದ ಅಧ್ಯಕ್ಷ ಮಹಿಂದಾ ರಾಜಪಕ್ಸೆಯವರೊಂದಿಗೆ ಸಮಾನ ಹಿತಾಸಕ್ತಿಗಳ ಕುರಿತು ಚರ್ಚೆ ನಡೆಸಿದರು.
ಪ್ರಾದೇಶಿಕ ಬಣವಾಗಿರುವ ದಕ್ಷಿಣ ಏಶ್ಯ ಪ್ರಾದೇಶಿಕ ಸಹಕಾರ ಸಂಘಟನೆ (ಸಾರ್ಕ್) ಸಂಘಟನೆಯನ್ನು ಬಲಪಡಿಸುವ ಬದ್ಧತೆಯನ್ನು ಖಚಿತಪಡಿಸಿರುವುದಾಗಿಯೂ ವರದಿ ತಿಳಿಸಿದೆ.
ಇದೇ ವೇಳೆ ವಿಶ್ವಸಂಸ್ಥೆಯ ಮಹಾಧಿವೇಶನವನ್ನುದ್ದೇಶಿಸಿ ಮಾಡಿರುವ ಭಾಷಣಕ್ಕಾಗಿ ಮೋದಿಯವರನ್ನು ಶ್ರೀಲಂಕಾದ ಅಧ್ಯಕ ಮಹಿಂದಾ ರಾಜಪಕ್ಸೆ, ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಹಾಗೂ ನೇಪಾಳದ ಪ್ರಧಾನಿ ಸುಶೀಲ್ ಕೊಯ್ರಾಲಾ ಅಭಿನಂದಿಸಿದರಲ್ಲದೆ, ಅಂತಾರಾಷ್ಟ್ರೀಯ ಯೋಗ ದಿನ ಆಚರಿಸುವ ಮೋದಿಯವರ ಸಲಹೆಗೆ ಪೂರ್ಣ ಬೆಂಬಲ ಸೂಚಿಸಿದ್ದಾರೆ. ಸಾರ್ಕ್ ರಾಷ್ಟ್ರಗಳ ಸಮೂಹವನ್ನು ಒಂದು ಬಲಿಷ್ಠ ಬಣವನ್ನಾಗಿಸುವ ಬದ್ಧತೆಯನ್ನು ಮೋದಿಯವರು ಇದೇ ವೇಳೆ ಮರುಖಚಿತಪಡಿಸಿದ್ದಾರೆ.


ಅನುಕ್ರಮವಾಗಿ ಸೀತೆ ಹಾಗೂ ಬುದ್ಧನ ಜನ್ಮಸ್ಥಳವೆನಿಸಿರುವ ಜನಕಪುರ ಹಾಗೂ ಲುಂಬಿನಿಗೆ ಭೇಟಿ ನೀಡಲು ಬಯಸಿರುವುದಾಗಿ ಇದೇ ವೇಳೆ ಮೋದಿಯವರು ನೇಪಾಳದ ಪ್ರಧಾನಿಗೆ ತಿಳಿಸಿದ್ದಾರೆ.
ತನ್ನ ನೇಪಾಳ ಪ್ರವಾಸದ ವೇಳೆ ಘೋಷಿಸಿರುವ ದ್ವಿಪಕ್ಷೀಯ ಯೋಜನೆಗಳ ಬಗ್ಗೆಯೂ ಮೋದಿಯವರು ಇದೇ ವೇಳೆ ನೇಪಾಳದ ಪ್ರಧಾನಿಯನ್ನು ವಿಚಾರಿಸಿದರು.
ಮೂರು ರಾಷ್ಟ್ರಗಳ ನಾಯಕರೊಂದಿಗೆ ಮಾತನಾಡಿದ ಮೋದಿಯವರು ಸಾರ್ಕ್ ಸಮೂಹವನ್ನು ಬಲಪಡಿಸುವ ಬದ್ಧತೆ ಹಾಗೂ ಇತರ ಸಮಾನ ಹಿತಾಸಕ್ತಿಗಳ ಬಗ್ಗೆ ಚರ್ಚಿಸಿದರು ಹಾಗೂ ‘ನೆರೆಹೊರೆ ಆದ್ಯತೆ’ ನೀತಿಗೆ ತಾನು ಬದ್ಧವಾಗಿರುವುದಾಗಿ ಪುನರುಚ್ಚರಿಸಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಸೈಯದ್ ಅಕ್ಬರುದ್ದೀನ್ ವಿವರಿಸಿದ್ದಾರೆ.
ಭಾರತದ ಇತ್ತೀಚಿನ ಯಶಸ್ವಿ ಮಂಗಳಯಾನದ ಬಗ್ಗೆ ಅಭಿನಂದನೆ ಸಲ್ಲಿಸಿದ ದಕ್ಷಿಣ ಏಶ್ಯನ್ ನಾಯಕರು, ಈ ಹಿಂದೆ ಮೋದಿಯವರು ಘೋಷಿಸಿದ್ದ ‘ಸಾರ್ಕ್ ಉಪಗ್ರಹ’ ಯೋಜನೆಯಲ್ಲಿ ಪ್ರಗತಿಯನ್ನು ನಿರೀಕ್ಷಿಸುತ್ತಿರುವುದಾಗಿ ತಿಳಿಸಿದ್ದಾರೆ.
‘‘ಮಾತುಕತೆಯು ಸೌಹಾರ್ದ ಹಾಗೂ ಉತ್ತಮವಾಗಿತ್ತು. ನಾವು ವಿವಿಧ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದೇವೆ’’ ಎಂದು ಸುಮಾರು 30 ನಿಮಿಷಗಳ ಕಾಲ ನಡೆದ ಮಾತುಕತೆಯ ಬಳಿಕ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ಮೇ 26ರ ಬಳಿಕ ಉಭಯನಾಯಕರೊಂದಿಗೆ ಮೋದಿಯವರ ಎರಡನೆಯ ಭೇಟಿ ಇದಾಗಿದೆ. ಹೊಸದಿಲ್ಲಿಯಲ್ಲಿ ಮೇ 26ರಂದು ಪ್ರಮಾಣ ವಚನ ಸಮಾರಂಭದ ಬಳಿಕ ಮೋದಿಯವರು ಉಭಯನಾಯಕರನ್ನು ಭೇಟಿಯಾಗುತ್ತಿರು ವುದು ಇದು ಎರಡನೆಯ ಸಲವಾಗಿದೆ.
ಯಾವುದೇ ಸ್ವರೂಪದ ತೀವ್ರಗಾಮಿ ಚಟುವಟಿಕೆಗಳಿಗೆ ತನ್ನ ರಾಷ್ಟ್ರದ ನೆಲದಲ್ಲಿ ಅವಕಾಶ ಕೊಡುವುದಿಲ್ಲ ಹಾಗೂ ಈ ಬಗ್ಗೆ ಭಾರತ ವಿಚಾರ ವಿನಿಮಯ ನಡೆಸಲಿದೆಯೆಂದು ತಾನು ಭಾವಿಸುವುದಾಗಿ ಬಾಂಗ್ಲಾ ದೇಶದ ಪ್ರಧಾನಿ ಶೇಖ್ ಹಸೀನಾ ತಿಳಿಸಿದ್ದಾರೆ.